ಜೈಪುರ: ನಾಳೆ (ಏ.21) ಪ್ರಧಾನಿ ನರೇಂದ್ರ ಮೋದಿ ಅವರು (PM Modi) ಉದ್ಘಾಟನೆ ಮಾಡಬೇಕಿದ್ದ ರಿಫೈನರಿ ಘಟಕಕ್ಕೆ ಬೆಂಕಿ ಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ, ರಾಜಸ್ಥಾನ ಸಿಎಂ ಬಜನ್ ಲಾಲ್ ಶರ್ಮಾ ಸೇರಿದಂತೆ ಪ್ರಮುಖ ನಾಯಕರು ನಾಳೆ 79,000 ಕೋಟಿ ರೂ. ಮೌಲ್ಯದ ರಿಫೈನರಿ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಸದ್ಯ ಅಗ್ನಿ ಅವಘಡದಲ್ಲಿ ರಿಫೈನರಿ ಘಟಕಕ್ಕೆ ಭಾರಿ ಹಾನಿಯಾಗಿದೆ. ಸದ್ಯ ಘಟಕಕ್ಕೆ ಬೆಂಕಿ ಬಿದ್ದಿರುವ ಪರಿಣಾಮ ನಾಳೆ ಮೋದಿ ಉದ್ಘಾಟನಾ ಕಾರ್ಯಕ್ರಮ ಮುಂದೂಡುವ ಸಾಧ್ಯತೆ ಇದೆ. ರಿಪೇರಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿಯಾಗಿ ಖಾಸಗಿ ವಿಮಾನ ಪತನ
ರಾಜಸ್ಥಾನದ (Rajasthan) ಬಲೋತ್ರದಲ್ಲಿ (Balotra) 79,000 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಿದ್ದ ಅತ್ಯಾಧುನಿಕ ತಂತ್ರಜ್ಞಾನದ ಹಾಗೂ ಸುಸಜ್ಜಿತ ರಿಫೈನರಿ ಘಟಕ ಇದಾಗಿದೆ. ಈ ಪಚಪದ್ರಾ ರಿಫೈನರಿ ಘಟಕವು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ರಾಜಸ್ಥಾನ ಸರ್ಕಾರದ ಜಂಟಿ ಉದ್ಯಮವಾಗಿದೆ.
ಭಾರತದಲ್ಲಿ 23 ತೈಲ ರಿಫೈನರಿ ಘಟಕಗಳಿವೆ. ಈ ಪೈಕಿ ರಾಜಸ್ಥಾನದಲ್ಲಿ ಉದ್ಘಾಟನೆಯಾಗಬೇಕಿದ್ದ ಈ ರಿಫೈನರಿ ಘಟಕ ಅತ್ಯಾಧುನಿಕ ಘಟಕವಾಗಿತ್ತು. ಬರೋಬ್ಬರಿ 41 ದೇಶಗಳಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಬಳಿಕ ಭಾರತದಲ್ಲಿ ಶುದ್ಧೀಕರಣ ಮಾಡಲಾಗುತ್ತದೆ. ಬಲೋತ್ರದಲ್ಲಿರುವ ಈ ರಿಫೈನರಿ ಘಟಕ ನೇರವಾಗಿ ಮುದ್ರಾ ಬಂದರಿಗೆ ಸಂಪರ್ಕಹೊಂದಿದೆ. ಹೀಗಾಗಿ ಸಾಗಣೆ, ಪೂರೈಕೆಯಲ್ಲೂ ಭಾರತಕ್ಕೆ ಹೆಚ್ಚಿನ ಲಾಭಗಳಿವೆ. ಅಷ್ಟೇ ಅಲ್ಲ ಈ ಘಟಕದಿಂದ ವಾರ್ಷಿಕವಾಗಿ ರಾಜಸ್ಥಾನ ಸರ್ಕಾರಕ್ಕೆ 5,000 ಕೋಟಿ ರೂ. ಆದಾಯದ ನಿರೀಕ್ಷೆ ಇದೆ.
ಘಟಕದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ 20 ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಈವರೆಗೆ ಯಾವುದೇ ಸಾವು-ನೋವು ವರದಿಯಾಗಿಲ್ಲ. ರಾಜಸ್ಥಾನದ ಬಲೋತ್ರದಲ್ಲಿರುವ ಈ ರಿಫೈನರಿ ಘಟಕ ಭಾರತದ ಮೊದಲ ಗ್ರೀನ್ ಫೀಲ್ಡ್ ರಿಫೈನರಿ ಎಂದೇ ಗುರುತಿಸಿಕೊಂಡಿದೆ.ಇದನ್ನೂ ಓದಿ: ಭ್ರಷ್ಟಾಚಾರವೇ ಕಾಂಗ್ರೆಸ್‌ನ ಅಸಲಿ ಗ್ಯಾರಂಟಿ – ಇಡಿ ದಾಳಿಗೆ ಬಿಜೆಪಿ ಟೀಕೆ

