ಇಸ್ಲಾಮಾಬಾದ್/ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ (Ind vs Pak) ನಡುವೆ ಚಾಂಪಿಯನ್ಸ್ ಟ್ರೋಫಿ-2025 (Champions Trophy 2025) ಆಯೋಜನೆ ಕುರಿತು ಹಗ್ಗಜಗ್ಗಾಟ ನಡೆಯುತ್ತಿದೆ. ಈ ಬಾರಿಯ ಆತಿಥ್ಯ ಪಾಕ್ ಕೈಯಲ್ಲೇ ಇದ್ದರೂ ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಬಿಸಿಸಿಐ ನಿರ್ಧಾರದ ಮೇಲೆ ಐಸಿಸಿ (ICC) ಸ್ಥಳ ನಿಗದಿ ಮಾಡುವ ಬಗ್ಗೆ ನಿರ್ಧಾರಕ್ಕೆ ಮುಂದಾಗಿದೆ. ಈ ನಡುವೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಟ್ರೋಫಿ ಪ್ರವಾಸವನ್ನು ರದ್ದುಗೊಳಿಸಲು ಐಸಿಸಿ ನಿರ್ಧರಿಸಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah), ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಪಿಒಕೆ ವ್ಯಾಪ್ತಿಯಲ್ಲಿರುವ ಸ್ಕರ್ದು, ಮುರ್ರೆ ಮತ್ತು ಮುಜಫರಾಬಾದ್‌ಗೆ ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಳಾಂತರಿಸಲಾಗುವುದಿಲ್ಲ ಎಂದು ಐಸಿಸಿ ಹೇಳಿದೆ. ಅಲ್ಲದೇ ಟ್ರೋಫಿ ಪ್ರವಾಸದ ಕುರಿತು ಅಂತಿಮಗೊಳಿಸುವ ಬಗ್ಗೆ ಚರ್ಚೆಯಲ್ಲಿದ್ದೇವೆ. ಯಾವುದೇ ತೀರ್ಮಾನವನ್ನು ಐಸಿಸಿಯೇ ಪ್ರಕಟಿಸಲಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದೆ.
ಮುಂದಿನ ವರ್ಷ 2025ರ ಫೆಬ್ರವರಿ 19 ರಿಂದ ಮಾರ್ಚ್ 9ರ ವರೆಗೆ ಐಸಿಸಿ ಚಾಂಪಿಯನ್‌ಶಿಪ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಪಾಕಿಸ್ತಾನದ ರಾವಲ್ಪಿಂಡಿ, ಮುಲ್ತಾನ್ ಹಾಗೂ ಲಾಹೋರ್ ಕ್ರೀಡಾಂಗಣಗಳು ಟೂರ್ನಿಗೆ ಆತಿಥ್ಯ ವಹಿಸಿವೆ. ಭಾರತದ ಎಲ್ಲಾ ಪಂದ್ಯಗಳು ಲಾಹೋರ್‌ನಲ್ಲಿ ನಿಗದಿಯಾಗಿವರೆ. ಬಿಸಿಸಿಐ ಈಗಾಗಲೇ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿರೋದ್ರಿಂದ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಪಿಸಿಬಿ ಈ ಹೇಳಿಕೆಗಳನ್ನು ತಳ್ಳಿಹಾಕಿದೆ.
ಐಸಿಸಿ ಮುಂದಿರುವ ಆಯ್ಕೆಗಳೇನು?
ಆಯ್ಕೆ – 1
ಬಿಸಿಸಿಐಯ ಹೈಬ್ರಿಡ್ ಮಾದರಿಯ ಪ್ರಸ್ತಾಪ ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವರಿಕೆ ಮಾಡಿ, ಇದು ಪಂದ್ಯಾವಳಿಯ 15 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುವುದು.
ಆಯ್ಕೆ – 2
ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ತೆಗೆದುಹಾಕುವುದು. ಇದರಿಂದ ಟ್ರೋಫಿಯಿಂದ ಪಾಕ್ ತಂಡ ದೂರ ಉಳಿಯಲಿದೆ.
ಆಯ್ಕೆ – 3
ಅನಿರ್ದಿಷ್ಟಾವಧಿವರೆಗೆ ಚಾಂಪಿಯನ್ಸ್ ಟ್ರೋಫಿ ಮುಂದೂಡುವುದು. ಈ ನಿರ್ಧಾರವು ICC ಮತ್ತು PCB ಎರಡರ ಆದಾಯದ ಮೇಲೆ ಭಾರಿ ಪರಿಣಾಮ ಬೀರಬಹುದು.
ಒಂದು ವೇಳೆ, ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಪಾಲ್ಗೊಳ್ಳುವಿಕೆಯಿಂದ ಹಿಂದಕ್ಕೆ ಸರಿದರೆ ಐಸಿಸಿಗೆ ನೂರಾರು ಕೋಟಿ ಮತ್ತು ಪಾಕಿಸ್ತಾನಕ್ಕೆ ಸುಮಾರು 1,800 ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಸಿಸಿಐ, ಈಗಾಗಲೇ ಹೈಬ್ರಿಡ್ ಮಾದರಿಗೆ ಒತ್ತಡ ಹೇರುತ್ತಿದೆ. ಐಸಿಸಿ ಕೂಡ ಈ ಬಗ್ಗೆ ಚಿಂತನೆ ನಡೆಸಿದೆ. ಒಂದು ವೇಳೆ ಪಾಕ್ ಟೂರ್ನಿ ಆಯೋಜನೆಯಿಂದ ಹಿಂದೆ ಸರಿದರೆ, ಇಡೀ ಟೂರ್ನಿಯನ್ನೇ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆ ಮಾಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.