ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ (CEC) ವಜಾಗೆ ಆಗ್ರಹಿಸಿ ನ.1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ‘ಇಂಡಿಯಾ’ (INDIA) ಒಕ್ಕೂಟದ ಪ್ರತಿಭಟನಾ ರ್ಯಾಲಿಯಲ್ಲಿ (Protest) ಕನಿಷ್ಠ 10 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.
ಈ ಬಗ್ಗೆ ಹರಿಯಾಣ ಕಾಂಗ್ರೆಸ್ ಉಸ್ತುವಾರಿ ಸಂಜಯ್ ದತ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾವ್ ನರೇಂದ್ರ ಸಿಂಗ್ ಮಾತನಾಡಿ, ಮತದಾರರ ಪಟ್ಟಿಯ ನಿಖರತೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ರಕ್ಷಣೆ – ಇವು ದೇಶದ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾದ ಅಡಿಪಾಯಗಳಾಗಿವೆ ಎಂದರು. ಇದನ್ನೂ ಓದಿ: CEC ನೇಮಕಾತಿ ಕಾಯ್ದೆ: ವಿಭಜಿತ ತೀರ್ಪು ಹಿಂಪಡೆಯಲು ಅರ್ಜಿ – ಪರಿಶೀಲಿಸುವ ಭರವಸೆ ನೀಡಿದ ಸಿಜೆಐ
ಈ ವಿಷಯಗಳಲ್ಲಿ ಕಾಂಗ್ರೆಸ್ (Congress) ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ರ್ಯಾಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕಾಂಗ್ರೆಸ್ ಆಗ್ರಹಿಸಲಿದೆ. ರಾಷ್ಟ್ರವ್ಯಾಪಿ ‘ವೋಟ್ ಬಚಾವೋ, ದೇಶ್ ಬಚಾವೋ’ (ಮತ ಉಳಿಸಿ, ದೇಶ ಉಳಿಸಿ) ಅಭಿಯಾನವು ನಿರ್ಣಾಯಕ ಹಂತವನ್ನು ತಲುಪಿದೆ. ಈ ಅಭಿಯಾನವನ್ನು ಪ್ರತಿ ಜಿಲ್ಲೆ, ಬ್ಲಾಕ್, ಗ್ರಾಮ ಮತ್ತು ಮತಗಟ್ಟೆ ಮಟ್ಟಕ್ಕೆ ಕೊಂಡೊಯ್ಯಲು ಹರಿಯಾಣದಾದ್ಯಂತ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ದಾಖಲಿಸಲು, ಅರ್ಹ ಮತದಾರರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ನ.1 ರ ರ್ಯಾಲಿಯಲ್ಲಿ ಹರಿಯಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ನೋಡಿಕೊಳ್ಳಲು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರ ಪಾತ್ರದ ಬಗ್ಗೆ ಪ್ರಶ್ನೆ ಎತ್ತಿದ ದತ್, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯನ್ನು ಖಚಿತಪಡಿಸುವುದು ಚುನಾವಣಾ ಆಯೋಗದ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಅರ್ಹ ನಾಗರಿಕರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯ ವೇಳೆ ವರದಿಯಾಗಿರುವ ಲೋಪದೋಷಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಅಥವಾ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರು ತಪ್ಪಿತಸ್ಥರೆಂದು ತನಿಖೆಯಲ್ಲಿ ಕಂಡುಬಂದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಇದನ್ನೂ ಓದಿ: ಪ್ರತಿಭಟನೆಯ ನಡುವೆಯೇ CEC ಜ್ಞಾನೇಶ್ ಕುಮಾರ್ಗಿದ್ದ Z+ ಭದ್ರತೆ ಮತ್ತಷ್ಟು ಹೆಚ್ಚಳ
