ಬಿಡುಗಡೆಗೂ ಮುನ್ನ ಮತ್ತೊಂದು ಸಿನಿಮಾ ಘೋಷಣೆ ಮಾಡಿದ ‘ಪದವಿಪೂರ್ವ’ ಚಿತ್ರತಂಡ

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಪದವಿಪೂರ್ವ’ ಸಿನಿಮಾ ಇನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವಾಗಲೇ ನಿರ್ಮಾಣ ಸಂಸ್ಥೆ ಇದೇ ನಿರ್ದೇಶಕರೊಡನೆ ಮತ್ತೊಂದು ಚಿತ್ರ ಅನೌನ್ಸ್ ಮಾಡಿದೆ. ಹೌದು, ಪೋಸ್ಟ್ ಪ್ರೊಡಕ್ಷನ್ ಕಾರ್ಯದ ನಡುವೆ ಸಿನಿಮಾ ವೀಕ್ಷಣೆ ಮಾಡಿರುವ ನಿರ್ಮಾಪಕರಲ್ಲೊಬ್ಬರಾದ ವಿಕಟಕವಿ ಯೋಗರಾಜ್ ಭಟ್ಟರು, ತಮ್ಮ ತಂಡದ ನೆಚ್ಚಿನ ಸದಸ್ಯ, ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರ ಕಾರ್ಯವೈಖರಿಯನ್ನು ಮೆಚ್ಚಿ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲು ತಯಾರಾಗಿದ್ದಾರೆ ಎನ್ನಲಾಗಿದೆ. ಸಿನಿಮಾದ ಮತ್ತೊಬ್ಬ ನಿರ್ಮಾಪಕರಾದ ರವಿ ಶಾಮನೂರ್ ಅವರೂ ಸಹ ಭಟ್ಟರ ನಿರ್ಮಾಣ ಸಂಸ್ಥೆಯೊಡನೆ ಮತ್ತೊಮ್ಮೆ ಸಹಭಾಗಿತ್ವ ವಹಿಸಲು ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ.
ಅಕ್ಟೋಬರ್ ತಿಂಗಳಿನಲ್ಲಿ ಸೆಟ್ಟೇರಲಿರುವ ಈ ಹೊಸ ಚಿತ್ರಕ್ಕೂ ‘ಪದವಿಪೂರ್ವ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಯುವ ನಟ ಪೃಥ್ವಿ ಶಾಮನೂರ್ ಅವರೇ ನಾಯಕನಾಗಿ ಮುಂದುವರೆಯಲಿದ್ದಾರೆ. ಪೃಥ್ವಿ ಈಗಾಗಲೇ ಯೋಗರಾಜ್ ಭಟ್ಟರ ಮುಂಬರಲಿರುವ ‘ಗರಡಿ’ ಸಿನಿಮಾದಲ್ಲೂ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಭಟ್ಟರ ಕ್ಯಾಂಪ್‌ನಲ್ಲಿ ಸತತವಾಗಿ ಅವಕಾಶ ಗಿಟ್ಟಿಸುವುದು ಅಷ್ಟು ಸುಲಭದ ಮಾತಲ್ಲ. ತನ್ನ ಅಸಾಧಾರಣ ಪ್ರತಿಭೆಯಿಂದ ಭಟ್ಟರನ್ನು ಹಾಗೂ ತಂಡವನ್ನು ಮೋಡಿ ಮಾಡಿರುವ ಈ ಯುವ ನಟನ ಅಭಿನಯ ಕೌಶಲ್ಯಕ್ಕೆ ನಮ್ಮದೊಂದು ಸಲಾಂ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?
ಚಿತ್ರತಂಡ ಈ ಬಾರಿಯೂ ಮತ್ತಷ್ಟು ಹೊಸ ಪ್ರತಿಭೆಗಳ ಹುಡುಕಾಟ ನಡೆಸಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಆಡಿಶನ್ ಮೂಲಕ ಅಪ್ಪಟ ದೇಸಿ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇನ್ನುಳಿದಂತೆ ‘ಪದವಿಪೂರ್ವ’ ಚಿತ್ರಕ್ಕಾಗಿ ದುಡಿದಿದ್ದ ಉತ್ಸಾಹಿ ಯುವ ತಂತ್ರಜ್ಞರ ತಂಡದ ಬಹುತೇಕ ಸದಸ್ಯರೇ ಸೆಟ್ಟೇರಲಿರುವ ಹೊಸ ಸಿನಿಮಾದಲ್ಲೂ ತಮ್ಮ ಕೈಚಳಕ ತೋರಲಿದ್ದಾರೆ ಎಂದು ನಿರ್ದೇಶಕ ಹರಿಪ್ರಸಾದ್ ಜಯಣ್ಣ ತಿಳಿಸಿದ್ದಾರೆ.