ಚಿಕ್ಕೋಡಿ: ಉಮೇಶ್ ಕತ್ತಿ ಅವರ ರಾಜಕೀಯ ಜೀವನ ಪುಸ್ತಕವಾಗಬೇಕು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ದಿವಂಗತ ಉಮೇಶ್ ಕತ್ತಿಯವರ ನಿವಾಸಕ್ಕೆ ಭೇಟಿ ನೀಡಿದ ಅವರು, ಸಚಿವ ಉಮೇಶ್ ಕತ್ತಿ ನನ್ನ ವೈಯಕ್ತಿಕ ಮಿತ್ರ. ಬೆಳಗಾವಿ, ಬೆಂಗಳೂರು(Bengaluru), ದೆಹಲಿಯಲ್ಲಿ ಅನೇಕ ಸಲ ಕುಳಿತು ಮಾತನಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷ ಕಟ್ಟುವ ಬಗ್ಗೆ ಅನೇಕ ಸಲಹೆ ನೀಡುತ್ತಿದ್ದರು. ಉಮೇಶ್ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದಾಗಿ ಪಕ್ಷ ಹಾಗೂ ರಾಜ್ಯಕ್ಕೆ ನಷ್ಟ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
40 ವರ್ಷಗಳ ಕಾಲದಿಂದ ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಈ 40 ವರ್ಷಗಳ ರಾಜಕೀಯ ಜೀವನವು ಪುಸ್ತಕದ ರೂಪದಲ್ಲಿ ಹೊರ ಬರಬೇಕು. ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ, ಅವರ ದೂರದೃಷ್ಟಿ, ಅವರ ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ ಎಂದರು. ಇದನ್ನೂ ಓದಿ: ಉಮೇಶ್ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ
ಬಳಿಕ ಮಾತನಾಡಿದ ಸಚಿವ ಕೆ. ಸುಧಾಕರ್(Sudhakar) ಅವರು, ಉಮೇಶ್ ಕತ್ತಿ(Umesh Katti) ಅವರ ಅಕಾಲಿಕ ನಿಧನ ನಮ್ಮೆಲ್ಲರಿಗೂ ನೋವನ್ನುಂಟು ಮಾಡಿದೆ. ಅವರದ್ದು, ನನ್ನದು ದೀರ್ಘ ಕಾಲದ ಸ್ನೇಹ ಸಂಬಂಧ. ಉಮೇಶ್ ಕತ್ತಿ ಇದ್ದಲ್ಲಿ ನಗುವಿಗೆ ಬರ ಇರಲಿಲ್ಲ. ಅವರು ಇಲ್ಲದ ನಷ್ಟವನ್ನು ಎದುರಿಸುವಂತಹ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ತಿಳಿಸಿದರು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ
ಇದೇ ವೇಳೆ ಉಮೇಶ್ ಕತ್ತಿ ಭಾವಚಿತ್ರಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್(Arun Singh) ಪುಷ್ಪ ನಮನ ಸಲ್ಲಿಸಿದರು. ನಂತರ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಸಚಿವ ಡಾ. ಕೆ. ಸುಧಾಕರ್, ಮುನಿರತ್ನ, ಎಂಟಿಬಿ ನಾಗರಾಜ್, ಸಚಿವ ಭೈರತಿ ಬಸವರಾಜ್ ಭಾಗಿಯಾಗಿದ್ದರು.