ಕಾರವಾರ: ಶಾಸಕ ಸತೀಶ್ ಸೈಲ್ (Satish Sail) ತಮ್ಮ ಹಿರಿಯ ಮಗಳು ಸಾಧ್ವಿ ಸೈಲ್ (Sadhvi Satish Sail) ದೇಶದ ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟ ತೊಟ್ಟು ವಿಶ್ವ ಸುಂದರಿ ಸ್ಪರ್ಧೆಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಸತೀಶ್ ಸೈಲ್, ಮಗಳು ಬಿಸಿನೆಸ್ ಮಾಡಬೇಕು ಎಂದಿದ್ದಳು. ಆದರೆ, ತಾನು ಮಾಡೆಲಿಂಗ್ಗೆ ಹೋಗಬೇಕು ಅಂತ ಮನಸಿನೊಳಗೆ ಅಂದುಕೊಂಡಿದ್ದಳು. ಆಕೆ ಮಾಡೆಲಿಂಗ್ಗೆ ಹೋಗುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ. ಗೊತ್ತಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಳಿ ಕರೆದೊಯ್ದು ಬುದ್ದಿವಾದ ಹೇಳಿಸಿದ್ದೆ. ಆದರೆ, ಡಿಕೆ ಶಿವಕುಮಾರ್ ಅವರು ಆಕೆಯ ಇಷ್ಟದಂತೆ ನಡೆದುಕೊಳ್ಳಲು ಹೇಳಿದ್ರು. ಇದೀಗ ಮಿಸ್ ಇಂಡಿಯಾ ಆಗಿ ಹೆಸರು ತಂದಿದ್ದಾಳೆ ಎಂದು ಖುಷಿಪಟ್ಟರು. ಇದನ್ನೂ ಓದಿ: ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
ಸಮಾಜಸೇವೆ ಬಗ್ಗೆ ಆಕೆಗೆ ತುಂಬಾ ಇಷ್ಟ ಇದೆ. ಬಡಮಕ್ಕಳ ಶಿಕ್ಷಣಕ್ಕಾಗಿ ಆಕೆ 342 ಜನರಿಂದ ಇಪ್ಪತ್ತೈದು ಲಕ್ಷ ದೇಣಿಗೆಯನ್ನು ಸಂಗ್ರಹ ಮಾಡಿ ನೀಡಿದ್ದಳು. ನಾನು ರಾಜಕಾರಣಿ ಅಲ್ಲ, ನಾನೊಬ್ಬ ಬಿಸಿನೆಸ್ ಮ್ಯಾನ್, ನನ್ನ ಬಿಸಿನೆಸ್ಗೆ ತೊಂದರೆಯಾಗಿದ್ದಕ್ಕೆ ನಾನು ರಾಜಕೀಯಕ್ಕೆ ಬಂದೆ. ನನಗೆ ಜನರ ಸೇವೆ ಮಾಡೋದು ಇಷ್ಟ, ರಾಜಕಾರಣ ಅಲ್ಲ. ಮಗಳಿಗೂ ಜನಸೇವೆ ಇಷ್ಟ. ನನ್ನಂತೆ ಅವಳ ಜೀವನದಲ್ಲೂ ಸಡನ್ ಟರ್ನ್ ಆಗಿದೆ. ನಾನು ನನ್ನ ಕಷ್ಟವನ್ನು ಅವಳಿಗೆ ತೋರಿಸಿಕೊಡಲಿಲ್ಲ. ಅವಳು ಕೆನಡಾದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿದಳು. ಆಕೆ ಹುಟ್ಟಿದ್ದು ಗೋವಾದಲ್ಲಿ. ಹಾಗಾಗಿ, ಗೋವಾದಿಂದ ಮಿಸ್ ಇಂಡಿಯಾಗೆ ಸ್ಪರ್ಧೆ ಮಾಡಿದಳು. ಕರ್ನಾಟಕದಲ್ಲೇ ತರಬೇತಿ ಪಡೆದಳು. ಕರ್ನಾಟಕದವರಿಗೆ ಅವಕಾಶ ಸಿಗಲಿ. ನನ್ನ ಹುಟ್ಟೂರಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪರ್ಧೆ ಮಾಡಿದಳು. ನನಗೆ ಆಕೆ ಆಯ್ಕೆ ಆಗುತ್ತಾಳೆ ಅಂತ ನಂಬಿಕೆ ಇರಲಿಲ್ಲ. ಬೇಡ ಬಾ ಎಂದಿದ್ದೆ. ಆದ್ರೆ ಎಲ್ಲದರಲ್ಲೂ ಸೆಲೆಕ್ಟ್ ಆದಳು. ನಾನು ಅಲ್ಲಿ ಇರಬೇಕಿತ್ತು. ಅವಳು ಮಿಸ್ ಇಂಡಿಯಾ ಕಿರೀಟ ತೊಡುವುದನ್ನ ಮಿಸ್ ಮಾಡಿಕೊಂಡೆ ಎಂದು ಭಾವುಕರಾದರು.
ಸತೀಶ್ ಸೈಲ್ ಪತ್ನಿ ಸಹ ಮಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಓದು ಮುಗಿಸಿ ಮನೆಗೆ ಬಂದವಳೆ ತಾನು ಮಿಸ್ ಇಂಡಿಯಾಗೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದಳು. ರಾತ್ರಿ 11 ರವರೆಗೆ ಜಿಮ್ಗೆ ಹೋಗುತಿದ್ದಳು. ಕಠಿಣ ಪರಿಶ್ರಮಪಟ್ಟಿದ್ದಳು. ಆಕೆ ಆಯ್ಕೆಯಾಗುತ್ತಾಳೆ ಎಂಬ ನಂಬಿಕೆ ನಮಗೆ ಇರಲಿಲ್ಲ. ಆದರೆ, ಅವಳಿಗೆ ನಂಬಿಕೆ ಇತ್ತು. ಗುರುಹಿರಿಯರ ಆಶೀರ್ವಾದದಿಂದ ಆಕೆ ಮಿಸ್ ಇಂಡಿಯಾ ಆಗಿ ಹೊರಹುಮ್ಮಿದ್ದಾಳೆ. ಇದೀಗ ಮಿಸ್ ವರ್ಲ್ಡ್ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳುತಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.


