ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಮಾಚಾರ ನಡೆದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಪ್ರಾಂಶುಪಾಲರ ಚೇರ್ ಕೆಳಗೆ ಮಾಟಮಂತ್ರದ ಬೊಂಬೆ ಕಾಣಿಸಿಕೊಂಡಿರುವ ಘಟನೆಯೊಂದು ಚಿಕ್ಕಬಳ್ಳಾಪುರದ ಎಂಜಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸದಾಗಿ ಪ್ರಾಂಶುಪಾಲರ ಆಗಮನವಾಗಿದ್ದು, ಮೊದಲ ದಿನ ಅಧಿಕಾರ ಹಸ್ತಾಂತರ ಮಾಡಿಕೊಂಡಿದ್ದಾರೆ. ಹಸ್ತಾಂತರ ಮಾಡಿಕೊಂಡು ಇನ್ನೇನು ಸೀಟಿನ ಮೇಲೆ ಕುಳಿತುಕೊಳ್ಳಬೇಕು ಎನ್ನೋವಷ್ಟರಲ್ಲಿ ಸೀಟಿನ ಕೆಳಭಾಗದಲ್ಲಿ ವಿಚಿತ್ರ ಬೊಂಬೆಯೊಂದು ಪತ್ತೆಯಾಗಿದೆ. ಇದು ಮಾಟಮಂತ್ರ, ವಾಮಾಚಾರ ಎನ್ನುವ ಮಾತುಗಳು ಕೇಳಿಬಂದಿವೆ. ಇದನ್ನೂ ಓದಿ: ಪತ್ನಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದವನ ಮೇಲೆ ಪತಿ ಫುಲ್ ಗರಂ – ಯುವಕನಿಗೆ ಬಿತ್ತು ಗೂಸಾ
ಏನಿದು ಘಟನೆ?
ಚಿಕ್ಕಬಳ್ಳಾಪುರ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಿಸುಮಾರು 2,300 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ. ಈ ಕಾಲೇಜಿಗೆ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾಗಿದ್ದ ಶಕುಂತಲಾ ಅವರು ಪ್ರಾಂಶುಪಾಲರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಶ್ರೀನಿವಾಸ್ ಪ್ರಾಂಶುಪಾಲರಾಗಿದ್ದು, ಅವರು ಪ್ರಾಂಶುಪಾಲ ಹುದ್ದೆಯಿಂದ ಹಿಂದೆ ಸರಿದ ಕಾರಣ ಶಕುಂತಲಾ ಅವರು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಝೋಝೋ ಗೊಂಬೆ
ಶಕುಂತಲಾ ಅವರು ಅಧಿಕಾರ ಸ್ವೀಕರಿಸಿ ಪ್ರಾಂಶುಪಾಲರ ಕೊಠಡಿಯ ಸೀಟನ್ನು ಏರಬೇಕು ಅನ್ನೋವಷ್ಟರಲ್ಲಿ ಸೀಟಿನ ಕೆಳಗೆ ವಿಚಿತ್ರ ಬೊಂಬೆಯೊಂದು ಪತ್ತೆಯಾಗಿದೆ. ಇದು ವಾಮಾಚಾರ, ಮಾಟಮಂತ್ರದ ಶಂಕೆ ಮೂಡಿಸಿದೆ. ಪತ್ತೆಯಾದ ವಿಚಿತ್ರ ಆಕಾರದ ಬೊಂಬೆ, ಖಾಸಗಿ ಮೊಬೈಲ್ ಕಂಪನಿ ವೋಡಾಫೋನ್ ಕಂಪನಿಯ ಜಾಹೀರಾತಿನಲ್ಲಿ ಕಾಣುವ ಝೋಝೋ ಗೊಂಬೆ ಮಾದರಿಯಿದ್ದು, ಗೊಂಬೆಗೆ ಅರಿಶಿಣ, ಕುಂಕಮ ಲೇಪನ ಮಿಶ್ರಿಣ ಮಾಡಿ ದಾರ ಸುತ್ತಲಾಗಿದೆ. ಇದನ್ನ ಕಂಡ ಕೆಲ ಕಾಲ ಶಾಕ್‌ಗೆ ಓಳಗಾದ ನೂತನ ಪ್ರಾಂಶುಪಾಲರು, ತಮ್ಮ ಕಾಲೇಜಿನ ಎಲ್ಲ ಉಪನ್ಯಾಸಕರನ್ನ ಕರೆದು ತೋರಿಸಿದ್ದಾರೆ.
ನಾನು ಅಧಿಕಾರ ವಹಿಸಿಕೊಂಡ ಕಾರಣ ಚೇರ್ ಧೂಳು ಕಚೇರಿ ಸ್ವಚ್ಚತೆ ಮಾಡುವಂತೆ ಡಿ ಗ್ರೂಪ್ ಸಿಬ್ಬಂದಿಗೆ ಹೇಳಿದ್ದು, ಚೇರ್ ಸ್ವಚ್ಚತೆ ಮಾಡುವಾಗ ಬೊಂಬೆ ಸಿಕ್ಕಿದೆ ಮೇಡಂ ಮಾಟಮಂತ್ರ ಮಾಡಲಾಗಿದೆ ಎಂದು ಡಿ ಗ್ರೂಪ್ ಸಿಬ್ಬಂದಿ ಅಶ್ವತ್ಥಮ್ಮ ಹೇಳಿದ್ರು. ಆದ್ರೆ ಅದನ್ನ ನಾನು ನಂಬೋಲ್ಲ ಎಂದು ನೂತನ ಪ್ರಾಂಶುಪಾಲರಾದ ಶಕುಂತಲಾ ಹೇಳಿದರು.
ಏನು ಭಯವಾಗಿಲ್ಲವೆಂದೇ ಭಯದ ವಾತಾವರಣ
ಗೊಂಬೆ ಪತ್ತೆಯಾದ ಕೂಡಲೇ ಆಶ್ಚರ್ಯಕ್ಕೆ ಒಳಗಾಗಿರೋ ಪ್ರಾಂಶುಪಾಲರು, ಉಪನ್ಯಾಸಕರು, ನಂತರ ಅದನ್ನ ಕೂಲಂಕುಷವಾಗಿ ನೋಡಿ ಇದ್ಯಾವಾದೋ ಆಟಿಕೆ ಇರಬೇಕು. ಯಾರೋ ಬೇಕು ಅಂತಲೇ ಇಲ್ಲಿ ಇಟ್ಟಿರಬೇಕು ಎಂದು ನಿಟ್ಟುಸಿರು ಬಿಟ್ಟು ಸುಮ್ಮನಾಗಿದ್ದಾರೆ. ಒಳಗೊಳಗೆ ವಾಮಾಚಾರ ಮಾಟಮಂತ್ರದ ಅನುಮಾನಗಳ ಭಯ ಕಾಡುತ್ತಿದ್ರೂ, ಮೇಲ್ನೋಟಕ್ಕೆ ಏನೂ ಇಲ್ಲ. ನಮಗೆ ಏನು ಭಯ ಆಗಿಲ್ಲ ಅಂತ ಹೇಳ್ತಿದ್ದಾರೆ.
ಘಟನೆಯ ನಂತರ ಇತ್ತ ವಿದ್ಯಾರ್ಥಿಗಳು ಸಹ ಈ ಬಗ್ಗೆ ಗುಸು ಗುಸು ಅಂತ ಮಾತನಾಡಿಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲೂ ಕಾಲೇಜಲ್ಲಿ ಮಾಟಮಂತ್ರ ಅನ್ನೋ ಮಾತಗಳನ್ನಾಡುತ್ತಿದ್ದಾರೆ. ಆಸಲಿಗೆ ಚಿಕ್ಕಬಳ್ಳಾಪುರ ಪ್ರಥಮ ದರ್ಜೆ ಕಾಲೇಜು ಸದಾ ಹಣದ ಅವ್ಯವಹಾರ, ಹಲವು ಹಗರಣಗಳಿಂದ ಸುದ್ದಿಯಾಗಿತ್ತು. ಇದನ್ನೂ ಓದಿ: ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ಪತ್ರೆಗೆ ದಾಖಲು
ಇತ್ತೀಚೆಗೆ ಕಾಲೇಜಲ್ಲಿ ಉಪನ್ಯಾಸಕರಲ್ಲಿ ಗುಂಪುಗಾರಿಕೆಯ ಮಾತುಗಳು ಕೇಳಿಬರ್ತಿದೆ. ಒಬ್ಬರ ಕಾಲು ಇಬ್ಬರು ಎಳೆಯೋ ಕಾಯಕ ಮಾಡ್ತಿದ್ದಾರೆ ಎನ್ನಲಾಗಿದ್ದು, ಇದರ ಪ್ರಭಾವ ಎಂಬಂತೆ ಈಗ ನೂತನ ಪ್ರಾಂಶುಪಾಲರನ್ನ ಬೆದರಿಸೋಕೆ ಕಾಲೇಜಿನಲ್ಲಿರೋವರೆ ಈ ರೀತಿ ಬೊಂಬೆ ಇಟ್ಟು ಮಾಟಮಂತ್ರದ ನಾಟಕ ಆಡ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಉತ್ತಮ ಫಲಿತಾಂಶ, ವಿದ್ಯಾರ್ಥಿಗಳ ಸಾಧನೆಯಿಂದ ಸುದ್ದಿಯಾಗಬೇಕಾದ ಕಾಲೇಜು ಈ ರೀತಿ ಮಾಟಮಂತ್ರಗಳಿಗೆ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.