ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಸುಪ್ರೀಂ ಕೋರ್ಟ್ ಇಂದು ಬಿಗ್ ರಿಲೀಫ್ ಕೊಟ್ಟಿದೆ. ಈ ಪ್ರಕರಣದ ಸಂಬಂಧ ಸದ್ಯಕ್ಕೆ ಮುಂದಿನ ವಿಚಾರಣೆ ನಡೆಸದಂತೆ ಅಲಹಾಬಾದ್ ಹೈಕೋರ್ಟ್‌ಗೆ ಸೂಚಿಸಿದೆ.

ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ಗೆ (Allahabad Highcourt) ಯಾವುದೇ ವರದಿ ಸಲ್ಲಿಸದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ED) ಸುಪ್ರೀಂ ಕೋರ್ಟ್ ಸೂಚಿಸಿದೆ.
ಕಾಂಗ್ರೆಸ್ ನಾಯಕನ (Congress Leader) ವಿರುದ್ಧದ ಅಕ್ರಮ ಆಸ್ತಿ (Disproportionate Assets) ಆರೋಪಗಳ ಕುರಿತು ಸಿಬಿಐ ಮತ್ತು ಇಡಿಯಿಂದ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿತ್ತು. ಅಕ್ರಮ ಆಸ್ತಿ ಸಂಪಾದನೆ ಆರೋಪಗಳ ಪರಿಶೀಲನೆ ನಡೆಸುವಂತೆ ಸಿಬಿಐ ಮತ್ತು ಇಡಿಗೆ ನಿರ್ದೇಶಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಅವರು ಈ ಹಿಂದೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದ ಹಿನ್ನೆಲೆ ಏನು?
ಸಿಬಿಐ ನೀಡಿದ ಪ್ರತಿಕ್ರಿಯೆಯಿಂದ ಅಸಮಾಧಾನಗೊಂಡಿದ್ದ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಜುಲೈ 20ರಂದು, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಅಕ್ರಮ ಆಸ್ತಿ ಆರೋಪಗಳ ತನಿಖೆಯಲ್ಲಿ ನಡೆದಿರುವ ಪ್ರಗತಿಯ ಕುರಿತು ವಿವರವಾದ ವರದಿಯನ್ನು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕವಾಗಿ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಅಕ್ರಮ ಆಸ್ತಿ ಆರೋಪಗಳ ಕುರಿತು ತನಿಖೆ ನಡೆಸುವ ಸಂದರ್ಭದಲ್ಲಿ ಯಾವುದೇ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಅಥವಾ ಮಾಹಿತಿ ಇಡಿ ಗಮನಕ್ಕೆ ಬಂದರೆ, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿರುತ್ತದೆ ಎಂದು ಹೈಕೋರ್ಟ್ ಹೇಳಿತ್ತು.
ಕರ್ನಾಟಕದ ನಿವಾಸಿ ಎಸ್. ವಿಗ್ನೇಶ್ ಶಿಶಿರ್ ಸಲ್ಲಿಸಿದ್ದ ಕ್ರಿಮಿನಲ್ ರಿಟ್ ಅರ್ಜಿಯ ವಿಚಾರಣೆ ಸುಮಾರು ಎರಡು ಗಂಟೆಗಳ ಕಾಲ ನಡೆದ ಇನ್-ಚೇಂಬರ್ ವಿಚಾರಣೆಯ ಬಳಿಕ ಈ ಆದೇಶ ಹೊರಬಿದ್ದಿತ್ತು. ಬಿಜೆಪಿ ಕಾರ್ಯಕರ್ತರಾಗಿರುವ ವಿಗ್ನೇಶ್ ಈ ಹಿಂದೆ ರಾಹುಲ್ ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಿ ಅರ್ಜಿಗಳನ್ನು ಸಲ್ಲಿಸಿದ್ದರು.

ರಾಹುಲ್ ಗಾಂಧಿ ಅವರ ಆಸ್ತಿಗೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ್ದ ದೂರಿನ ತನಿಖೆಯಲ್ಲಿ ನಡೆದಿರುವ ಪ್ರಗತಿಯ ಕುರಿತು ಸಾಕಷ್ಟು ವಿವರ ನೀಡಿಲ್ಲ ಮತ್ತು ಸಿಬಿಐ ಸಲ್ಲಿಸಿದ್ದ ಪ್ರಮಾಣಪತ್ರವು ತನ್ನ ಹಿಂದಿನ ಆದೇಶಕ್ಕೆ ಅನುಗುಣವಾಗಿಲ್ಲ ಎಂದು ಹೈಕೋರ್ಟ್ ಗಮನಿಸಿತ್ತು.
ಈ ಹಿನ್ನೆಲೆಯಲ್ಲಿ ಸಿಬಿಐನ ಭ್ರಷ್ಟಾಚಾರ ನಿಗ್ರಹ ವಿಭಾಗದ ನವದೆಹಲಿಯ ಕೇಂದ್ರ ಕಚೇರಿಯ ಜಂಟಿ ನಿರ್ದೇಶಕರು ಅಥವಾ ಸಂಬಂಧಿತ ವಲಯದ ಮುಖ್ಯಸ್ಥರು ವೈಯಕ್ತಿಕವಾಗಿ ಹೊಸ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಪೀಠ ನಿರ್ದೇಶಿಸಿತ್ತು. ಪ್ರಕರಣವನ್ನು ಭಾಗಶಃ ವಿಚಾರಣೆಗೊಳಪಟ್ಟ ಪ್ರಕರಣವೆಂದು ಪರಿಗಣಿಸಿದ್ದ ಪೀಠವು ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ನಿಗದಿಪಡಿಸಿತ್ತು.
ಬಹಿರಂಗ ಕೋರ್ಟ್‌ನಲ್ಲಿ ವಿಚಾರಣೆ ಇರಲಿಲ್ಲ
ಹಿಂದಿನ ಆದೇಶಗಳಂತೆ ಪ್ರಕರಣದ ಸಂಪೂರ್ಣ ದಾಖಲೆಗಳನ್ನ ಸೀಲ್ ಕವರ್‌ನಲ್ಲಿ ಹಿರಿಯ ರಿಜಿಸ್ಟ್ರಾರ್ ಅವರ ಸುರಕ್ಷಿತ ವಶದಲ್ಲಿಯೇ ಮುಂದುವರಿಸಿ ಇರಿಸುವಂತೆ ಕೂಡ ಹೈಕೋರ್ಟ್ ನಿರ್ದೇಶಿಸಿತ್ತು. ಪ್ರಕರಣದ ಸೂಕ್ಷ್ಮ ಸ್ವರೂಪವನ್ನು ಪರಿಗಣಿಸಿ, ಹೈಕೋರ್ಟ್ ಪೀಠವು ಈ ಪ್ರಕರಣದ ವಿಚಾರಣೆಯನ್ನು ಬಹಿರಂಗ ನ್ಯಾಯಾಲಯದಲ್ಲಿ ನಡೆಸುತ್ತಿರಲಿಲ್ಲ.
