ಕಾರವಾರ: ಕಳ್ಳರು ಸಿಕ್ಕ ವಸ್ತುಗಳನ್ನ ದೋಚಿ ಹೋಗುತ್ತಾರೆ. ಆದರೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನ ಕನಕನಹಳ್ಳಿಯಲ್ಲೊಬ್ಬ ಕಳ್ಳ, ತಾನು ಕಳ್ಳತನ ಮಾಡುವ ಅಂಗಡಿಗೆ ವಿದ್ಯುತ್ ಹರಿಸಿ ಮಾಲೀಕರು ಮಳಿಗೆಯ ಬಾಗಿಲು ತೆರೆದರೇ ಶಾಕ್ ಹೊಡೆಯುವಂತೆ ಮಾಡಿ ಹೋಗುತಿದ್ದ ವಿಚಿತ್ರ ಪ್ರಕರಣ ವರದಿಯಾಗಿದೆ.
ಕನಕನಹಳ್ಳಿಯ ನಾರಾಯಣ ಸಿದ್ದಿ ಎಂಬಾತನೇ ಈ ಕೃತ್ಯ ಎಸಗುತ್ತಿದ್ದ ಕಳ್ಳ. ಈತ ತಮ್ಮ ಊರಿನ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ, ಒಂದೇ ಅಂಗಡಿಯಲ್ಲಿ ನಾಲ್ಕೈದು ಬಾರಿ ಕಳ್ಳತನ ಮಾಡಿದ್ದಾನೆ. ರಾತ್ರಿ ವೇಳೆ ಊರಿನ ಅಂಗಡಿಗಳಿಗೆ ನುಗ್ಗುವ ಈತ ಅಂಗಡಿಯೊಳಗೆ ಹಣ ಹಾಗೂ ಚಿಕ್ಕಪುಟ್ಟ ವಸ್ತುಗಳನ್ನ ಕದ್ದು, ಅಂಗಡಿಯ ಬಾಗಿಲಿಗೆ ವಿದ್ಯುತ್ ಹರಿಸಿ ಪರಾರಿಯಾಗುತ್ತಾನೆ. ಇದನ್ನೂ ಓದಿ: ಮಣಿಪಾಲ್ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್ – ವಿದ್ಯಾರ್ಥಿ ತಲೆಗೆ ಗಂಭೀರ ಗಾಯ
ಅಂಕೋಲದ ಕನಕನಹಳ್ಳಿ ನರಸಿಂಹ ಭಾಗವತ ಅವರ ಅಂಗಡಿಯಲ್ಲಿ ಐದು ಬಾರಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಮೊದಲು ಚಿಕ್ಕಪುಟ್ಟ ವಸ್ತುಗಳನ್ನ ಕಳ್ಳತನ ಮಾಡಿದ್ದರಿಂದ ಅಂಗಡಿ ಮಾಲೀಕರು ಸಹ ಸುಮ್ಮನೆ ಬಿಟ್ಟಿದ್ದರು. ಹೀಗೆ ಅಕ್ಕ ಪಕ್ಕದ ಅಂಗಡಿಯಲ್ಲೂ ಆತನೇ ಕಳ್ಳ ಎಂದು ಗೊತ್ತಿದ್ದರೂ ದೊಡ್ಡ ಮಟ್ಟದ ವಸ್ತುಗಳು ಕಳ್ಳತನ ಆಗದ ಕಾರಣ ದೂರು ನೀಡದೇ ಬಿಡುತಿದ್ದರು.
ನಾರಾಯಣ ಎಲ್ಲಿ ಕಳ್ಳತನ ಮಾಡುತ್ತಾನೋ ಅಲ್ಲಿ ವಿದ್ಯುತ್ ಶಾಕ್ ಹೊಡೆಸಿಕೊಳ್ಳುತಿದ್ದ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗೆ ಹೇಗೆ ವಿದ್ಯುತ್ ಶಾಕ್ ಹೊಡೆಯುತಿತ್ತು ಎಂಬುದು ಅರಿವಿಗೆ ಬರುತ್ತಿರಲಿಲ್ಲ. ನರಸಿಂಹ ಭಾಗವತರ ಅಂಗಡಿಯಲ್ಲಿ ಈತ ಹಲವು ಬಾರಿ ಕಳ್ಳತನ ಮಾಡಿದ್ದರಿಂದ ಸಿಸಿ ಟಿವಿ ಹಾಕಿಸಿದ್ದರು. ಇದರಲ್ಲಿ ಆತ ಮಾಡುತಿದ್ದ ಕೃತ್ಯ ಬಯಲಾಗಿದೆ.
ಅಂಕೋಲ ಠಾಣೆಯಲ್ಲಿ ನಾರಾಯಣ ಸಿದ್ದಿ ವಿರುದ್ಧ ದೂರು ದಾಖಲಾಗಿದೆ. ಆರೋಪಿ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಓಡಾಡುತಿದ್ದು, ಆಗಾಗ ಅಂಗಡಿಗೆ ಕನ್ನ ಹಾಕಿ, ವಿದ್ಯತ್ ಹರಿಸುವುದನ್ನು ಮುಂದುವರಿಸಿದ್ದಾನೆ. ಇದನ್ನೂ ಓದಿ: ಕಾಡುಗೋಡಿ ಬಾಲಕಿ ಕೊಲೆ ಕೇಸ್ – ಆರೋಪಿ ಪ್ರಿಯಾಂಕಾಗೆ ಜಾಮೀನು ಮಂಜೂರು
