ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸುವೇಂದು ಅಧಿಕಾರಿ(Suvendu Adhikari) ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲೇ (Cabinet Meeting) ರಾಜ್ಯದ ಗಡಿ ಭದ್ರತೆಗೆ ಸಂಬಂಧಿಸಿದಂತೆ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ (India -Bangladesh Border) ಬಾಕಿ ಉಳಿದಿರುವ ಬೇಲಿ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಮಿಯನ್ನು ಮುಂದಿನ 45 ದಿನಗಳಲ್ಲಿ ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸುವುದಾಗಿ ಅವರು ಘೋಷಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಗಡಿ ಬೇಲಿ ನಿರ್ಮಾಣವೂ ಒಂದಾಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಈ ಭರವಸೆಯನ್ನು ಈಡೇರಿಸಲು ಮುಂದಾಗಿರುವ ಸರ್ಕಾರ, ಅಕ್ರಮ ನುಸುಳುವಿಕೆ ಮತ್ತು ಕಳ್ಳಸಾಗಣೆಯನ್ನು 100% ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಭೂ ಹಸ್ತಾಂತರ ಪ್ರಕ್ರಿಯೆಯನ್ನು 45 ದಿನಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಏನಾಗಿತ್ತು?
ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ 4,097 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಸುಮಾರು 3,240 ಕಿ.ಮೀ.ಗೆ ಈಗಾಗಲೇ ಬೇಲಿ ಹಾಕಲಾಗಿದೆ. ಈ ಹಿಂದೆ ಭೂಮಿ ಹಸ್ತಾಂತರದಲ್ಲಿ ಉಂಟಾಗಿದ್ದ ವಿಳಂಬದಿಂದಾಗಿ ಗಡಿಯ ಹಲವು ಕಿಲೋಮೀಟರ್‌ಗಳಷ್ಟು ಭಾಗದಲ್ಲಿ ಬೇಲಿ ನಿರ್ಮಾಣ ಕಾರ್ಯ ಬಾಕಿ ಉಳಿದಿತ್ತು. ಪಶ್ಚಿಮ ಬಂಗಾಳದ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 127 ಕಿಲೋಮೀಟರ್‌ಗಳಷ್ಟು ಭಾಗದಲ್ಲಿ ಇನ್ನೂ ತಂತಿ ಬೇಲಿ ನಿರ್ಮಾಣವಾಗಿರಲಿಲ್ಲ.
ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಈ ಭಾಗವು ಮುಕ್ತವಾಗಿಯೇ ಉಳಿದಿತ್ತು, ಇದು ಅಕ್ರಮ ನುಸುಳುವಿಕೆಗೆ ದಾರಿಕಲ್ಪಿಸಿತ್ತು. ಈಗಿನ 105 ಎಕರೆ ಭೂಮಿ ಹಸ್ತಾಂತರದ ನಿರ್ಧಾರವು ಈ 127 ಕಿ.ಮೀ ವ್ಯಾಪ್ತಿಯಲ್ಲಿ ಬೇಲಿ ನಿರ್ಮಿಸಲು ಸಹಕಾರಿಯಾಗಲಿದೆ.
ಒಟ್ಟು 127 ಕಿ.ಮೀ ಬಾಕಿ ಇರುವ ಪ್ರದೇಶದಲ್ಲಿ, ಅತ್ಯಂತ ಸೂಕ್ಷ್ಮವೆಂದು ಗುರುತಿಸಲಾದ ಸುಮಾರು 8 ಕಿಲೋಮೀಟರ್‌ಗಳಷ್ಟು ಜಾಗದಲ್ಲಿ ಆದ್ಯತೆಯ ಮೇಲೆ ಬೇಲಿ ನಿರ್ಮಾಣ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ತ್ರಿಪುರದಲ್ಲಿ ಭದ್ರತಾ ಪಡೆಗಳ ದಾಳಿ – ಬಾಂಗ್ಲಾದ ಇಬ್ಬರು ಸ್ಮಗ್ಲರ್ಸ್ ಬಲಿ
ವಿರೋಧಿಸಿದ್ದ ಮಮತಾ:
ಮಮತಾ ಬ್ಯಾನರ್ಜಿ ನೇತೃತ್ವದ ಹಿಂದಿನ ಸರ್ಕಾರವು ಬಿಎಸ್‌ಎಫ್‌ಗೆ ಭೂಮಿ ನೀಡಲು ಕೆಲವು ಪ್ರಮುಖ ಕಾರಣಗಳಿಂದ ವಿರೋಧ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರವು ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು ಗಡಿಯಿಂದ 15 ಕಿ.ಮೀ ನಿಂದ 50 ಕಿ.ಮೀ ವರೆಗೆ ಹೆಚ್ಚಿಸಿತ್ತು. ಇದನ್ನು ಮಮತಾ ಬ್ಯಾನರ್ಜಿ ಅವರು “ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ” ಎಂದು ಕರೆದಿದ್ದರು ಮತ್ತು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಭೂಮಿ ನೀಡುವುದಿಲ್ಲ ಎಂಬ ನಿಲುವು ತಳೆದಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದು, ಬಿಎಸ್‌ಎಫ್ ವ್ಯಾಪ್ತಿ ಹೆಚ್ಚಳದಿಂದ ರಾಜ್ಯ ಪೊಲೀಸರ ಅಧಿಕಾರ ಮೊಟಕಾಗುತ್ತದೆ ಎಂದು ಅವರು ವಾದಿಸಿದ್ದರು. ಗಡಿ ಭಾಗದ ಜನರನ್ನು ಬಿಎಸ್‌ಎಫ್ ಅಧಿಕಾರಿಗಳು ಪೀಡಿಸುತ್ತಿದ್ದಾರೆ ಮತ್ತು ಮತ ಚಲಾಯಿಸದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ನಾವು ಈಗಾಗಲೇ ರೈಲ್ವೆ ಮತ್ತು ಇತರ ಕೇಂದ್ರ ಸಂಸ್ಥೆಗಳಿಗೆ ಸಾಕಷ್ಟು ಭೂಮಿ ನೀಡಿದ್ದೇವೆ, ಮೊದಲು ಅಲ್ಲಿನ ಕೆಲಸ ಮುಗಿಸಿ, ನಂತರ ಉಳಿದ ಜಾಗ ನೀಡುತ್ತೇವೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದರು.

