ಬೆಂಗಳೂರು: ಏಷ್ಯಾದ(Asia) ಅತಿದೊಡ್ಡ ಮತ್ತು ಜಾಗತಿಕ ಮಟ್ಟದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ಏರೋ ಇಂಡಿಯಾದ(Aero India) 16ನೇ ಆವೃತ್ತಿ ಯಲಹಂಕದಲ್ಲಿ ಫೆಬ್ರವರಿ 8 ರಿಂದ ಆರಂಭವಾಗಲಿದೆ.
ದ್ವೈವಾರ್ಷಿಕ ಏರ್ ಶೋ 2027ರ ಫೆಬ್ರವರಿ 8 ರಿಂದ 12 ರವರೆಗೆ ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ (Air Force Station, Yelahanka) ಅದ್ಧೂರಿಯಾಗಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರಪಂಚದ ಮುಂಚೂಣಿ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಗಳು, ತಂತ್ರಜ್ಞಾನ ತಜ್ಞರು, ನವೋದ್ಯಮಿಗಳು, ಜಾಗತಿಕ ನೀತಿ ನಿರೂಪಕರು ಹಾಗೂ ವಿವಿಧ ದೇಶಗಳ ರಕ್ಷಣಾ ಪಡೆಗಳ ಹಿರಿಯ ಅಧಿಕಾರಿಗಳನ್ನು ಒಂದೇ ಸೂರಿನಡಿ ತರಲಿದೆ.
ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಜೊತೆಗೆ, ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶವನ್ನು ಪ್ರಮುಖ ಪಾಲುದಾರನನ್ನಾಗಿ ರೂಪಿಸಲು ಈ ಆವೃತ್ತಿ ಮಹತ್ವದ ವೇದಿಕೆಯಾಗಲಿದೆ.

ದೇಶೀಯ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡುವ ಸಲುವಾಗಿ ಈ ಬಾರಿ ಭಾರತೀಯ ಎಂಎಸ್‌ಎಂಇಗಳು (MSMEs) ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಪಾಲುದಾರಿಕೆ, ರಕ್ಷಣಾ ರಫ್ತು ಮತ್ತು ಹೂಡಿಕೆ ವಿಸ್ತರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇದನ್ನೂ ಓದಿ: 200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನನ – ರಥದಲ್ಲಿ ಕೂರಿಸಿ ಅದ್ದೂರಿ ಸ್ವಾಗತ
ಜಾಗತಿಕ ಕಂಪನಿಗಳ ನಡುವೆ ತಂತ್ರಜ್ಞಾನ ವಿನಿಮಯ, ಸರ್ಕಾರ ಹಾಗೂ ಉದ್ಯಮಗಳ ನಡುವಿನ ಕಾರ್ಯತಂತ್ರದ ಮಾತುಕತೆಗಳು (B2B, B2G) ಮತ್ತು ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಈ 5 ದಿನಗಳ ಸಮಾವೇಶ ಸಾಕ್ಷಿಯಾಗಲಿದೆ.
ಪ್ರದರ್ಶಕರು ಮತ್ತು ಸಾರ್ವಜನಿಕ ಸಂದರ್ಶಕರ ಅನುಕೂಲಕ್ಕಾಗಿ ಪ್ರತ್ಯೇಕ ಅಧಿಕೃತ ವೆಬ್‌ಸೈಟ್ www.aeroindia.gov.in ತೆರಯಲಾಗಿದ್ದು ಪ್ರದರ್ಶಕರ (Exhibitors) ಮಳಿಗೆ ಬುಕ್ಕಿಂಗ್ ಹಾಗೂ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ನಾಳೆಯಿಂದ(ಸೆ.3) ಅಧಿಕೃತವಾಗಿ ಆರಂಭವಾಗಲಿದೆ.
