ಹಾವೇರಿ: ನಾನು ವಕೀಲನಾಗಿರುವುದರಿಂದಲೇ ಹಿಂದಿನ ತನಿಖಾ ಆದೇಶ ಕಾನೂನು ಪ್ರಕಾರ ಇಲ್ಲದಿರುವುದಕ್ಕೆ ವಾಪಸ್ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿಯವರು ವಕೀಲರಾಗಿದ್ದ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ (DK Shivakumar) ಅವರ ತನಿಖೆಯ ಆದೇಶವನ್ನು ವಾಪಸ್ ಪಡೆದಿರುವುದು ಸರಿಯೇ ಎಂಬ ಪ್ರಶ್ನೆಗೆ ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ವಕೀಲನಾಗಿರುವುದರಿಂದ, ಹಿಂದಿನ ತನಿಖಾ ಆದೇಶ ಕಾನೂನು ಪ್ರಕಾರ ಇಲ್ಲದ್ದಕ್ಕೆ ವಾಪಸ್ ಪಡೆಯಲಾಗಿದೆ. ನನಗೆ ಕಾನೂನಿನ ಅರಿವು ಇಲ್ಲದಿದ್ದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯಂತೆ ನಾನು ಕಾನೂನುಬಾಹಿರವಾಗಿದ್ದರೂ ತನಿಖೆಯ ಬಗ್ಗೆ ಸಮ್ಮತಿ ನೀಡುತ್ತಿದ್ದೆ ಎಂದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿರೋಧಪಕ್ಷದವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ನಿಗಮಮಂಡಳಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಅಧ್ಯಕ್ಷರ ನೇಮಕಾತಿಗೆ ಮೊದಲ ಹಂತದಲ್ಲಿ ಶಾಸಕರನ್ನು ಪರಿಗಣಿಸಲಾಗುವುದು. ನಾನು ಹಾಗೂ ಉಪಮುಖ್ಯಮಂತ್ರಿಗಳು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಪಕ್ಷದ ವರಿಷ್ಠರಿಗೆ ನೀಡಲಾಗಿದ್ದು, ಅನುಮತಿಯನ್ನು ನಿರೀಕ್ಷಿಸಲಾಗಿದೆ ಎಂದರು. ಇದನ್ನೂ ಓದಿ: ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ: ಬಿಎಸ್ವೈ
150 ದಿನಗಳ ಉದ್ಯೋಗ ನೀಡಲು ಕೇಂದ್ರವಿನ್ನೂ ಒಪ್ಪಿಲ್ಲ:
ಬರ ಪರಿಹಾರದಲ್ಲಿ ರೈತರ ಪಾಲಿನ ಮೊತ್ತದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬೆಳೆಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ನಿಗದಿಯಾಗಿರುವ ಪರಿಹಾರ ಮೊತ್ತವನ್ನು ನೀಡಲಾಗುವುದು. ಹಾವೇರಿ ಜಿಲ್ಲೆಗೆ ಕುಡಿಯುವ ನೀರು, ಮೇವು, ಉದ್ಯೋಗ ಸೇರಿದಂತೆ ವಿವಿಧ ಕಾರ್ಯಗಳಿಗೆ 226 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಬರಗಾಲದ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವುದಲ್ಲದೇ, ಕುಡಿಯುವ ನೀರಿಗೆ ಕೊರತೆ ಬರದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಎನ್ಆರ್ಜಿಎಸ್ ಅಡಿ ಬರಗಾಲದ ಪರಿಸ್ಥಿತಿಯಲ್ಲಿ 150 ಮಾನವದಿನಗಳ ಉದ್ಯೋಗ ನೀಡುವ ಕೇಂದ್ರದ ನಿಯಮವಿದೆ. ಈ ಕ್ರಮಕ್ಕೆ ಕೇಂದ್ರ ಸರ್ಕಾರದವರು ಅನುಮತಿ ನೀಡಬೇಕಿದ್ದು, ಇದುವೆರಗೆ ಈ ಅನುಮತಿಯನ್ನು ನೀಡಿಲ್ಲ ಎಂದರು.
ರಾಜ್ಯದ ದುಡ್ಡು ರಾಜ್ಯಕ್ಕೆ ನೀಡುತ್ತಿಲ್ಲ:
ಇಡೀ ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲ ಪರಿಸ್ಥಿತಿಯಿದೆ. ರಾಜ್ಯಕ್ಕೆ ಬರ ಅಧ್ಯಯನಕ್ಕಾಗಿ ಕೇಂದ್ರ ತಂಡ ಪರಿಶೀಲಿಸಿದೆ. ಆದರೂ ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ ದುಡ್ಡನ್ನು ರಾಜ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ ಎಂದರು. ಇದನ್ನೂ ಓದಿ: ಬಿಆರ್ ಪಾಟೀಲ್ ಪತ್ರದ ಬಗ್ಗೆ ಸಿಎಂ ನಿರ್ಧರಿಸುತ್ತಾರೆ: ಕೃಷ್ಣ ಬೈರೇಗೌಡ