ಭ್ರಷ್ಟಾಚಾರವೇ ಕಾಂಗ್ರೆಸ್‌ನ ಅಸಲಿ ಗ್ಯಾರಂಟಿ – ಇಡಿ ದಾಳಿಗೆ ಬಿಜೆಪಿ ಟೀಕೆ

2 Min Read

ಬೆಂಗಳೂರು: ಭ್ರಷ್ಟಾಚಾರವೇ ಕಾಂಗ್ರೆಸ್‌ನ (Congress) ಅಸಲಿ ಗ್ಯಾರಂಟಿ ಎಂದು ಇಡಿ ದಾಳಿಗೆ ಸಂಬಂಧಿಸಿದಂತೆ ಬಿಜೆಪಿ (BJP) ಟೀಕಿಸಿದೆ.

ಎಕ್ಸ್ ಖಾತೆಯಲ್ಲಿ ಬಿಟ್‌ಕಾಯಿನ್ ಹಗರಣ ಸಂಬಂಧ ಇಡಿ ದಾಳಿ ನಡೆಸಿರುವ ಬಗ್ಗೆ ಬಿಜೆಪಿ ಕಾಂಗ್ರೆಸ್‌ಅನ್ನು ಟೀಕಿಸಿದೆ. ಭ್ರಷ್ಟಾಚಾರವೇ ಕಾಂಗ್ರೆಸ್‌ನ ಅಸಲಿ ಗ್ಯಾರಂಟಿ. ಬಿಟ್‌ಕಾಯಿನ್ ಹಗರಣದ ಕರಾಳ ಸತ್ಯ ಈಗ ದಿನೇ ದಿನೇ ಬಯಲಾಗುತ್ತಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಾಂಗ್ರೆಸ್ ಶಾಸಕ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಅವರ ಪುತ್ರ ನಲಪಾಡ್ ನಿವಾಸಗಳ ಮೇಲೆ ನಡೆದಿರುವ ಇಡಿ ದಾಳಿಯೇ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮುಖವಾಡವನ್ನು ಕಳಚಿ ಹಾಕಿದೆ ಎಂದಿದೆ. ಇದನ್ನೂ ಓದಿ: ನಲಪಾಡ್ ಮನೆ ಮೇಲೆ ಇಡಿ ದಾಳಿಗೆ ಆ 10 ಲಕ್ಷ ಕಾರಣಾನಾ?

ಹಗರಣದ ರೂವಾರಿ ಶ್ರೀಕಿ ಜೊತೆಗಿನ ಇವರ ಅಕ್ರಮ ವ್ಯವಹಾರಗಳು ಹಾಗೂ ಕಪ್ಪುಹಣದ ದಂಧೆ ರಾಜ್ಯದ ಜನತೆಗೆ ಮಾಡಿದ ಬಹುದೊಡ್ಡ ದ್ರೋಹವಾಗಿದೆ. ಸದಾ ನೀತಿಪಾಠ ಹೇಳುವ ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಶಾಸಕರ ಈ `ಬಿಟ್‌ಕಾಯಿನ್’ ದಂಧೆಯ ಬಗ್ಗೆ ನಿಮ್ಮ ಉತ್ತರೇನು? ಎಂದು ಕೇಳಿ ಆಗ್ರಹಿಸಿದೆ.

ಆಗಿದ್ದೇನು?
ಬಿಟ್ ಕಾಯಿನ್ ಕಿಂಗ್‌ಪಿನ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಜೊತೆಗಿನ ಆರ್ಥಿಕ ವ್ಯವಹಾರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ನಲ್ಪಾಡ್ ಹ್ಯಾರೀಸ್‌ಗೆ ಇ.ಡಿ. ಶಾಕ್ ಕೊಟ್ಟಿದೆ. ಅಲ್ಲದೆ, ಹ್ಯಾರೀಸ್ ಪುತ್ರರಾದ ನಲ್ಪಾಡ್, ಓಮರ್ ಮನೆಗಳ ಮೇಲೂ ಇ.ಡಿ. ದಾಳಿ ಮಾಡಿದೆ. ಬೆಳಗ್ಗೆ 6:30ರ ಸುಮಾರಿಗೆ ಒಟ್ಟು 17 ಸ್ಥಳಗಳಲ್ಲಿ ರೇಡ್ ಮಾಡಿರುವ ಇ.ಡಿ. ಶೋಧ ನಡೆಸ್ತಿದೆ. ಬಿಟ್‌ಕಾಯಿನ್ ಹಣದಲ್ಲಿ ನಲ್ಪಾಡ್ ದೊಡ್ಡ ದೊಡ್ಡ ನಾಯಕರಿಗಾಗಿ ವೈಟ್‌ಫೀಲ್ಡ್ನಲ್ಲಿರುವ ಚಿಪ್ಸನ್ ಏವಿಯೇಷನ್ ಹೆಲಿಕಾಪ್ಟರ್ ಬುಕ್ ಮಾಡಿದ್ದ. ಹೀಗಾಗಿ, ಈಗ ಚಿಪ್ಸನ್ ಹೆಲಿಕಾಪ್ಟರ್ ಕಂಪನಿ ಹಾಗೂ ನಲ್ಪಾಡ್ ಮೂಲಕ ಹೆಲಿಕಾಪ್ಟರ್ ಬುಕ್ ಮಾಡಿದ್ದವರಿಗೂ ಆತಂಕ ಶುರುವಾಗಿದೆ.

ನಲ್ಪಾಡ್ ಮನೆ, ಕಚೇರಿ, ಕ್ರಿಪ್ಟೋ ಕಂಪನಿಗಳಾದ ಎಲೆಕ್ಟ್ರಾನಿಕ್ ಸಿಟಿಯ ಇನ್‌ಪೀಜ್ ಐಟಿ ಸೆಲ್ಯುಲೋಸ್, ಹೋರೋಸ್ ಕ್ರಿಪ್ಟೋ ಕಂಪನಿಯ ಮೇಲೆ ರೇಡ್ ಮಾಡಿ ದಾಖಲೆಗಳನ್ನು ಪರಿಶೀಲಿಸ್ತಿದೆ. ಅಂತಾರಾಷ್ಟ್ರೀಯ ಹ್ಯಾಕರ್ ಆಗಿರುವ ಶ್ರೀಕಿ ಬಿಟ್‌ಫೈನೆಕ್ಸ್-ಯುನೋಕಾಯಿನ್ ತರಹದ ಎಕ್ಸ್ಚೇಂಜ್‌ಗಳನ್ನು ಹ್ಯಾಕ್ ಮಾಡಿದ್ದ, ಕೋಟ್ಯಂತರ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿ ಕಳ್ಳತನ ಮಾಡಿ ಪ್ರಭಾವಿಗಳಿಗೆ ಮಾರಿದ್ದ. ಶ್ರೀಕಿಯನ್ನು ಬಂಧಿಸಿದ್ದ ಸಿಸಿಬಿ ಕೋಕಾ ಕಾಯಿದೆ ಜಾರಿಗೊಳಿಸಿದ್ದರು. ಅಂದಹಾಗೆ ಹ್ಯಾರಿಸ್ ಹಾಗೂ ಪುತ್ರರಿಗೆ ಮಾತ್ರ ಅಲ್ಲ. ಮತ್ತೊಬ್ಬ ಕಾಂಗ್ರೆಸ್ ಮುಖಂಡ ರೆಹಮಾನ್ ಖಾನ್ ಮೊಮ್ಮಗ ಮಹಮದ್ ಹಕೀಬ್‌ಗೂ ಶ್ರೀಕಿ ನಂಟಿರುವ ಕಾರಣ, ಜಯನಗರದ ಎನ್‌ಎಂಕೆಆರ್‌ವಿ ಕಾಲೇಜ್ ಬಳಿಯ ಹಕೀಬ್ ಮನೆ ಮೇಲೂ ಇಡಿ ದಾಳಿ ಮಾಡಿದೆ.ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ

Share This Article