ತುಮಕೂರು: ರಾಜ್ಯದ ಈಗಿನ ಸರ್ಕಾರದ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ (BJP-JDS) ಮೈತ್ರಿಯ ಜನಪರವಾದ, ಜನರಿಗೆ ಗೌರವ ತರುವಂತಹ ಸರ್ಕಾರ ತರಲು ರಾಜ್ಯದ ಜನರು ಆಶೀರ್ವಾದ ಮಾಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದರು.
ತುಮಕೂರು ತಾಲೂಕು ಮುಳಕುಂಟೆ ಗ್ರಾಮದಲ್ಲಿ ಮಂಗಳವಾರ ನಡೆದ ವಿಜಯ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ದೇವಸ್ಥಾನದಲ್ಲಿ ದೇವಿಯ ದರ್ಶನ ಮಾಡಿ ಪೂಜೆ ಸಲ್ಲಿಸಿ, ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಈ ಬಾರಿಯ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಗೆಲುವು ದೇಶದ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ. ಈ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ತುರ್ತಾಗಿ ದೆಹಲಿಗೆ ಹೋಗಬೇಕಾಗಿದೆ ಎಂದರು. ಇದನ್ನೂ ಓದಿ: ಸಚಿವ ಜಮೀರ್ ಮನೆಯಲ್ಲಿ 1.20 ಕೆ.ಜಿ ಚಿನ್ನಾಭರಣ ಕಳ್ಳತನ – ಇಬ್ಬರು ಅರೆಸ್ಟ್
ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ವಿ. ಸೋಮಣ್ಣ ಅವರನ್ನು ನೀವೆಲ್ಲಾ ದಾಖಲೆ ಮತಗಳ ಅಂತರದಿಂದ ಗೆಲ್ಲಿಸಿದ ಪರಿಣಾಮ ಅವರು ಹಾಗೂ ತಾವು ಕೇಂದ್ರ ಮಂತ್ರಿಯಾಗಲು ಅವಕಾಶವಾಯಿತು. ಮುಂಬರುವ ಚುನಾವಣೆಗಳಲ್ಲೂ ಇದೇ ರೀತಿಯಲ್ಲಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ರೆ ವಜಾಗೊಳಿಸಿ: ಹಿಮಂತ ಶರ್ಮಾ ಕಿಡಿ
ರಾಜ್ಯದಲ್ಲಿರುವ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದಾರೆ, ಬದಲಾವಣೆ ಬಯಸಿದ್ದಾರೆ. ಜನಪರವಾದ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಮುಂದಿನ ಚುನಾವಣೆಯಲ್ಲಿ ಜನರಿಗೆ ಗೌರವ ತರುವಂತಹ ಜೆಡಿಎಸ್-ಬಿಜೆಪಿಯ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ವಿನಂತಿಸಿದರು. ಇದನ್ನೂ ಓದಿ: ತಮಿಳುನಾಡು ಗೆದ್ದ ಟಿವಿಕೆಗೆ ವಿಶ್ ಮಾಡಿದ ಮೋದಿ, ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸಿದ ವಿಜಯ್

