ಬೆಂಗಳೂರು: ನಗರದ ಪ್ರತಿಷ್ಠಿತ ಹೆಚ್‌ಸಿಜಿ (HCG) ಕ್ಯಾನ್ಸರ್ ಆಸ್ಪತ್ರೆಯ ನೈತಿಕ ಸಮಿತಿಗೆ (Ethics Committee) ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ(CDSCO) ಕಠಿಣ ಶಾಕ್ ನೀಡಿದೆ. ಮಾನವ ಪ್ರಯೋಗಗಳ (Clinical Trials) ವೇಳೆ ಕಂಡುಬಂದ ಗಂಭೀರ ಲೋಪಗಳು ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಆಸ್ಪತ್ರೆಯು ಮುಂದಿನ 2 ವರ್ಷಗಳ ಕಾಲ (24 ತಿಂಗಳು) ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್ ನಡೆಸದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ಆಸ್ಪತ್ರೆಯ ನೈತಿಕ ಸಮಿತಿಯ ಮಾಜಿ ಮುಖ್ಯಸ್ಥರೂ ಹಾಗೂ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರು ನೀಡಿದ ಲಿಖಿತ ದೂರಿನ ಆಧಾರದ ಮೇಲೆಯೇ ಈ ಇಡೀ ಹಗರಣ ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು. ಕೇಂದ್ರ ಮತ್ತು ರಾಜ್ಯ ಔಷಧ ನಿಯಂತ್ರಣ ಮಂಡಳಿಗಳು ನಡೆಸಿದ ಜಂಟಿ ತನಿಖೆಯಲ್ಲಿ ಆಸ್ಪತ್ರೆಯ ನೈತಿಕ ಸಮಿತಿಯು ಹಲವು ಮಾರ್ಗಸೂಚಿಗಳನ್ನು ಗಾಳಿಗೆ ತೂರಿರುವುದು ಸಾಬೀತಾದ ಕಾರಣ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ನಿಷೇಧ ಹೇರಿದ್ದು ಯಾಕೆ?
ಔಷಧ ಸಂಶೋಧನೆಯ ಪ್ರಯೋಗಗಳ ವೇಳೆ ರೋಗಿಗಳು ಮೃತಪಟ್ಟರೂ, ಆ ಸೂಕ್ಷ್ಮ ವಿಷಯವನ್ನು ನಿಯಂತ್ರಕ ಸಂಸ್ಥೆಗೆ ನಿಗದಿತ ಸಮಯಕ್ಕೆ ತಿಳಿಸಿಲ್ಲ. ಇನ್ನು ಕೆಲವು ಪ್ರಕರಣಗಳಲ್ಲಿ ಸಾವಿನ ವರದಿಯನ್ನೇ ದಾಖಲಿಸದೇ ಮುಚ್ಚಿಡಲಾಗಿದೆ.
ಪ್ರಯೋಗದ ವೇಳೆ ತೊಂದರೆಗೊಳಗಾದ ಅಥವಾ ಜೀವ ಕಳೆದುಕೊಂಡ ರೋಗಿಗಳ ಕುಟುಂಬಗಳಿಗೆ ನಿಯಮಾನುಸಾರ ಸಿಗಬೇಕಾದ ಸೂಕ್ತ ಪರಿಹಾರ ಧನ ತಲುಪಿದೆಯೇ ಎಂಬುದಕ್ಕೆ ಆಸ್ಪತ್ರೆ ಬಳಿ ಯಾವುದೇ ಪುರಾವೆಗಳಿಲ್ಲ. ಇದನ್ನೂ ಓದಿ: ಯಲ್ಲಾಪುರದಲ್ಲಿ ಹಂದಿಜ್ವರಕ್ಕೆ ವ್ಯಕ್ತಿ ಬಲಿ

ಹೊಸ ಔಷಧ ಪ್ರಯೋಗಕ್ಕೆ ಒಳಗಾಗುವ ರೋಗಿಗಳಿಗೆ ನೀಡಬೇಕಾದ ಕನಿಷ್ಠ ವೈದ್ಯಕೀಯ ಆರೈಕೆ ಮತ್ತು ಜೀವ ಸುರಕ್ಷತೆಯನ್ನು ಒದಗಿಸುವಲ್ಲಿ ಆಸ್ಪತ್ರೆ ಸಂಪೂರ್ಣ ವಿಫಲವಾಗಿದೆ.
ಆದೇಶದಲ್ಲಿ ಏನಿದೆ?
ಮುಂದಿನ 24 ತಿಂಗಳುಗಳ ಕಾಲ ಆಸ್ಪತ್ರೆಯು ಯಾವುದೇ ಹೊಸ ಔಷಧ ಸಂಶೋಧನೆ ಅಥವಾ ಕ್ಲಿನಿಕಲ್ ಪ್ರಯೋಗಗಳನ್ನು ಒಪ್ಪಿಕೊಳ್ಳುವಂತಿಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ಹಳೆಯ ಪ್ರಯೋಗಗಳನ್ನು ಮುಂದುವರಿಸಲು ಅವಕಾಶವಿದೆಯಾದರೂ, ಪ್ರತಿ ತಿಂಗಳು ರೋಗಿಗಳ ಸುರಕ್ಷತೆಯ ಪ್ರಗತಿ ವರದಿಯನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.
ಈ ನಿಷೇಧ ಕ್ರಮವು ಕೇವಲ ಹೊಸ ಕ್ಲಿನಿಕಲ್ ಟ್ರಯಲ್ ನಡೆಸುವ ನೈತಿಕ ಸಮಿತಿಗೆ ಮಾತ್ರ ಅನ್ವಯಿಸುತ್ತದೆ. ಆಸ್ಪತ್ರೆಯ ದೈನಂದಿನ ಕಾರ್ಯಚಟುವಟಿಕೆಗಳು, ರೋಗಿಗಳ ಸಾಮಾನ್ಯ ತಪಾಸಣೆ ಹಾಗೂ ಕ್ಯಾನ್ಸರ್ ಚಿಕಿತ್ಸೆಗಳು ಎಂದಿನಂತೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿವೆ.
ಸದ್ಯ ಸಿಡಿಎಸ್‌ಸಿಒ (CDSCO) ನೀಡಿರುವ ಈ ಕಠಿಣ ಆದೇಶವನ್ನು ಹೆಚ್‌ಸಿಜಿ ಆಸ್ಪತ್ರೆಯ ಆಡಳಿತ ಮಂಡಳಿ ಪರಿಶೀಲಿಸುತ್ತಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ತಜ್ಞರೊಂದಿಗೆ ಆಲೋಚನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
