BelgaumDistrictsKarnatakaLatestLeading NewsMain Post

ಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ

ಬೆಳಗಾವಿ: ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ (Umesh Katti) ಅಂತ್ಯಕ್ರಿಯೆ ಹುಕ್ಕೇರಿಯ ಸ್ವಗ್ರಾಮ ಬೆಲ್ಲದ ಬಾಗೇವಾಡಿಯ ತೋಟದ ಮನೆಯಲ್ಲಿ ಸಂಜೆ ನೆರವೇರಿತು.

ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಧಾರ್ಮಿಕ ಪದ್ಧತಿಯಂತೆ ಅಂತಿಮ ವಿಧಿ ವಿಧಾನ ನೆರವೇರಿತು. ವೀರಶೈವ ಲಿಂಗಾಯತ ಪದ್ಧತೆಯಂತೆ ಅಂತಿಮ ವಿಧಿವಿಧಾನವನ್ನು ಬೆಲ್ಲದ ಬಾಗೇವಾಡಿ ಗ್ರಾಮದ ಮಹಾಂತ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಉಮೇಶ್ ಕತ್ತಿಯವರನ್ನು ಸಮಾಧಿ ಮಾಡಲಾಯಿತು. ಪುತ್ರ ನಿಖಿಲ್ ಅಂತಿಮ ವಿಧಿವಿಧಾನ ನೆರವೇರಿಸಿದ್ರು.   ಇದನ್ನೂ ಓದಿ: ನನ್ನಿಷ್ಟದಂತೆ ಬದುಕದಿದ್ದರೆ ಏಕೆ ಇರಬೇಕು? – ಫಿಲ್ಟರ್ ಇಟ್ಕೊಂಡು ಬದುಕುವ ಮಗ ನಾನಲ್ಲ ಎಂದಿದ್ದರು ಉಮೇಶ್ ಕತ್ತಿ

ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್. ಅಶೋಕ್, ಮುನಿರತ್ನ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು, ಉತ್ತರ ಕರ್ನಾಟಕದ ಪ್ರಮುಖ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ (61) ನಿನ್ನೆ ನಿಧನ ಹೊಂದಿದ್ದರು. ಇಂದು ಬೆಳಗ್ಗೆ ಏರ್‌ಲಿಫ್ಟ್‌ ಮೂಲಕ ಉಮೇಶ್ ಕತ್ತಿ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲಾಯಿತು. ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಆಗಮಿಸಿದ ಪಾರ್ಥಿವ ಶರೀರವನ್ನು ಬಳಿಕ ನೇರವಾಗಿ ಬೆಲ್ಲದ ಬಾಗೇವಾಡಿಯ ವಿಶ್ವರಾಜ್‌ ಶುಗರ್ಸ್ ಕಾರ್ಖಾನೆ ಆವರಣಕ್ಕೆ ಶಿಫ್ಟ್ ಮಾಡಲಾಯಿತು. ಇದನ್ನೂ ಓದಿ: ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಉಮೇಶ್ ಕತ್ತಿ

ಬೆಳಗಾವಿ ಮಿಲಿಟರಿಯ ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯ ಮುಖಾಂತರ ಬಾಗೇವಾಡಿಯ ವಿಶ್ವರಾಜ್‌ ಶುಗರ್ಸ್ ಕಾರ್ಖಾನೆಯ ಆವರಣಕ್ಕೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ವಿಶ್ವರಾಜ್‌ ಶುಗರ್ಸ್ ಕಾರ್ಖಾನೆ  ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಬೆಲ್ಲದ ಬಾಗೇವಾಡಿಯ ಉಮೇಶ್ ಕತ್ತಿ ನಿವಾಸಕ್ಕೆ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಯಿತು. ಮನೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಿ ಬಳಿಕ ಅಂತಿಮ ಯಾತ್ರೆ ನಡೆಯಿತು. ಉಮೇಶ್ ಕತ್ತಿ ನಿವಾಸದಿಂದ ತೋಟದವರೆಗೂ ಅಂತಿಮ ಯಾತ್ರೆ ಸಾಗಿ ಬಳಿಕ ಸಂಜೆ 9:40ರ ಸುಮಾರಿಗೆ ಸುಮಾರಿಗೆ ಬೆಲ್ಲದ ಬಾಗೇವಾಡಿಯ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಆಗಿದ್ದೇನು?:
ಮಂಗಳವಾರ ಸ್ವಕ್ಷೇತ್ರ ಹುಕ್ಕೇರಿಯಿಂದ ಉಮೇಶ್ ಕತ್ತಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದ ಉಮೇಶ್ ಕತ್ತಿ ಅವರು ರಾತ್ರಿ ಊಟ ಮುಗಿಸಿ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು. 10 ನಿಮಿಷವಾದರೂ ಹೊರಗೆ ಬರದಿದ್ದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡಿದ್ದರು. ಹೀಗಾಗಿ ಶೌಚಾಲಯದ ಬಾಗಿಲು ಬಡಿದಿದ್ದಾರೆ. ಆದರೆ ಕತ್ತಿ ಅವರಿಂದ ಯಾವುದೇ ಪ್ರತಿಕ್ರಿಯೆಯೂ ಬಾರದ ಹಿನ್ನೆಲೆಯಲ್ಲಿ ಸಹಾಯಕರು ಶೌಚಾಲಯದ ಬಾಗಿಲನ್ನು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಉಮೇಶ್ ಕತ್ತಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂತು. ಕೂಡಲೇ ಅವರನ್ನು ಕಾರಿನಲ್ಲಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಸುಮಾರು 11ರ ವೇಳೆಗೆ ಮೃತಪಟ್ಟಿದ್ದರು.

Live Tv

Leave a Reply

Your email address will not be published.

Back to top button