ನೆಲಮಂಗಲ: ನಗರದ ಮುಖ್ಯರಸ್ತೆ ಸೊಂಡೆಕೊಪ್ಪದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಜನರು ಜಾಸ್ತಿಯಾಗಿದ್ದು, ಪೋಲಿ ಪುಂಡರ ಹಾವಳಿ ಕೂಡ ಜಾಸ್ತಿಯಾಗಿತ್ತು. ಈ ಪರಿಣಾಮ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ನೀಡಿ ವಿದ್ಯಾರ್ಥಿಗಳು ಗಮನ ಸೆಳೆದಿದ್ದರು.
ಈ ಬಗ್ಗೆ ವರದಿ ಮಾಡಿದ್ದ ಪಬ್ಲಿಕ್ ಟಿವಿಯನ್ನು ನೋಡಿದ ಪೊಲೀಸ್ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್ ಹಾಕಿದ್ದಾರೆ. ಇಂದು ಬೆಳಗ್ಗೆ ಕಾರ್ಯಪ್ರವೃತ್ತರಾದ ನಗರಸಭೆ ಆಯುಕ್ತ ಮಂಜುನಾಥ್ ಬೀದಿ ಬದಿಯಲ್ಲಿ ಅಂಗಡಿ ಇಟ್ಟು ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ ಜೊತೆ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಮಾಡದಂತೆ ತಿಳಿಸಿ ಅಂಗಡಿಗಳನ್ನು ತೆರವು ಮಾಡಿದ್ದಾರೆ. ಇದನ್ನೂ ಓದಿ: ಪೋಲಿಪುಂಡರ ಹಾವಳಿ ತಪ್ಪಿಸಿ – ಶಾಸಕರನ್ನು ತಡೆದು ಮನವಿ ನೀಡಿದ ವಿದ್ಯಾರ್ಥಿನಿಯರು
ನಗರಸಭೆ ಅಧಿಕಾರಿಗಳಿಗೆ ಸಾಥ್ ನೀಡಿದ ನೆಲಮಂಗಲ ಟೌನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಮಾರ್, ಪೋಲಿ ಪುಂಡರ ಮೇಲೆ ನಿಗಾ ಇಟ್ಟು ಯಾವುದೇ ತೊಂದರೆ ಆಗದಂತೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಅವಕಾಶ ಮಾಡುವುದಾಗಿ ತಿಳಿಸಿದ್ದು, ಎಲ್ಲದಕ್ಕೂ ಬ್ರೇಕ್ ಹಾಕಿದ್ದಾರೆ.