ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪ್ರಸ್ತುತ 1.28 ಕೋಟಿಗಿಂತ ಹೆಚ್ಚು ನೋಂದಾಯಿತ ವಾಹನಗಳಿದ್ದು, ಜೊತೆಗೆ ಬೇರೆಡೆ ನೋಂದಾಯಿತವಾಗಿ ಬೆಂಗಳೂರಿನಲ್ಲಿ ಬಳಕೆಯಾಗುತ್ತಿರುವ ಅಂದಾಜು 15-20 ಲಕ್ಷ ವಾಹನಗಳಿವೆ. ಹೀಗಾಗಿ ಬೆಂಗಳೂರಿನಲ್ಲಿ ಸುಮಾರು 1.5 ಕೋಟಿ ವಾಹನಗಳಿವೆ. ವಾಹನಗಳು ಸುಮಾರು ಶೇ.95ರಷ್ಟು ಅವಧಿಯಲ್ಲಿ, ಮನೆಗಳು, ಕಚೇರಿಗಳು ಅಥವಾ ಇತರೆ ಸ್ಥಳಗಳಲ್ಲಿ ನಿಲುಗಡೆಗೊಂಡಿರುತ್ತವೆ. ಇದರಿಂದಾಗಿ ಪಾರ್ಕಿಂಗ್ ನಿರ್ವಹಣೆಯು ನಗರದ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿ 2021ರಲ್ಲಿ ಪಾರ್ಕಿಂಗ್ ನೀತಿಯನ್ನು ಸರ್ಕಾರ ರೂಪಿಸಿದೆ. ಅದರಂತೆ ಕರಡು ನಿಯಮಗಳನ್ನು ರಚಿಸಿದ್ದು, ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಲಹೆಗಳನ್ನು ಆಹ್ವಾನಿಸಿದೆ.
ಪ್ರಸ್ತಾವಿತ ಪಾರ್ಕಿಂಗ್ ನಿಯಮಗಳಲ್ಲಿ ಏನಿದೆ?
1)ಖಾಲಿ ನಿವೇಶನಗಳಿಗೆ ಆಸ್ತಿ ತೆರಿಗೆಯ ಪ್ರೋತ್ಸಾಹಕ
ರಸ್ತೆಯೇತರ ಪಾರ್ಕಿಂಗ್ ಸೌಲಭ್ಯವನ್ನು ಹೆಚ್ಚಿಸಲು ಮತ್ತು ಸಾರ್ವಜನಿಕ ರಸ್ತೆಗಳ ಮೇಲಿನ ಒತ್ತಡವನ್ನು ತಗ್ಗಿಸಲು, ಪ್ರಸ್ತಾವಿತ ನಿಯಮಗಳು ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಗಾಗಿ ಲಭ್ಯವಾಗುವಂತೆ ಮಾಡಲು ಪ್ರೋತ್ಸಾಹ ನೀಡುವುದು:
* ಶೇ.100ರಷ್ಟು ಆಸ್ತಿ ತೆರಿಗೆ ವಿನಾಯಿತಿ: ಬಹುಹಂತದ ಕಾರ್ ಪಾರ್ಕಿಂಗ್ (MLCP) ಅಥವಾ ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಒದಗಿಸುವ ಖಾಲಿ ನಿವೇಶನಗಳಿಗೆ ಆಸ್ತಿ ತೆರಿಗೆ ಸಂಪೂರ್ಣ ವಿನಾಯಿತಿ.
* ಶೇ.50ರಷ್ಟು ಆಸ್ತಿ ತೆರಿಗೆ ವಿನಾಯಿತಿ: ನೆಲ ಮಟ್ಟದ ಪಾರ್ಕಿಂಗ್‌ಗಾಗಿ ಬಳಸುವ ಖಾಲಿ ನಿವೇಶನಗಳಿಗೆ ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ವಿನಾಯಿತಿ.
ಈ ಪ್ರೋತ್ಸಾಹಗಳೊಂದಿಗೆ ನಗರದಲ್ಲಿ ಹೆಚ್ಚುವರಿ ಪಾರ್ಕಿಂಗ್ ಸಾಮರ್ಥ್ಯವನ್ನು ಸೃಜಿಸುವುದಾಗಿ ಉದ್ದೇಶ ಹೊಂದಿದೆ.

2) ವೈಜ್ಞಾನಿಕ ಮತ್ತು ಶುಲ್ಕ- ಆಧಾರಿತ ಪಾರ್ಕಿಂಗ್ ವ್ಯವಸ್ಥೆ:
*ಪ್ರಸ್ತಾವಿತ ನಿಯಮಗಳು ವೈಜ್ಞಾನಿಕವಾಗಿ ರಚಿಸಲಾದ ಶುಲ್ಕ-ಆಧಾರಿತ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸುತ್ತವೆ.
*ಸಾರ್ವಜನಿಕ ಸಾರಿಗೆಯು ಖಾಸಗಿ ವಾಹನದ ಬಳಕೆಗೆ ಹೋಲಿಸಿದರೆ ಹೆಚ್ಚು ಆಕರ್ಷಕವಾಗುವಂತೆ ಮಾಡಲು ಪಾರ್ಕಿಂಗ್ ಶುಲ್ಕಗಳನ್ನು ನಿರ್ಧರಿಸುವುದು. ರಸ್ತೆಯ ವರ್ಗೀಕರಣ ಮತ್ತು ಪಾರ್ಕಿಂಗ್ ಸ್ಥಳದ ಅಂಶಗಳನ್ನು ಪರಿಗಣಿಸಿ ಶುಲ್ಕಗಳನ್ನು ನಿಗದಿಪಡಿಸುವುದು.
*ಸಾರ್ವಜನಿಕ ರಸ್ತೆಯೇತರ ಪಾರ್ಕಿಂಗ್ ಸೌಲಭ್ಯಗಳನ್ನು ದಿನನಿತ್ಯ ಬಳಸುವವರಿಗೆ ಮಾಸಿಕ ಪಾರ್ಕಿಂಗ್ ಪಾಸ್‌ಗಳ ವ್ಯವಸ್ಥೆಯನ್ನೂ ಸಹ ಕಲ್ಪಿಸುವುದು. ಇದನ್ನೂ ಓದಿ: ಫೆಬ್ರವರಿ 8 ರಿಂದ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ!
ಸಂಚಾರ ದಟ್ಟಣೆ, ಪಾದಚಾರಿಗಳು ಮತ್ತು ಸಾರ್ವಜನಿಕ ಸಾರಿಗೆಗೆ ಉಂಟಾಗುವ ಅಡ್ಡಿಯನ್ನು ಕಡಿಮೆ ಮಾಡಲು ರಸ್ತೆ-ಮೇಲೆ ಪಾರ್ಕಿಂಗ್ ಮಾಡುವುದನ್ನು ನಿಯಂತ್ರಿಸುವುದು.
* ಹೆಚ್ಚಿನ ಸಂಚಾರವಿರುವ ಮಾರ್ಗಗಳಲ್ಲಿ ನಿಲುಗಡೆ ನಿಷೇಧ (No Parking): ಹೆಚ್ಚಿನ ಸಂಚಾರವಿರುವ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸುವುದು.
* ಸಂಚಾರಿ ದಟ್ಟಣೆ ಅವಧಿಯಲ್ಲಿ ನಿರ್ಬಂಧಗಳು: ಟ್ರಾಫಿಕ್ ಸುಧಾರಿಸಲು ಪ್ರಮುಖ ರಸ್ತೆಗಳಲ್ಲಿ ಗರಿಷ್ಠ ಸಂಚಾರಿ ಅವಧಿಯ ಪಾರ್ಕಿಂಗ್ ಮಾಡುವುದನ್ನು ನಿಯಂತ್ರಿಸುವುದು.
* ಸಾರಿಗೆ ಸೌಲಭ್ಯಗಳ ಸಮೀಪ ಪಾರ್ಕಿಂಗ್ ಮಾಡುವುದರ ನಿರ್ಬಂಧ: ನಿಗದಿತ ಬಹುಹಂತದ ಕಾರ್ ಪಾರ್ಕಿಂಗ್ ಸೌಲಭ್ಯಗಳ (MLCP) ಬಳಕೆಯನ್ನು ಉತ್ತೇಜಿಸಲು, ಅದರ ಸುತ್ತಮುತ್ತಲ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸುವುದು.
* ದೀರ್ಘಾವಧಿಯ ಪಾರ್ಕಿಂಗ್ ಮಾಡುವುದಕ್ಕೆ ಹೆಚ್ಚಿನ ಶುಲ್ಕ: ರಸ್ತೆಯ ಸ್ಥಳವನ್ನು ಆಕ್ರಮಿಸಿ ದೀರ್ಘಾವಧಿ ಪಾರ್ಕಿಂಗ್ ಮಾಡುವುದನ್ನು ತಡೆಯಲು ದೀರ್ಘಕಾಲೀನ ಪಾರ್ಕಿಂಗ್‌ಗಾಗಿ ಹೆಚ್ಚಿನ ಶುಲ್ಕ ವಿಧಿಸುವುದು.
4)ಕಠಿಣ ಜಾರಿಗೊಳಿಸುವಿಕೆ:
ಪಾರ್ಕಿಂಗ್ ನಿಯಮಗಳ ಯಶಸ್ವಿ ಅನುಷ್ಠಾನಕ್ಕೆ ಪರಿಣಾಮಕಾರಿ ಜಾರಿ ವ್ಯವಸ್ಥೆ ಅವಶ್ಯಕವಾಗಿರುತ್ತದೆ.
* ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಪಾಲಿಕೆಗಳ ವ್ಯಾಪ್ತಿಯೊಳಗೆ, ಸಕ್ಷಮ ಪ್ರಾಧಿಕಾರಗಳಾದ ಪೊಲೀಸ್ ಮತ್ತು ನಗರಪಾಲಿಕೆಗಳು ಪಾರ್ಕಿಂಗ್ ವಿನಿಯಮಗಳನ್ನು (Regulations) ಜಾರಿಗೊಳಿಸಲು ಅಧಿಕಾರವನ್ನು ನೀಡುವುದು.
ಪ್ರಸ್ತಾವಿತ ನಿಯಮಗಳು –
* ಅನ್ವಯವಾಗುವ ಕಟ್ಟಡ ನಿಯಮಗಳಡಿ ಕಡ್ಡಾಯಗೊಳಿಸಿದ ಪಾರ್ಕಿಂಗ್ ವ್ಯವಸ್ಥೆಯನ್ನು ಒದಗಿಸಲು ವಿಫಲನಾದ; ಅಥವಾ
* ಗೊತ್ತುಪಡಿಸಲಾದ ಪಾರ್ಕಿಂಗ್ ಪ್ರದೇಶಗಳನ್ನು ಇತರೆ ಉದ್ದೇಶಗಳಿಗೆ ದುರ್ಬಳಕೆ ಮಾಡಿದ ಕಟ್ಟಡ ಮಾಲೀಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದು.
* ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸಲು ಪಾರ್ಕಿಂಗ್ ಆದಾಯದ (Revenue) ವಿವರಗಳನ್ನು ನಿಯತಕಾಲಿಕವಾಗಿ ಪ್ರಕಟಿಸುವುದು. ಅಂಥ ಆದಾಯಗಳನ್ನು ಸಂಚಾರ ಸುಧಾರಣೆಗಳು, ಜಂಕ್ಷನ್ ಸುಧಾರಣೆಗಳು, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯಗಳಿಗೆ ಬಳಸಲಾಗುವುದು.
2021ರ ಪಾರ್ಕಿಂಗ್ ನೀತಿ
ಪ್ರಸ್ತಾವಿತ ಪಾರ್ಕಿಂಗ್ ನಿಯಮಗಳು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ 2021ರ ಪಾರ್ಕಿಂಗ್ ನೀತಿ ಆಧಾರಿತವಾಗಿವೆ. ಪ್ರಸ್ತಾಪಿತ ನಿಯಮಗಳು ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮತ್ತು ಬೆಂಗಳೂರಿನ ದೀರ್ಘಕಾಲದಿಂದ ಬಾಕಿ ಉಳಿದಿರುವ ಪಾರ್ಕಿಂಗ್ ಮತ್ತು ಸಂಚಾರಿ ಸವಾಲುಗಳನ್ನು ಪರಿಹರಿಸಲು ಅಗತ್ಯವಿರುವ ನಿಯಂತ್ರಣಾ ಚೌಕಟ್ಟನ್ನು ಬಲಪಡಿಸುವ ಉದ್ದೇಶ ಹೊಂದಿವೆ.
ಪಾರ್ಕಿಂಗ್ ನಿಯಂತ್ರಣಕ್ಕೆ ಅಸ್ತಿತ್ವದಲ್ಲಿರುವ ಪದ್ಧತಿಗಳಲ್ಲಿ ಬದಲಾವಣೆಗಳ ಅಂತೂ ಅತ್ಯಾವಶ್ಯಕ. ಜೊತೆಗೆ ಸಾರ್ವಜನಿಕ ರಸ್ತೆ, ಸ್ಥಳವನ್ನು ರಕ್ಷಿಸಲು, ಟ್ರಾಫಿಕ್ ಸುಧಾರಿಸಲು, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಮತ್ತು ಬೆಂಗಳೂರಿನ ಸುಸ್ಥಿರ ಅಭಿವೃದ್ಧಿಗಾಗಿ ಪರಿಣಾಮಕಾರಿ ನಿಯಮಗಳ ಜಾರಿ ಅನಿವಾರ್ಯ.
ಸಾರ್ವಜನಿಕ ಸಲಹೆಗಳಿಗೆ ಆಹ್ವಾನ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರದೇಶಕ್ಕಾಗಿ ಕರಡು ಪಾರ್ಕಿಂಗ್ ನಿಯಮಗಳನ್ನು ಸಾರ್ವಜನಿಕ ಸಲಹೆಗಳಿಗಾಗಿ ಆಗಸ್ಟ್ 10ರಂದು ಪ್ರಕಟಿಸಲಾಗಿದೆ. 2026 ಸೆಪ್ಟೆಂಬರ್ 10 ಅಥವಾ ಅದಕ್ಕೂ ಮೊದಲು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಸಲ್ಲಿಸಲು ಸಾರ್ವಜನಿಕರನ್ನು ಕೋರುತ್ತೇವೆ.
ಇ-ಮೇಲ್ : acsuddoffice@gmail.com
ಅಂಚೆ ಮೂಲಕ / ಖುದ್ದಾಗಿ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು
ನಗರಾಭಿವೃದ್ಧಿ ಇಲಾಖೆ
ವಿಕಾಸ ಸೌಧ, ಬೆಂಗಳೂರು.
ಸರ್ಕಾರವು, ಪಾರ್ಕಿಂಗ್ ನಿಯಮಗಳನ್ನು ಅಂತಿಮಗೊಳಿಸುವ ಮೊದಲು ಸಾರ್ವಜನಿಕರಿಂದ ಸ್ವೀಕರಿಸಿದ ಸಲಹೆಗಳು ಮತ್ತು ಪ್ರತಿಕ್ರಿಯೆಗಳನ್ನು ಪರಿಗಣಿಸಲಾಗುವುದು.
