ಬೆಂಗಳೂರು: ಆ ಕಾಲದಲ್ಲಿ ಲೀಲಾವತಿ (Leelavathi) ಅವರು ನಟ ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಹೇಳಿದರು.
ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಡಾ.ರಾಜ್‌ಕುಮಾರ್, ಉದಯಕುಮಾರ್ ಅವರಿಂದ ಹಿಡಿದು ಅನೇಕರಿಗೆ ಮದ್ರಾಸ್ ಮೂಲಕೇಂದ್ರವಾಗಿತ್ತು. ಮಹಾಬಲಿಪುರದಲ್ಲಿ 10 ಎಕರೆ ಜಾಗ ತೆಗೆದುಕೊ ಅಂತಾ ಆಗ ರಜನಿಕಾಂತ್ (Rajinikanth) ಅವರಿಗೆ ಲೀಲಾವತಿ ಅಮ್ಮನವರು ಹೇಳಿದ್ದರು. ಆಗ ನಾವು ಅಲ್ಲೇ ಇದ್ದೆವು. ದ್ವಾರಕೀಶ್ ಚಿತ್ರ ಶೂಟಿಂಗ್ ನಡೆಯುತ್ತಿತ್ತು. ಆಗ ರಜನಿಕಾಂತ್ ನನ್ನ ಹತ್ತಿರ ದುಡ್ಡಿಲ್ಲ ಎಂದಾಗ, ಸ್ವತಃ ತಾವೇ ದುಡ್ಡುಕೊಟ್ಟು ರಜನಿಕಾಂತ್‌ಗೆ ಜಮೀನು ಖರೀದಿಸಿಕೊಟ್ಟಿದ್ದರು. ನಂತರ ಲೀಲಾವತಿ ಅವರಿಗೆ ರಜನಿಕಾಂತ್ ಹಣ ವಾಪಸ್ ಮಾಡಿದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಮೂರು ದಿನಗಳ ಹಿಂದಷ್ಟೇ ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್ ಪಡೆದಿದ್ದರು ಲೀಲಾವತಿ
ಆ ಕಾಲದಲ್ಲಿ ಒಬ್ಬ ಮನುಷ್ಯ ನಮ್ಮವನು ಬೆಳೆಯುತ್ತಿದ್ದಾನೆ ಎಂದಾಗ ಸ್ಫೂರ್ತಿ ತುಂಬುವ ಕೆಲವನ್ನು ಒಬ್ಬ ಹೆಂಗಸಾಗಿ (ಲೀಲಾವತಿ) ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಕೋಟ್ಯಂತರ ಹಣ ಗಳಿಸುವ ಪುರುಷ ಕಲಾವಿದರು, ಪೋಷಕ ಕಲಾವಿದರಿಗೆ ಸಹಾಯ ಮಾಡಬಹುದು. ಇವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದರೆ ಬಹಳ ಕಷ್ಟ ಎಂದರು.
ಲೀಲಾವತಿ ಅವರು ಹಳೇ ಪೋಷಕ ನಟರು, ಸಹಕಲಾವಿದರು, ಹಾಸ್ಯ ನಟರಿಗೆ ಸಹಾಯ ಆಗಲಿ ಅಂತ ಪಿಂಚಣಿ ರೂಪದಲ್ಲಿ ಹಣ ಕೊಡುತ್ತಿದ್ದರು. ತಮಿಳುನಾಡಿನಲ್ಲಿ 30 ಮಂದಿ ಹಳೆ ಕಲಾವಿದರಿಗೆ ಊಟಕ್ಕೂ ಗತಿ ಇರಲಿಲ್ಲ. ಅವರಿಗೆ ಆಶ್ರಯವಾಗಿದ್ದವರು ಲೀಲಾವತಿ ಅವರು. ಆ ಮಹಿಳೆ ತನಗೆ ಇಲ್ಲದಿದ್ದರೂ ಪರವಾಗಿಲ್ಲ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು. ಇದನ್ನೂ ಓದಿ: ಲೀಲಾವತಿ ಮಗನಾಗಿ ನಟಿಸಿದ್ದೇ ನನ್ನ ಭಾಗ್ಯ: ದ್ವಾರಕೀಶ್
ಕಲಾವಿದರ ಸಂಘದಲ್ಲಿ ಎಷ್ಟೋ ಜನಕ್ಕೆ ದಾರಿದೀಪ, ಸ್ಪೂರ್ತಿಯಾಗಿ ಹಣ ಕೊಟ್ಟಿರುವವರು ಲೀಲಾವತಿ ಅಮ್ಮ. ಲೀಲಾವತಿ ಅವರ ಹೆಸರಿನಲ್ಲಿ ಒಂದು ಸ್ಮಾರಕ ಕಟ್ಟಬೇಕು ಎಂದು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ಸ್ಮಾರಕ ಕಟ್ಟಿದರೆ ಸರ್ಕಾರದ ಗಂಟೇನು ಹೋಗುವುದಿಲ್ಲ ಎಂದು ಒತ್ತಾಯಿಸಿದರು.