ಬೀಜಿಂಗ್: ಹುಮನಾಯ್ಡ್ ರೊಬೊಟ್‌ಗಳಿಗಾಗಿಯೇ (Humanoid Robot) ಚೀನಾ (China) ವಿಶೇಷವಾದ ಮ್ಯಾರಾಥಾನ್ ಆಯೋಜಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಓಟದ ವಿಡಿಯೋಗಳು ಈಗ ಸದ್ದು ಮಾಡುತ್ತಿದೆ.
ಏಪ್ರಿಲ್ 19 ರಂದು ಬೀಜಿಂಗ್ ಎ-ಟೌನ್ (Beijing E-Town) ಹಾಫ್-ಮ್ಯಾರಾಥಾನ್‌ನಲ್ಲಿ ರೊಬೊಟ್‌ಗಳು ರಸ್ತೆಯಲ್ಲಿ ಓಡಿವೆ. ಈ ಓಟದಲ್ಲಿ ಸುಮಾರು 300 ಕ್ಕೂ ಹೆಚ್ಚು ಹುಮನಾಯ್ಡ್ ರೊಬೊಟ್‌ಗಳು ಮತ್ತು 70 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಶೇ. 40 ರಷ್ಟು ರೊಬೊಟ್‌ಗಳು ಸ್ವತಂತ್ರವಾಗಿ ಓಡಿದರೆ, ಉಳಿದವುಗಳನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗಿತ್ತು.
ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಆನರ್ (Honor) ಅಭಿವೃದ್ಧಿಪಡಿಸಿದ ಲೈಟ್ನಿಂಗ್ (Lightning) ಎಂಬ ಹುಮನಾಯ್ಡ್ ರೊಬೊಟ್ 21 ಕಿಲೋಮೀಟರ್ ದೂರವನ್ನು ಕೇವಲ 50 ನಿಮಿಷ 26 ಸೆಕೆಂಡ್‌ಗಳಲ್ಲಿ ಕ್ರಮಿಸಿ ಜಯ ಗಳಿಸಿತು.
ಮನುಷ್ಯರ ಹಾಫ್-ಮ್ಯಾರಾಥಾನ್ (Marathon) ವಿಶ್ವ ದಾಖಲೆ ಉಗಾಂಡದ ಜಾಕೋಬ್ ಕಿಪ್ಲಿಮೋ ಹೆಸರಲ್ಲಿದೆ. ಕಿಪ್ಲಿಮೋ 57 ನಿಮಿಷ 20 ಸೆಕೆಂಡ್‌ನಲ್ಲಿ ರೇಸ್ ಮುಗಿಸಿದ್ದರೆ ಈ ರೊಬೊಟ್ ಇವರು ಕ್ರಮಿಸಿದ ಸಮಯಕ್ಕಿಂತ 7 ನಿಮಿಷ ಮೊದಲೇ ಗುರಿಯನ್ನು ತಲುಪಿತ್ತು.
ಈ ರೊಬೊಟ್ ಸುಮಾರು 5 ಅಡಿ 5 ಇಂಚು ಎತ್ತರವಿದೆ. ಇದರ ಕಾಲಿನ ಉದ್ದ ಸುಮಾರು 3 ಅಡಿಗಳಿದ್ದು, ಓಡುವಾಗ ಮನುಷ್ಯರಂತೆಯೇ ಕೈಗಳನ್ನು ಅಲುಗಾಡಿಸುತ್ತಾ ಸಮತೋಲನ ಕಾಯ್ದುಕೊಂಡಿತ್ತು. ಇದನ್ನೂ ಓದಿ: Global Tech Layoffs| ಮೊದಲ 4 ತಿಂಗಳಿನಲ್ಲಿ 80 ಸಾವಿರ ಮಂದಿಗೆ ಗೇಟ್‌ಪಾಸ್
ರೊಬೊಟ್‌ಗಳು ಈ ಓಟದ ಸಮಯದಲ್ಲಿ ಬ್ಯಾಟರಿ ಬದಲಾವಣೆ, ಹದಗೆಟ್ಟ ಹವಾಮಾನ ಮತ್ತು ಏರಿಳಿತದ ರಸ್ತೆಗಳಂತಹ ಸವಾಲುಗಳನ್ನು ಎದುರಿಸಿದ್ದವು. ಓಟದ ಮಧ್ಯೆ ಬ್ಯಾಟರಿ ಬದಲಾಯಿಸಿದರೆ 10 ನಿಮಿಷಗಳ ಪೆನಾಲ್ಟಿಯನ್ನು ನೀಡುವ ನಿಯಮವನ್ನು ಹಾಕಲಾಗಿತ್ತು.
ಓಡುವಾಗ ಬೊಟ್ ಬಿಸಿಯಾಗುವುದನ್ನು ತಡೆಯಲು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವಂತಹ ಲಿಕ್ವಿಡ್-ಕೂಲಿಂಗ್ ತಂತ್ರಜ್ಞಾನವನ್ನು (Liquid-cooling system) ಈ ರೊಬೊಟ್‌ಗಳ ಕೀಲುಗಳಲ್ಲಿ ಬಳಸಲಾಗಿತ್ತು. ಸುಮಾರು ಶೇ. 40 ರೊಬೊಟ್‌ಗಳು ಎಐ (AI) ಮತ್ತು ಸೆನ್ಸರ್‌ಗಳನ್ನು ಬಳಸಿ ಯಾವುದೇ ಮನುಷ್ಯರ ಸಹಾಯವಿಲ್ಲದೆ ತಾವಾಗಿಯೇ ಓಡಿದ್ದು ವಿಶೇಷವಾಗಿತ್ತು.
ಕೆಲ ತಂಡಗಳು ತಮ್ಮ ರೊಬೊಟ್‌ಗಳಿಗೆ ಮನುಷ್ಯರು ಬಳಸುವ 44 ಸೈಜಿನ ರನ್ನಿಂಗ್ ಶೂಗಳನ್ನು ತೊಡಿಸಿದ್ದವು. ಇದು ರೊಬೊಟ್‌ಗಳಿಗೆ ಉತ್ತಮ ಹಿಡಿತ ಮತ್ತು ಆರಾಮದಾಯಕ ಚಲನೆ ನೀಡಲು ಸಹಾಯ ಮಾಡಿತು.
ರಿಮೋಟ್ ಮೂಲಕ ನಿಯಂತ್ರಿಸಲ್ಪಡುವ ರೊಬೊಟ್‌ಗಳ ಸಮಯಕ್ಕೆ 1.2 ಪಟ್ಟು ಹೆಚ್ಚಿನ ಸಮಯವನ್ನು ಸೇರಿಸಲಾಗುತ್ತಿತ್ತು. ಸ್ವಯಂ ಚಾಲಿತ ರೊಬೊಟ್‌ಗಳಿಗೆ ಪ್ರೋತ್ಸಾಹ ನೀಡಲು ಈ ನಿಯಮ ಮಾಡಲಾಗಿತ್ತು.
ರೇಸ್ ಸಮಯದಲ್ಲಿ ಕೆಲವು ರೊಬೊಟ್‌ಗಳು ಬ್ಯಾರಿಯರ್‌ಗಳಿಗೆ ಡಿಕ್ಕಿ ಹೊಡೆದವು ಮತ್ತು ಕೆಲವು ಕೆಳಗೆ ಬಿದ್ದವು. ಮೊದಲ ಸ್ಥಾನ ಗಳಿಸಿದ ʻಲೈಟ್ನಿಂಗ್ʼ ಕೂಡ ರೇಸ್‌ನ ಕೊನೆಯ ಹಂತದಲ್ಲಿ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಬಿದ್ದಿತ್ತು, ಆದರೆ ತಕ್ಷಣವೇ ಎದ್ದು ಓಟ ಮುಂದುವರಿಸಿತ್ತು.
2025 ರಲ್ಲಿ ನಡೆದ ಮೊದಲ ರೇಸ್‌ನಲ್ಲಿ ಜಯಗಳಿಸಿದ ‘ಟಿಯಾಂಗಾಂಗ್ ಅಲ್ಟ್ರಾ’ ರೊಬೊಟ್ 2 ಗಂಟೆ 40 ನಿಮಿಷ ಸಮಯ ತೆಗೆದುಕೊಂಡಿತ್ತು. ಆದರೆ ಈ ವರ್ಷದ ವಿಜೇತ ರೊಬೊಟ್ ಕೇವಲ 50 ನಿಮಿಷಗಳಲ್ಲಿ ಓಟ ಮುಗಿಸುವ ಮೂಲಕ, ತಂತ್ರಜ್ಞಾನದಲ್ಲಿ ಮೂರು ಪಟ್ಟು ವೇಗದ ಪ್ರಗತಿ ಕಂಡುಬಂದಿದೆ. ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿನ ತನ್ನ ಅಗಾಧ ಬೆಳವಣಿಗೆಯನ್ನು ಜಗತ್ತಿಗೆ ತೋರಿಸಲು ಚೀನಾ ಈ ಸ್ಪರ್ಧೆಯನ್ನು ಆಯೋಜಿಸಿತ್ತು.

