ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಕನಸು ನನಸಾಗುತ್ತಿದೆ. ಇಂದು ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ (Pran Prathistha ceremony) ನಡೆಯಲಿದೆ. ಅಯೋಧ್ಯೆಯಲ್ಲಿನ ತಯಾರಿಗಳ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ, ರಾಮಭಕ್ತರು ಬಯಸಿದ್ದು ಇಂದು ನೆರವೇರುತ್ತಿದೆ. ರಾಮಲಲ್ಲಾ ಆಸೀನರಾದ ತಕ್ಷಣ ಎಲ್ಲಾ ಕಷ್ಟಗಳು ಕೊನೆಗೊಳ್ಳುತ್ತವೆ ಎಂದು ತಿಳಿಸಿದ್ದಾರೆ.
ಕೋಟ್ಯಂತರ ಭಾರತೀಯರ ಕಂಗಳು ಶ್ರೀರಾಮನ ವೈಭವವನ್ನ ಕಣ್ತುಂಬಿಕೊಳ್ಳಲು ಕಾಯುತ್ತಿವೆ. ಕಾರ್ಯಕ್ರಮದ ಯಜಮಾನ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಮ್‌ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪೂಜೆ ನೆರವೇರಿಸಲಿದ್ದಾರೆ. ಮಂದಿರ ಉದ್ಘಾಟನೆಗೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮುಗಿಸಿ ಬಳಿಕ ಅಲ್ಲಿಂದ ರಾಮ ಮಂದಿರಕ್ಕೆ ಬರಲಿದ್ದಾರೆ. ಇದನ್ನೂ ಓದಿ: ತೀವ್ರ ಚಳಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಎಲ್.ಕೆ ಅಡ್ವಾಣಿ ಗೈರು
ಮಂದಿರದಿಂದ 3 ಕಿಲೋ ಮೀಟರ್ ದೂರದಲ್ಲಿರುವ ಸರಯೂ ನದಿಯಲ್ಲಿ ಮೋದಿ ಸ್ನಾನಕ್ಕಾಗಿಯೇ ವಿಶೇಷ ಚೌಕಿ ನಿರ್ಮಾಣ ಮಾಡಲಾಗಿದೆ. ಸತತ 11 ದಿನಗಳ ಕಾಲ `ಯಮನಿಮಯ’ ಅನುಷ್ಠಾನದಲ್ಲಿದ್ದ ಮೋದಿ, ನಾಸಿಕ್, ಲೇಪಾಕ್ಷಿ, ಗುರುವಾಯೂರು, ಕೋದಂಡರಾಮ, ರಾಮಸೇತುವಿನವರೆಗೆ ರಾಮಯಾತ್ರೆ ಕೈಗೊಂಡಿದ್ದರು. ಇವತ್ತು 5 ಗಂಟೆಗಳ ಕಾಲ ಅಯೋಧ್ಯೆಯಲ್ಲಿಯೇ ಮೋದಿ ಕಾಲ ಕಳೆಯಲಿದ್ದಾರೆ.