ಮುಂಬೈ: ಮಹಾರಾಷ್ಟ್ರದ (Maharashtra) ಅಮರಾವತಿಯಲ್ಲಿ (Amravati) ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಅಪ್ರಾಪ್ತೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಂತ್ರಸ್ತೆ ಆತ್ಮಹತ್ಯೆಗಾಗಿ ವಝರ್ ಅಣೆಕಟ್ಟಿಗೆ ಬಂದಿದ್ದಳು. ಇದನ್ನು ಗಮನಿಸಿದ ಪೊಲೀಸರು ಅವಳನ್ನು ರಕ್ಷಿಸಿದ್ದಾರೆ.
ಬಂಧನಕ್ಕೊಳಗಾಗಿರುವ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಎಂಬಾತನಿಂದ ಬಾಲಕಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು. ಈ ಬಾಲಕಿ ಮಾತ್ರವಲ್ಲದೇ ಸುಮಾರು 180 ಬಾಲಕಿಯರ ಮೇಲೆ ಆರೋಪಿ ದೌರ್ಜನ್ಯ ಎಸಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ದೌರ್ಜನ್ಯದ ವಿಡಿಯೋಗಳು ವೈರಲ್ ಆದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಬಂಧಿತನ ಮೊಬೈಲ್ನಲ್ಲಿ ಆತ ರೆಕಾರ್ಡ್ ಮಾಡಿದ್ದ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು. ಇಲ್ಲಿಯವರೆಗೆ ಎಂಟು ಮಂದಿ ಸಂತ್ರಸ್ತೆಯರು ಅಯಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: 180 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ – ವಿಕೃತ ಕಾಮುಕನ ಮನೆಗೆ ಬುಲ್ಡೋಜರ್ ದಾಳಿ
ಮತ್ತೋರ್ವ ಆರೋಪಿ ಅಂದರ್
ಪೊಲೀಸರು ಶನಿವಾರ (ಏ.18) ನಾಗ್ಪುರದ 15 ವರ್ಷದ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಮತ್ತೊಬ್ಬ 16 ವರ್ಷದ ಬಾಲಕಿಯ ತಾಯಿಯಿಂದ ದೂರು ದಾಖಲಿಸಿಕೊಂಡಿದ್ದಾರೆ. ದೂರಿನ ಅನ್ವಯ ಪೋಕ್ಸೋ ಕೇಸ್ ದಾಖಲಿಸಿಕೊಂಡು ಅಯಾಜ್ನ ಸ್ನೇಹಿತ ಉಜೈರ್ ಖಾನ್ನನ್ನು ಬಂಧಿಸಲಾಗಿದೆ.
ಆಯಾಜ್ ಮತ್ತು ಉಜೈರ್ ಖಾನ್ ನಡುವಿನ ವಿವಾದದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅಯಾಜ್ ತನ್ನ ಫೋನ್ನ್ನು ಅಂಗಡಿಯಲ್ಲಿ ಬಿಟ್ಟು ಹೋಗಿದ್ದಾಗ, ಅದರಲ್ಲಿದ್ದ ಸಂತ್ರಸ್ತೆಯರ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಉಜೈರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇಲ್ಲಿಯವರೆಗೆ ಪೊಲೀಸರು ಎಂಟು ಶಂಕಿತರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಏಳು ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್ ಮತ್ತು ಟ್ಯಾಬ್ಲೆಟ್ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಅಯಾಜ್ ಹುಡುಗಿಯರನ್ನು ಸ್ನೇಹಿತನ ಮನೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಸ್ನೇಹಿತನ ಮನೆ ಬಳಸಿಕೊಂಡಿದ್ದಕ್ಕೆ ಆತನಿಗೆ ಪ್ರತಿ ಬಾರಿ 500 ರೂ.ಗಳನ್ನು ಪಾವತಿಸಿದ್ದಾಗಿಯೂ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: 180 ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ, 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದ ಆರೋಪಿ ಬಂಧನ

