ನವದೆಹಲಿ: ಉತ್ತರಾಖಂಡದ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ (Ankita Bhandari Murder Case) `ವಿಐಪಿ ಕೋನ’ದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ದೆಹಲಿಯ ಇಂಡಿಯಾ ಗೇಟ್ (India Gate) ಬಳಿ ಪ್ರತಿಭಟನೆ ನಡೆಸಿ ವಶದಲ್ಲಿದ್ದ ಅಂಕಿತಾ ಭಂಡಾರಿ ಪೋಷಕರು ಸೇರಿದಂತೆ ಕಾಂಗ್ರೆಸ್ನ ಎಲ್ಲಾ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು (Delhi Police) ಗುರುವಾರ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಬಳಿಕ ಅಂಕಿತಾ ಪೋಷಕರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಗುರುವಾರ ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು. ಈ ಕ್ರಮಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ ಹಾಗೂ ಅಂಕಿತಾಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತಿದ್ದವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚೀನಾದ ಬಿಡಿಭಾಗ ಬಳಸಿ ಕ್ಷಿಪಣಿಗಳನ್ನ ತಯಾರಿಸಲು ಹೌತಿಗಳ ಯತ್ನ – ಇಸ್ರೇಲ್, ಸೌದಿ ಗುರಿಯಾಗುವ ಸಾಧ್ಯತೆ
ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ರಾತ್ರಿ ಪ್ರತಿಭಟನೆ ನಡೆಸಲಾಗಿತ್ತು. ಅಂಕಿತಾ ಭಂಡಾರಿ ಪ್ರಕರಣದಲ್ಲಿ ಪ್ರಸ್ತಾಪವಾಗಿರುವ `ವಿಐಪಿ ಕೋನ’ದ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ಈ ನೇಮಕಾತಿಯನ್ನು ತಡೆಹಿಡಿಯಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.
`ವಿಐಪಿ ಕೋನ’ದ ತನಿಖೆಗೆ ಕುಟುಂಬದ ಒತ್ತಾಯ:
ಅಂಕಿತಾ ಭಂಡಾರಿ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂಬುದು ಕುಟುಂಬದ ಪ್ರಮುಖ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಟ್ಟದ ತನಿಖೆ ಪೂರ್ಣಗೊಳ್ಳುವವರೆಗೆ ದುಷ್ಯಂತ್ ಕುಮಾರ್ ಗೌತಮ್ ಅವರ ರಾಜ್ಯಪಾಲರ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಅಂಕಿತಾ ಪೋಷಕರು ಒತ್ತಾಯಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದ ಬಳಿಕ ಬಸ್ನೊಳಗಿನಿಂದಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಕಿತಾ ಅವರ ತಂದೆ, ತಮ್ಮ ಮಗಳಿಗೆ ನ್ಯಾಯ ಸಿಗುವವರೆಗೆ ದೇಶಾದ್ಯಂತ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನ್ಯಾಯ ಸಿಗದಿದ್ದರೆ, ನನ್ನ ಮಗಳಿಗೆ ನ್ಯಾಯ ದೊರೆಯುವವರೆಗೆ ಇಡೀ ದೇಶಾದ್ಯಂತ ಪ್ರತಿಭಟನೆಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯದಲ್ಲಿ ಭಾರತೀಯರ ಮೇಲೆ ಸಾಮೂಹಿಕ ಗುಂಡಿ ದಾಳಿಗೆ ಸಂಚು – ಅಮೆರಿಕದ 19ರ ಯುವಕ ಅರೆಸ್ಟ್
ಮೊದಲನೆಯದಾಗಿ, ದುಷ್ಯಂತ್ ಗೌತಮ್ ಅವರ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ನೇಮಕಾತಿಯನ್ನು ರದ್ದುಗೊಳಿಸದಿದ್ದರೆ, ಮತ್ತೊಮ್ಮೆ ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ. ನನ್ನ ಮಗಳಿಗೆ ನ್ಯಾಯ ಸಿಗಲೇಬೇಕು ಎಂದು ಅಂಕಿತಾ ತಂದೆ ತಿಳಿಸಿದ್ದಾರೆ.
ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಂಕಿತಾ ಕುಟುಂಬದವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ಇಂದಿನಿಂದ 4 ದಿನ ಶ್ರೀರಂಗಪಟ್ಟಣ ದಸರಾ ಸಂಭ್ರಮ – ನಟ ರವಿಚಂದ್ರನ್ರಿಂದ ಚಾಲನೆ
2022ರಲ್ಲಿ ನಡೆದಿತ್ತು ಅಂಕಿತಾ ಭಂಡಾರಿ ಕೊಲೆ:
ಉತ್ತರಾಖಂಡದ ರೆಸಾರ್ಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಅವರನ್ನು 2022ರ ಸೆಪ್ಟೆಂಬರ್ನಲ್ಲಿ ಕೊಲೆ ಮಾಡಲಾಗಿತ್ತು. ಅದೇ ತಿಂಗಳ 24ರಂದು ಚಿಲ್ಲಾ ಕಾಲುವೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಈ ಪ್ರಕರಣದಲ್ಲಿ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಹಾಗೂ ಇಬ್ಬರು ಉದ್ಯೋಗಿಗಳಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಅವರಿಗೆ 2025ರ ಮೇ 30ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕೊಲೆ, ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತ್ತು. ಇದನ್ನೂ ಓದಿ: ಹೂವಿನ ಅಲಂಕಾರಕ್ಕೆ 90 ಲಕ್ಷ, ಡಾನ್ಸ್ ಮಾಡೋಕೆ 80 ಲಕ್ಷ – ಹಾಸನಾಂಬ ಜಾತ್ರೆಯ ಖರ್ಚು ಕೇಳಿ ಬೆಚ್ಚಿಬಿದ್ದ ರೇವಣ್ಣ!
ಪೊಲೀಸ್ ಕ್ರಮಕ್ಕೆ ಕಾಂಗ್ರೆಸ್ ನಾಯಕರ ಆಕ್ರೋಶ:
ಅಂಕಿತಾ ಪೋಷಕರು ಸೇರಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ಕಾಂಗ್ರೆಸ್ ನಾಯಕಿಯರಾದ ಸುಪ್ರಿಯಾ ಶ್ರೀನೇತ್, ಪವನ್ ಖೇರಾ ಮತ್ತು ಖಾಜಿ ನಿಜಾಮುದ್ದೀನ್ ಖಂಡಿಸಿದ್ದಾರೆ.
ಕಾAಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, ಇದು ದೌರ್ಜನ್ಯ. ಇಂಡಿಯಾ ಗೇಟ್ನಲ್ಲಿ ಪ್ರಜಾಪ್ರಭುತ್ವ ಅಂತ್ಯಗೊಳ್ಳುತ್ತಿರುವುದನ್ನು ನೀವು ನೋಡಬಹುದು. ಮುಂಜಾನೆ 4 ಗಂಟೆಗೆ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಷ್ಯಂತ್ ಕುಮಾರ್ ಗೌತಮ್ ಅವರ ನೇಮಕಾತಿ ಕುರಿತು ಪ್ರಶ್ನೆ ಎತ್ತಿ ಪ್ರತಿಭಟನೆ ನಡೆಸುತ್ತಿದ್ದ ಅಂಕಿತಾ ಪೋಷಕರನ್ನು ವಶಕ್ಕೆ ಪಡೆದಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ `ಸ್ಟಿಂಗ್’ ಸುಂಟರಗಾಳಿ – ಜೆಡಿಎಸ್ ಸೋಶಿಯಲ್ ಮೀಡಿಯಾ ಟಾರ್ಗೆಟ್?
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಕೂಡ ಪೊಲೀಸರ ಕ್ರಮವನ್ನು ಕಠಿಣ ಎಂದು ಟೀಕಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಅಂಕಿತಾ ಪೋಷಕರ ವಿರುದ್ಧ ಇಂತಹ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ಖಾಜಿ ನಿಜಾಮುದ್ದೀನ್ ಮಾತನಾಡಿ, ತಮ್ಮ ಬೇಡಿಕೆಗಳು ಈಡೇರುವವರೆಗೆ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನೆಯ ವೇಳೆ ಮಹಿಳಾ ಪ್ರತಿಭಟನಾಕಾರರ ಮೇಲೂ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನೂ ಓದಿ: ಗ್ರಾಮೀಣ ಸೊಗಡಿನಿಂದ ಜಾಗತಿಕ ಮಾರುಕಟ್ಟೆವರೆಗೆ – ಗರ್ಬಾ ಸಂಸ್ಕೃತಿ ಬೆಳೆದು ಬಂದ ಸುವರ್ಣ ಪಯಣ!

