ನವರಾತ್ರಿ ಹಬ್ಬ ಬಂತೆಂದರೆ ದೇಶಾದ್ಯಂತ ಮೊಳಗುವ ಮೊದಲ ಶಬ್ದವೇ ಗರ್ಬಾ (Garba) ಮತ್ತು ದಾಂಡಿಯಾ. ಶತಮಾನಗಳ ಹಿಂದೆ ಗ್ರಾಮೀಣ ಭಾರತದ ಸಣ್ಣ ಹಳ್ಳಿಗಳಲ್ಲಿ, ಶಕ್ತಿ ದೇವತೆಯ ಆರಾಧನೆಗಾಗಿ ಮಹಿಳೆಯರು ವೃತ್ತಾಕಾರದಲ್ಲಿ ಕುಣಿಯುತ್ತಿದ್ದ ಜನಪದ ಆಚರಣೆಯೊಂದು ಇಂದು ಜಾಗತಿಕ ಬ್ರ್ಯಾಂಡ್ ಆಗಿ ಬದಲಾಗಿದೆ. ಪ್ರಸ್ತುತ ಡಿಜೆ ಬೀಟ್ಸ್, ಲೈವ್ ಆರ್ಕೆಸ್ಟ್ರಾ, ಸಾವಿರಾರು ಕೋಟಿ ಮೌಲ್ಯದ ಫ್ಯಾಷನ್ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಉದ್ಯಮವಾಗಿ ಬೆಳೆದು ನಿಂತಿರುವ ಗರ್ಬಾ, ನ್ಯೂಯಾರ್ಕ್ನಿಂದ ಹಿಡಿದು ಲಂಡನ್ವರೆಗೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ರಾರಾಜಿಸುತ್ತಿದೆ. ಒಂದು ಜಾನಪದ ನೃತ್ಯವು ತನ್ನ ಸಾಂಪ್ರದಾಯಿಕ ಬೇರುಗಳನ್ನು ಉಳಿಸಿಕೊಂಡೇ ಜಾಗತಿಕ ಮಾರುಕಟ್ಟೆಯ ಕೇಂದ್ರಬಿಂದುವಾಗಿ ಹೇಗೆ ಬೆಳೆಯಿತು ಎಂಬ ಸುವರ್ಣ ಪಯಣ ಇಲ್ಲಿದೆ.
ರಾತ್ರಿಯಾಗುತ್ತಿದ್ದಂತೆ ಬೆಳಗುವ ದೀಪಗಳು, ತಮಟೆಯ ಲಯಬದ್ಧ ಸದ್ದು, ಕಣ್ಣು ಕುಕ್ಕುವ ಸಾಂಪ್ರದಾಯಿಕ ಉಡುಗೆಗಳಲ್ಲಿ ಮೈಮರೆತು ನರ್ತಿಸುವ ಜನಸಾಗರ.. ಇದು ಇಂದಿನ ನವರಾತ್ರಿಯ ಗರ್ಬಾ ನೈಟ್ಸ್ನ ಚಿತ್ರಣ. ಆದರೆ ಈ ಅದ್ದೂರಿ ಬೆಳಕಿನ ಹಿಂದೆ ಒಂದು ಸುದೀರ್ಘವಾದ ಸಾಂಸ್ಕೃತಿಕ ಇತಿಹಾಸವಿದೆ. ಹಳ್ಳಿಯ ಮಣ್ಣಿನಲ್ಲಿ ಹುಟ್ಟಿ, ಸಂಪ್ರದಾಯದ ಒಡಲಲ್ಲಿ ಬೆಳೆದು, ಇಂದು ಜಾಗತಿಕ ಮಾರುಕಟ್ಟೆಯ ಟ್ರೆಂಡ್ ಸೆಟ್ಟರ್ ಆಗಿರುವ ಗರ್ಬಾ, ಭಾರತೀಯ ಜಾನಪದ ಕಲೆಯಾಗಿ ಕ್ರಮಿಸಿದ ಹಾದಿ ನಿಜಕ್ಕೂ ಅನನ್ಯ.
ಗರ್ಬಾ ಸಂಸ್ಕೃತಿಯ ಸುವರ್ಣ ಪಯಣ:
ಗುಜರಾತಿಡನ (Gujarat) ಹಳ್ಳಿಗಳ ಅಂಗಳದಿಂದ ಆರಂಭವಾಗಿ, ವಿಶ್ವಸಂಸ್ಥೆಯ (UNESCO) ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯವರೆಗೆ ತಲುಪಿರುವ ‘ಗರ್ಬಾ’ ಕೇವಲ ಒಂದು ಜನಪದ ನೃತ್ಯವಲ್ಲ. ಅದು ಜೀವಂತ ಶಕ್ತಿಯ ಆರಾಧನೆ, ತಲೆಮಾರುಗಳು ಉಳಿಸಿಕೊಂಡು ಬಂದ ಒಂದು ಅದ್ಭುತ ಸಾಂಸ್ಕೃತಿಕ ಪರಂಪರೆ. ನವರಾತ್ರಿಯ ರಾತ್ರಿಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಒಂದೇ ಲಯದಲ್ಲಿ ತೇಲಿಸುವ ಈ ಗರ್ಬಾ ಹುಟ್ಟಿಕೊಂಡಿದ್ದು ಹೇಗೆ? ಕಾಲಕ್ರಮೇಣ ಅದು ಪಡೆದುಕೊಂಡ ರೂಪಾಂತರಗಳೇನು? ಇಲ್ಲಿದೆ ಒಂದು ಸಮಗ್ರ ಅವಲೋಕನ.
‘ಗರ್ಬಾ’ ಅಥವಾ ‘ಗರ್ಬೋ’ ಎಂಬ ಪದವು ಸಂಸ್ಕೃತದ ‘ಗರ್ಭದೀಪ’ ಎಂಬ ಶಬ್ದದಿಂದ ಹುಟ್ಟಿದೆ. ಸುತ್ತಲೂ ರಂಧ್ರಗಳಿರುವ ಮಣ್ಣಿನ ಮಡಕೆಯೊಳಗೆ ಬೆಳಗುವ ಜ್ಯೋತಿಯೇ ‘ಗರ್ಭದೀಪ’. ಈ ಮಡಿಕೆಯನ್ನು ಹಿಡಿದುಕೊಂಡು ಮಾಡುವುದೇ ಗರ್ಬಾ.
ಹುಟ್ಟಿಕೊಂಡಿದ್ದು ಹೇಗೆ?
ಗರ್ಬಾದ ಆರಂಭಕ್ಕೆ ಯಾವುದೇ ನಿರ್ದಿಷ್ಟ ಇತಿಹಾಸದ ದಿನಾಂಕಗಳಿಲ್ಲದಿದ್ದರೂ, ಇದು ಗುಜರಾತಿನ ಪ್ರಾಚೀನ ರಾಜವಂಶಗಳು ಮತ್ತು ಕೃಷಿಕ ಸಮುದಾಯದ ಸಂಭ್ರಮಗಳೊಂದಿಗೆ ಹಾಸುಹೊಕ್ಕಾಗಿದೆ. ಕೊಳಲು, ನಾದಸ್ವರಗಳೊಂದಿಗೆ ಆಡುವ ರಾಸ್, ಗರ್ಬಿ ಮತ್ತು ದಾಂಡಿಯಾ ರೂಪಗಳು ಶ್ರೀಕೃಷ್ಣನ ಕಾಲದ ಗೋಪಿಕೆಯರ ರಾಸಲೀಲೆಯ ಬೇರುಗಳನ್ನು ಹೊಂದಿವೆ ಎಂದು ನಂಬಲಾಗಿದೆ.
ಸುಮಾರು 700 ವರ್ಷಗಳ ಹಿಂದೆ ಗುಜರಾತಿನ ಪ್ರಸಿದ್ಧ ‘ಅಂಬಾಜಿ ಶಕ್ತಿಪೀಠ’ ಸ್ಥಾಪನೆಯಾದ ಬಳಿಕ, ಗರ್ಬಾ ಕಲೆಯು ಸಂಪೂರ್ಣವಾಗಿ ಆದಿಶಕ್ತಿಯ ಆರಾಧನೆಯಾಗಿ ಮಾರ್ಪಟ್ಟಿತು. ಮಹಿಳೆಯರು ಗ್ರಾಮದ ದೇವಾಲಯಗಳ ಮುಂಭಾಗದ ಚೌಕದಲ್ಲಿ ಮಣ್ಣಿನ ಮಡಕೆಯಲ್ಲಿ ದೀಪವಿಟ್ಟು, ಮಾತಾಜಿಯ ವಿಗ್ರಹ ಪ್ರತಿಷ್ಠಾಪಿಸಿ, ಆರತಿ ಬೆಳಗಿ ವೃತ್ತಾಕಾರದಲ್ಲಿ ಕುಣಿಯಲು ಆರಂಭಿಸಿದರು. ಇದು ಗರ್ಬಾದ ಸಾಂಪ್ರದಾಯಿಕ ರೂಪಕ್ಕೆ ಭದ್ರ ಅಡಿಪಾಯ ಹಾಕಿತು.
ಕಾಲಕ್ರಮೇಣ ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಜನರು ತಮ್ಮ ಸಂಸ್ಕೃತಿಯನ್ನೂ ಹೊತ್ತು ತಂದರು. ಅಹಮದಾಬಾದ್ನಂತಹ ನಗರಗಳಲ್ಲಿ ಇದು ‘ಶೇರಿ ಗರ್ಬಾ’ (ಓಣಿ ಗರ್ಬಾ) ಆಗಿ ಮಾರ್ಪಟ್ಟಿತು. 20ನೇ ಶತಮಾನದವರೆಗೂ ಗರ್ಬಾ ಹಾಡುಗಳಿಗೆ ಯಾವುದೇ ಲಿಖಿತ ರೂಪವಿರಲಿಲ್ಲ. ತಾಯಿಯಿಂದ ಮಗಳಿಗೆ, ಅಜ್ಜಿಯಿಂದ ಮೊಮ್ಮಗಳಿಗೆ ಬಾಯಿಂದ ಬಾಯಿಗೆ ಈ ಕಲೆ ವರ್ಗಾವಣೆಯಾಗುತ್ತಾ ಬಂತು. ಮನೆಯಲ್ಲಿ ಮಹಿಳೆಯರು ಹಾಡುವಾಗ ಮಕ್ಕಳು ನೋಡಿ, ಅನುಕರಿಸಿ ಕಲಿಯುತ್ತಿದ್ದರು.
ಯುನೆಸ್ಕೋ ದಾಖಲೆಯ ಪ್ರಕಾರ, ಗರ್ಭಿಣಿ ತಾಯಿಯೊಬ್ಬಳು ಗರ್ಬಾ ನೃತ್ಯ ಮಾಡುವಾಗ ಆಕೆಯ ದೇಹದ ಚಲನೆಗಳು ಮತ್ತು ಆ ಲಯಬದ್ಧ ಸಂಗೀತದ ಕಂಪನಗಳು ಗರ್ಭದಲ್ಲಿರುವ ಮಗುವಿಗೂ ಸಂಸ್ಕಾರದ ರೂಪದಲ್ಲಿ ತಲುಪುತ್ತವೆ ಎಂಬ ಗಾಢವಾದ ನಂಬಿಕೆ ಈ ಮಣ್ಣಿನಲ್ಲಿದೆ.
ಕೇವಲ ನೃತ್ಯ ಮಾತ್ರವಲ್ಲದೆ, ಗರ್ಬಾಕ್ಕೆ ಬೇಕಾದ ವಿಶಿಷ್ಟ ಮಣ್ಣಿನ ಮಡಕೆಗಳನ್ನು ತಯಾರಿಸುವ ಕುಂಬಾರರು, ಸಾಂಪ್ರದಾಯಿಕ ವಾದ್ಯಗಳನ್ನು ಮಾಡುವ ಕಲಾವಿದರು ಮತ್ತು ಬಣ್ಣ ಬಣ್ಣದ ಕಸೂತಿ ಉಡುಪುಗಳನ್ನು ನೇಯುವ ಕುಶಲಕರ್ಮಿಗಳು ಕೂಡ ಈ ವಿದ್ಯೆಯನ್ನು ತಲೆಮಾರುಗಳಿಂದ ಮೌಖಿಕವಾಗಿಯೇ ಉಳಿಸಿಕೊಂಡು ಬಂದಿದ್ದಾರೆ.
ಲಿಂಗಭೇದವಿಲ್ಲದೇ ಬೆರೆತ ಸಂಸ್ಕೃತಿ ಗರ್ಬಾ:
ಆರಂಭದಲ್ಲಿ ಗರ್ಬಾ ಕೇವಲ ಸ್ತ್ರೀಯರಿಗೆ ಮಾತ್ರ ಸೀಮಿತವಾಗಿದ್ದ ಕಲೆ. ಪುರುಷರು ಇದರಲ್ಲಿ ಭಾಗವಹಿಸುವುದು ಅಪರೂಪವಾಗಿತ್ತು. ಆದರೆ ಞ1949ರ ಸುಮಾರಿಗೆ ಅಹಮದಾಬಾದ್ನಲ್ಲಿ ಜಿತು ಭಗತ್ ಎಂಬ ಭಕ್ತರು ‘ಶ್ರೀ ಜಿತು ಭಗತ್ ಸತ್ಸಂಗ್ ಮಂಡಳಿ’ ಆರಂಭಿಸಿ ಗರ್ಬಾದಲ್ಲಿ ಪುರುಷರನ್ನೂ ತೊಡಗಿಸಿಕೊಂಡರು. ಆರಂಭದಲ್ಲಿ ಇದಕ್ಕೆ ಸಮಾಜದಿಂದ ಟೀಕೆಗಳು ವ್ಯಕ್ತವಾದರೂ, ನಂತರದ ದಿನಗಳಲ್ಲಿ ಗರ್ಬಾ ಲಿಂಗಭೇದವಿಲ್ಲದೆ ಎಲ್ಲರೂ ಬೆರೆಯುವ ಸಾಂಸ್ಕೃತಿಕ ಮಹೋತ್ಸವವಾಯಿತು.
ಲಾಭದ ಆಸೆಯಿಲ್ಲದ ನಿಸ್ವಾರ್ಥ ಭಕ್ತಿ:
ಗರ್ಬಾ ನೃತ್ಯವಾಗಲಿ, ಹಾಡಾಗಲಿ ಯಾರಿಂದಲೂ ಒಂದು ಪೈಸೆ ಹಣ ಪಡೆಯಬಾರದು. ಯಾವುದೇ ಅಪೇಕ್ಷೆಯಿಲ್ಲದೆ ಕೇವಲ ಭಕ್ತಿಯಿಂದ ಮಾತ್ರ ದೇವಿಯನ್ನು ಆರಾಧಿಸಬೇಕು ಎಂಬುದು ಹಳೆಯ ತಲೆಮಾರಿನ ಗರ್ಬಾ ಕಲಾವಿದರ ಅಚಲ ನಿಷ್ಠೆಯಾಗಿತ್ತು. ಒಂದು ಕಾಲದಲ್ಲಿ ಹಳ್ಳಿಯ ಮಣ್ಣಿನ ಹಣತೆಯ ಬೆಳಕಿನಲ್ಲಿ, ನಿರೀಕ್ಷೆಗಳಿಲ್ಲದ ನಿರ್ಮಲ ಭಕ್ತಿಯಿಂದ ಆರಂಭವಾದ ಗರ್ಬಾ, ಇವತ್ತು ಆಧುನಿಕತೆಯ ಸ್ಪರ್ಶ ಪಡೆದು ವಿಶ್ವದ ಬೃಹತ್ ಸಾಂಸ್ಕೃತಿಕ ವೇದಿಕೆಗಳಲ್ಲಿ ಮಿಂಚುತ್ತಿದೆ. ನೃತ್ಯದ ವೇಗ, ಸಂಗೀತದ ವಾದ್ಯಗಳು ಮತ್ತು ವೇದಿಕೆಗಳು ಬದಲಾಗಿರಬಹುದು; ಆದರೆ ಮಣ್ಣಿನ ಮಡಕೆಯೊಳಗೆ ಬೆಳಗುವ ಆ ಪುಟ್ಟ ಜ್ಯೋತಿಯ ಹಿಂದಿನ ‘ಸ್ತ್ರೀ ಶಕ್ತಿ’ ಮತ್ತು ‘ಜೀವಂತ ಚೈತನ್ಯ’ದ ಸಂದೇಶ ಮಾತ್ರ ಇಂದಿಗೂ ಹಾಗೆಯೇ ಉಳಿದುಕೊಂಡಿದೆ
ಭಕ್ತಿಯ ಅಂಗಳದಿಂದ ಡಾಲರ್ ಉದ್ಯಮದವರೆಗೆ:
ಒಂದು ಕಾಲದಲ್ಲಿ ಹಳ್ಳಿಯ ಚೌಕದಲ್ಲೋ ಅಥವಾ ಓಣಿಯ ಮೂಲೆಯಲ್ಲೋ ದೇವಿಯ ಭಕ್ತಿಗಾಗಿ, ಕೇವಲ ಚಪ್ಪಾಳೆಯ ನಾದಕ್ಕೆ ಹೆಜ್ಜೆ ಹಾಕುತ್ತಿದ್ದ ಸರಳ ಗರ್ಬಾ, ಇಂದು ಭಾರತದ ಅತ್ಯಂತ ದೊಡ್ಡ ವಾರ್ಷಿಕ ಮನರಂಜನಾ ಮತ್ತು ಸಾಂಸ್ಕೃತಿಕ ಉದ್ಯಮವಾಗಿ ಮಾರ್ಪಟ್ಟಿದೆ. ಕೇವಲ ಗುಜರಾತ್ ಒಂದರಲ್ಲೇ ನವರಾತ್ರಿಯ 9 ದಿನಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ.
ಮೊದಲೆಲ್ಲ ಗರ್ಬಾ ನಡೆಯುತ್ತಿದ್ದುದು ಹಳ್ಳಿಗಳ ಬಯಲು ಅಥವಾ ನಗರಗಳ ಓಣಿಗಳಲ್ಲಿ ಇಲ್ಲಿ ಹಣದ ವ್ಯವಹಾರವಿರಲಿಲ್ಲ, ಜನರೇ ದೀಪ, ಎಣ್ಣೆ ತಂದು ಹಬ್ಬ ಆಚರಿಸುತ್ತಿದ್ದರು. ಆದರೆ 1980 ಮತ್ತು 90ರ ದಶಕದಲ್ಲಿ ನಗರಗಳು ಬೆಳೆದಂತೆ ರಸ್ತೆಗಳಲ್ಲಿ ಜಾಗದ ಕೊರತೆ ಎದುರಾಯಿತು. ಇದೇ ಸಮಯದಲ್ಲಿ ಶ್ರೀಮಂತ ಕ್ಲಬ್ಗಳು ಮತ್ತು ಈವೆಂಟ್ ಸಂಘಟಕರು ದೊಡ್ಡ ದೊಡ್ಡ ಹುಲ್ಲುಹಾಸಿನ ಮೈದಾನಗಳನ್ನು ಬಾಡಿಗೆಗೆ ಪಡೆದು ‘ಮೆಗಾ ಗರ್ಬಾ’ ಆಯೋಜಿಸಲು ಆರಂಭಿಸಿದರು. ಉಚಿತವಾಗಿದ್ದ ಗರ್ಬಾಕ್ಕೆ ಮೊದಲ ಬಾರಿಗೆ ‘ಎಂಟ್ರಿ ಪಾಸ್’ ಮತ್ತು ಟಿಕೆಟ್ ಸಂಸ್ಕೃತಿ ಕಾಲಿಟ್ಟಿದ್ದು ಇಲ್ಲಿಯೇ.
ಸಾಂಪ್ರದಾಯಿಕ ಗರ್ಬಾದಲ್ಲಿ ಮಹಿಳೆಯರೇ ಹಾಡುತ್ತಿದ್ದರು ಅಥವಾ ಸ್ಥಳೀಯ ವಾದ್ಯಗಾರರು ಸಾಥ್ ನೀಡುತ್ತಿದ್ದರು. ಆದರೆ 90ರ ದಶಕದಲ್ಲಿ ಫಾಲ್ಗುಣಿ ಪಾಠಕ್, ಅತುಲ್ ಪುರೋಹಿತ್ ಅವರಂತಹ ಗಾಯಕರು ಗರ್ಬಾವನ್ನು ಕನ್ಸರ್ಟ್ ಮಟ್ಟಕ್ಕೆ ಕೊಂಡೊಯ್ದರು. ಗಾಯಕರಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ನೀಡಲು ಆರಂಭವಾಯಿತು. ಡ್ರಮ್ಸ್, ಡಿಜೆ ಸೌಂಡ್ ಸಿಸ್ಟಮ್ಗಳು ಬಂದವು.
ಯುವಜನತೆ ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಸೇರುವುದನ್ನು ಕಂಡ ಕಾರ್ಪೊರೇಟ್ ಕಂಪನಿಗಳಿಗೆ ಇದು ಬೃಹತ್ ಜಾಹೀರಾತು ವೇದಿಕೆಯಾಗಿ ಕಂಡಿತು. ಪ್ರವೇಶ ದ್ವಾರದಿಂದ ಹಿಡಿದು ಮೈದಾನದ ಬೌಂಡರಿಯವರೆಗೂ ಬ್ರ್ಯಾಂಡಿಂಗ್ ಫ್ಲೆಕ್ಸ್ಗಳು, ಸೆಲ್ಫಿ ಬೂತ್ಗಳು ಜಾಗ ಪಡೆದುಕೊಂಡವು. ಸಂಘಟಕರಿಗೆ ಕೇವಲ ಪ್ರಾಯೋಜಕತ್ವದಿಂದಲೇ ಕೋಟಿಗಟ್ಟಲೆ ಆದಾಯ ಹರಿದುಬರಲು ಶುರುವಾಯಿತು.
ಬಾಲಿವುಡ್ ಸಿನಿಮಾಗಳು ಗರ್ಬಾಕ್ಕೆ ವಿಪರೀತ ಗ್ಲಾಮರ್ ಸ್ಪರ್ಶ ನೀಡಿದವು. ಇದರಿಂದಾಗಿ ಸಾಂಪ್ರದಾಯಿಕ ಉಡುಪುಗಳ ಮಾರುಕಟ್ಟೆ ಸ್ಫೋಟಗೊಂಡಿತು. 9 ದಿನಗಳಿಗೂ ಬೇರೆ ಬೇರೆ ಡ್ರೆಸ್ ಧರಿಸುವ ಟ್ರೆಂಡ್ ಶುರುವಾಯಿತು. ಲಕ್ಷಾಂತರ ರೂಪಾಯಿ ಕೊಟ್ಟು ಕೊಳ್ಳುವ ಬದಲು, ದಿನಕ್ಕೆ 1,000 ರೂ.ದಿಂದ 5,000 ರೂ.ವರೆಗೆ ಬಾಡಿಗೆ ನೀಡುವ ‘ರೆಂಟಲ್ ಫ್ಯಾಷನ್’ ಇಂಡಸ್ಟ್ರಿ ಹುಟ್ಟಿಕೊಂಡಿತು.
ಗರ್ಬಾ ಕ್ಲಾಸ್ಗಳ ಉದ್ಯಮ:
ಹಿಂದೆ ಮನೆಯಲ್ಲೇ ಹಿರಿಯರನ್ನು ನೋಡಿ ಕಲಿಯುತ್ತಿದ್ದ ಹೆಜ್ಜೆಗಳು, ಈಗ ವೃತ್ತಿಪರ ತರಬೇತಿಯಾದವು. ಹಬ್ಬಕ್ಕೆ 2-3 ತಿಂಗಳು ಮುಂಚಿತವಾಗಿಯೇ ‘ಗರ್ಬಾ ವರ್ಕ್ಶಾಪ್ಗಳು’ ಶುರುವಾಗುತ್ತವೆ. ಹೊಸ ಶೈಲಿಗಳನ್ನು ಕಲಿಯಲು ಜನರು ಸಾವಿರಾರು ರೂಪಾಯಿ ಫೀಸ್ ನೀಡುತ್ತಾರೆ. ಜಿಮ್ಗಳು ಮತ್ತು ಫಿಟ್ನೆಸ್ ಕೇಂದ್ರಗಳು ಗರ್ಬಾವನ್ನು ‘ಕ್ಯಾಲೋರಿ ಕರಗಿಸುವ ವ್ಯಾಯಾಮ’ ( ಎಂದು ಪ್ರಮೋಟ್ ಮಾಡಿ ಪ್ಯಾಕೇಜ್ಗಳನ್ನು ಮಾರಾಟ ಮಾಡಲು ಆರಂಭಿಸಿದವು.
ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು (ವಿಶೇಷವಾಗಿ ಅಮೆರಿಕ, ಕೆನಡಾ, ಯುಕೆ, ಆಸ್ಟ್ರೇಲಿಯಾ ಮತ್ತು ಯುಎಇ) ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಗರ್ಬಾ ನೈಟ್ಸ್ ಆಯೋಜಿಸಲು ಶುರುಮಾಡಿದರು. ಭಾರತದ ಜನಪ್ರಿಯ ಗಾಯಕರು ಮತ್ತು ಬ್ಯಾಂಡ್ಗಳು ನವರಾತ್ರಿಯ ಸಮಯದಲ್ಲಿ ವಿದೇಶಿ ಪ್ರವಾಸ ಕೈಗೊಂಡು ಡಾಲರ್ಗಳಲ್ಲಿ ಆದಾಯ ಗಳಿಸುತ್ತಾರೆ. ನ್ಯೂಯಾರ್ಕ್ನಿಂದ ಹಿಡಿದು ಜರ್ಮನಿಯ ಕ್ರೀಡಾಂಗಣಗಳವರೆಗೆ ಗರ್ಬಾ ಟಿಕೆಟ್ಗಳು ನಿಮಿಷಗಳಲ್ಲಿ ಸೋಲ್ಡ್-ಔಟ್ ಆಗುವ ಜಾಗತಿಕ ಇವೆಂಟ್ ಆಯಿತು.
ನವರಾತ್ರಿ ಗರ್ಬಾಗೆ ‘ಐವಿ ಡ್ರಿಪ್’ ಕ್ರೇಜ್:
ಬಣ್ಣ ಬಣ್ಣದ ಚನಿಯಾ ಚೋಲಿ, ಮೈತುಂಬಾ ಆಭರಣಗಳು, ಪಾಸ್ಗಳ ಬುಕಿಂಗ್—ಇವೆಲ್ಲವೂ ನವರಾತ್ರಿಯ ಗರ್ಬಾ ಸಡಗರದ ಸಾಮಾನ್ಯ ತಯಾರಿಗಳು. ಆದರೆ ಈ ಬಾರಿ ಗುಜರಾತಿನಲ್ಲಿ ಇವೆಲ್ಲಕ್ಕಿಂತ ಭಿನ್ನವಾದ, ಆಶ್ಚರ್ಯ ಹುಟ್ಟಿಸುವ ಮತ್ತೊಂದು ಟ್ರೆಂಡ್ ಸದ್ದು ಮಾಡುತ್ತಿದೆ. ರಾತ್ರಿಯಿಡೀ ಕುಣಿಯಲು ಶಕ್ತಿ ಬೇಕು, ಮೈಕಾಂತಿ ಹೆಚ್ಚಾಗಬೇಕು ಎಂಬ ಕಾರಣಕ್ಕೆ ಯುವಜನತೆ ಕ್ಲಿನಿಕ್ಗಳಿಗೆ ತೆರಳಿ ನೇರವಾಗಿ ನರಗಳಿಗೆ ‘ಐವಿ ಡ್ರಿಪ್ ಹಾಕಿಸಿಕೊಳ್ಳುತ್ತಿದ್ದಾರೆ.
ಹಗಲು ಉಪವಾಸ ಮತ್ತು ರಾತ್ರಿಯಿಡೀ ಗರ್ಬಾ ಕುಣಿತದಿಂದ ಸುಸ್ತಾಗುವ ದೇಹಕ್ಕೆ ತಕ್ಷಣ ಶಕ್ತಿ ತುಂಬಲು ಅಹಮದಾಬಾದ್, ಸೂರತ್, ರಾಜ್ಕೋಟ್ ಸೇರಿದಂತೆ ಗುಜರಾತಿನ ಪ್ರಮುಖ ನಗರಗಳ ಕ್ಲಿನಿಕ್ಗಳಲ್ಲಿ ‘ನವರಾತ್ರಿ ಸ್ಪೆಷಲ್ ಐವಿ ಡ್ರಿಪ್ ಪ್ಯಾಕೇಜ್’ಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಮದುವೆ ಸಮಾರಂಭಗಳಲ್ಲಿ ಮತ್ತು ಬಾಲಿವುಡ್-ಹಾಲಿವುಡ್ ತಾರೆಯರ ವಲಯದಲ್ಲಿದ್ದ ಈ ಸಂಸ್ಕೃತಿ, ಈಗ ಹಬ್ಬದ ಅಂಗಳಕ್ಕೂ ವ್ಯಾಪಿಸಿದೆ.
ಐವಿ ಬ್ಯಾಗ್ನಲ್ಲಿ ಏನಿರುತ್ತದೆ? ಎಷ್ಟು ಖರ್ಚಾಗುತ್ತದೆ?
ಈ ಡ್ರಿಪ್ಗಳಿಗೆ ಯಾವುದೇ ಒಂದೇ ಬಗೆಯ ನಿಶ್ಚಿತ ನಿಯಮವಿಲ್ಲ. ಅಹಮದಾಬಾದ್ನ ಅನೆಸ್ತೇಶಿಯಾಲಜಿಸ್ಟ್ ಒಬ್ಬರ ಪ್ರಕಾರ, ವ್ಯಕ್ತಿಯ ಆರೋಗ್ಯ ತಪಾಸಣೆಯನ್ನು ಆಧರಿಸಿ ಗ್ಲುಟಾಥಿಯೋನ್, ವಿಟಮಿನ್ ಸಿ, ವಿಟಮಿನ್ ಬಿ-ಕಾಂಪ್ಲೆಕ್ಸ್, ಮಿನರಲ್ಸ್, ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಅಮೈನೋ ಆಮ್ಲಗಳಂತಹ ಪೋಷಕಾಂಶಗಳನ್ನು ಈ ಡ್ರಿಪ್ಗಳಲ್ಲಿ ಸಂಯೋಜಿಸಿ ನೀಡಲಾಗುತ್ತದೆ. ದೇಹಕ್ಕೆ ಅಗತ್ಯ ಹೈಡ್ರೇಶನ್ ಒದಗಿಸುವುದು, ಆಯಾಸ ಕಡಿಮೆ ಮಾಡುವುದು ಮತ್ತು ಮುಖಕ್ಕೆ ತ್ವರಿತ ಹೊಳಪು ತರುವುದು ಇದರ ಉದ್ದೇಶ.
ಈ ಪ್ಯಾಕೇಜ್ಗಳ ದರ ಒಂದು ಡ್ರಿಪ್ಗೆ 4,000 ರೂ.ಯಿಂದ ರಿಂದ 15,000 ರೂ.ವರೆಗೆ ಇದೆ. ಆರಂಭದಲ್ಲಿ ಅನಿವಾಸಿ ಭಾರತೀಯರು (NRI) ಮತ್ತು ವಿದೇಶ ಪ್ರವಾಸ ಮಾಡುವ ಉದ್ಯಮಿಗಳು ಮಾತ್ರ ಇದರಲ್ಲಿ ಆಸಕ್ತಿ ತೋರಿಸುತ್ತಿದ್ದರು. ಆದರೆ ಈಗ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ 25 ರಿಂದ 45 ವರ್ಷ ವಯಸ್ಸಿನ ಯುವತಿಯರು ಮತ್ತು ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ.
ಯಾವುದೇ ಪೌಷ್ಟಿಕಾಂಶದ ಕೊರತೆಯಿಲ್ಲದ, ಸರಿಯಾಗಿ ಊಟ ಮಾಡುವ ಆರೋಗ್ಯವಂತ ವ್ಯಕ್ತಿಗೆ ಇಂತಹ ವಿಟಮಿನ್ ಡ್ರಿಪ್ಗಳು ಹೆಚ್ಚುವರಿ ಶಕ್ತಿ ಅಥವಾ ಚರ್ಮಕ್ಕೆ ಹೊಳಪು ನೀಡುತ್ತವೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ. ದ್ರವ ರೂಪದ ಪಾನೀಯಗಳು ದೇಹದ ನಿರ್ಜಲೀಕರಣವನ್ನು ಸರಿಪಡಿಸಬಹುದೇ ವಿನಃ ಕೃತಕ ವಿಟಮಿನ್ಗಳು ಮ್ಯಾಜಿಕ್ ಮಾಡುವುದಿಲ್ಲ ಎಂದು ಕೆಲ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆಯಾಗಿ, ಭಕ್ತಿ ಮತ್ತು ಸಾಮುದಾಯಿಕ ಬಾಂಧವ್ಯದ ಸಂಕೇತವಾಗಿದ್ದ ಗರ್ಬಾ, ಕಾಲಕ್ರಮೇಣ ಈವೆಂಟ್ ಮ್ಯಾನೇಜ್ಮೆಂಟ್, ಫ್ಯಾಷನ್, ಸಂಗೀತ ಮತ್ತು ಪ್ರವಾಸೋದ್ಯಮಗಳೆಲ್ಲವೂ ಮೇಳೈಸಿದ ಒಂದು ‘ಮೆಗಾ ಎಂಟರ್ಟೈನ್ಮೆಂಟ್ ಎಕಾನಮಿ’ ಆಗಿ ರೂಪಾಂತರಗೊಂಡಿತು. ಆದಾಗ್ಯೂ, ಮೈದಾನದ ಅಬ್ಬರದ ನಡುವೆಯೂ ಮಧ್ಯರಾತ್ರಿಯ ಮಂಗಳಾರತಿಯ ಹೊತ್ತಿಗೆ ಎಲ್ಲರೂ ತಲೆಬಾಗಿ ಕೈಮುಗಿಯುವ ಭಕ್ತಿಯ ಭಾವ ಮಾತ್ರ ಇಂದಿಗೂ ಹಾಗೆಯೇ ಉಳಿದುಕೊಂಡಿದೆ.

