ಚಿತ್ರದುರ್ಗ: ರಾಜ್ಯ ರಾಜಕಾರಣದ ಧ್ರುವತಾರೆ, ರೈತನಾಯಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ (B.S Yediyurappa) 50 ವರ್ಷಗಳ ಸುದೀರ್ಘ ರಾಜಕೀಯ ಪಯಣದ ಸುವರ್ಣ ಸಂಭ್ರಮಕ್ಕೆ ಕೋಟೆನಾಡು ಚಿತ್ರದುರ್ಗ (Chitradurga) ಸಾಕ್ಷಿಯಾಗುತ್ತಿದೆ. ಮೇ 9 ರಂದು ನಡೆಯಲಿರುವ ಐತಿಹಾಸಿಕ ಅಭಿಮಾನೋತ್ಸವಕ್ಕಾಗಿ (Yediyurappa Abhimanotsava) ಚಿತ್ರದುರ್ಗ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಕೇಸರಿ ಪಡೆ ಹಬ್ಬದ ವಾತಾವರಣ ನಿರ್ಮಿಸಿದೆ.
ಬಿಎಸ್‌ವೈ ಅವರ ಐದು ದಶಕಗಳ ರಾಜಕೀಯ ಹಾದಿಯ ಸಾಧನೆಗಾಗಿ ಬೃಹತ್ ‘ಅಭಿಮಾನೋತ್ಸವ’ ಆಯೋಜಿಸಲಾಗಿದೆ. ನಗರದ ಹೊರವಲಯದಲ್ಲಿ ಜರ್ಮನ್ ಮಾದರಿಯ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಏಳುಸುತ್ತಿನ ಕೋಟೆ ಮಾದರಿಯ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ಸಮಸ್ಯೆ ಆಗದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ಆವರಣ ಕೇಸರಿಮಯವಾಗಿದೆ.
ಅದ್ಧೂರಿ ಪುರಪ್ರವೇಶ
ಇಂದು (ಮೇ 8) ಸಂಜೆ 5 ಗಂಟೆಗೆ ಬಿಎಸ್‌ವೈ ಚಿತ್ರದುರ್ಗ ಪುರ ಪ್ರವೇಶ ಮಾಡಿದರು. ನಗರದ ಕನಕ ವೃತ್ತದಿಂದ ಚಳ್ಳಕೆರೆ ಗೇಟಿನವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ಅಲಂಕೃತ ತೆರೆದ ವಾಹನದಲ್ಲಿ ರಾಜಾಹುಲಿ ಸಾಗಿದರು. ಮಹಿಳೆಯರು ಪೂರ್ಣಕುಂಭ ಹಿಡಿದು ಸ್ವಾಗತಿಸಿದರು. ವಿಶೇಷ ಎಂದರೆ ನಾರಿ ಶಕ್ತಿ ವಂದನ್ ಅಡಿಯಲ್ಲಿ ಮಹಿಳೆಯರು ಒನಕೆ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. 25 ಜನಪದ ಕಲಾಮೇಳಗಳು ಹಾಗೂ ಯಡಿಯೂರಪ್ಪನವರ ಜೀವನ ಕಥನ ಸಾರುವ AI ತಾಂತ್ರಿಕತೆಯ 6 ಸ್ತಬ್ಧ ಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. 25 ಜನಪದ ತಂಡಗಳು, ಕಲಾ ತಂಡಗಳು ಸಹ ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಬಿ.ವೈ. ವಿಜಯೇಂದ್ರ, ಗೋವಿಂದ ಕಾರಜೋಳ ಸೇರಿದಂತೆ ಮಾಜಿ ಸಚಿವರ ದಂಡು ಮೆರವಣಿಗೆಯಲ್ಲಿ ಭಾಗಿಯಾಗಿತ್ತು.

ಅದೃಷ್ಟದ ಅಂಬಾಸಿಡರ್ ಕಾರು
ಬಿಎಸ್‌ವೈ ರಾಜಕೀಯ ಜೀವನದ ಅದೃಷ್ಟದ ಸಂಕೇತವೆಂದು ಪರಿಗಣಿಸಲ್ಪಟ್ಟ 1974ರಲ್ಲಿ ಖರೀದಿಸಲಾದ ಐಕಾನಿಕ್ ಕಾರು ಸಹ ಈ ಮೆರವಣಿಗೆಯಲ್ಲಿತ್ತು. ಅವರ ದೀರ್ಘಕಾಲದ ರಾಜಕೀಯ ಏಳು-ಬೀಳುಗಳಿಗೆ ಸಾಕ್ಷಿ ಈ ಅದೃಷ್ಟದ ಅಂಬಾಸಿಡರ್ ಕಾರು. ರಾಜಕೀಯವಾಗಿ ಅದೃಷ್ಟದ ಸಂಖ್ಯೆಗಳ ಮೇಲೆ ನಂಬಿಕೆ ಹೊಂದಿರುವ ಬಿಎಸ್‌ವೈ ಈ ನೆಚ್ಚಿನ ಕಾರಿನ ಸಂಖ್ಯೆ ‘9’ ಬರುವಂತೆ (ಸಿಕೆಆರ್ 4+5=9) ಇತ್ತು. ನಂತರದ ದಿನಗಳಲ್ಲಿ ತಮ್ಮ ಕುಟುಂಬದ ಎಲ್ಲಾ ವಾಹನಗಳ ನಂಬರ್ 4545 ಇರುವಂತೆ ನೋಡಿಕೊಂಡಿದ್ದಾರೆ. 1980 ಮತ್ತು 90ರ ದಶಕಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ರಾಜ್ಯಾದ್ಯಂತ ಸಂಚರಿಸಲು ಇದೇ ಕಾರನ್ನು ಅವರು ಬಳಸಿದ್ದರು. ಇಂದಿಗೂ ಅತ್ಯಂತ ಕಾಳಜಿಯಿಂದ ಈ ಕಾರನ್ನು ಸಂರಕ್ಷಿಸಿಕೊಂಡು ಬರಲಾಗಿದ್ದು, ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ಮತ್ತು ಪ್ರಚಾರದ ಸಂದರ್ಭದಲ್ಲೂ ಈ ಕಾರಿನಲ್ಲಿ ಪ್ರಯಾಣಿಸಿದ್ದು ವಿಶೇಷ.
ಶನಿವಾರ ನಡೆಯಲಿರುವ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹೀಗಾಗಿ ಕೋಟೆನಾಡು ಚಿತ್ರದುರ್ಗ ಈಗ ಯಡಿಯೂರಪ್ಪನವರ ಅಭಿಮಾನಿಗಳ ಸಮುದ್ರವಾಗಿ ಮಾರ್ಪಟ್ಟಿದೆ. 50 ವರ್ಷಗಳ ರಾಜಕೀಯ ಹೋರಾಟದ ಹಾದಿಯನ್ನ ಮೆಲುಕು ಹಾಕಲು ಇಡೀ ಕೇಸರಿ ಪಡೆ ಸಜ್ಜಾಗಿದೆ.

