ಬೆಂಗಳೂರು: ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ಆಯೋಜನೆಗೊಂಡಿರುವ “ಭಾರತ ದರ್ಶನ ಸುಶಾಸನ ಯಾತ್ರೆ”ಗೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಸಂಸದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಹಾಗೂ ಯುವಮೋರ್ಚಾ ಪದಾಧಿಕಾರಿಗಳ ಸಮ್ಮುಖದಲ್ಲಿ ಇಂದು ವಿದ್ಯುಕ್ತವಾಗಿ ಚಾಲನೆ ನೀಡಿದರು.
Advertisement
ಭಾರತ ದರ್ಶನ ಯಾತ್ರೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಿಗೆ ದೇಶದ ವೈವಿಧ್ಯಮಯ ಸಾಂಸ್ಕೃತಿಕ, ಐತಿಹಾಸಿಕ ಸಿರಿವಂತಿಕೆಯನ್ನು ಪರಿಚಯಿಸುವ ಉದ್ದೇಶವನ್ನು ಹೊಂದಲಾಗಿದೆ. ಇದೇ ಸಂದರ್ಭದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು, ಸ್ಟಾರ್ಟ್ ಅಪ್‍ಗಳ ಕುರಿತಾದ ಅಧ್ಯಯನ, ಉದ್ಯಮಿಗಳ ಜೊತೆಗಿನ ಸಂವಾದ, ರೈತ ಸಂಘಟನೆಗಳ ಪ್ರಮುಖರೊಂದಿಗೆ ಭೇಟಿಯನ್ನು ಕೂಡ ಆಯೋಜಿಲಾಗುತ್ತಿದೆ. ಇದರಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ಹಾಗೂ ಮಂಡಲ ಮಟ್ಟದ ಕಾರ್ಯಕರ್ತರಿಗೆ ದೇಶದ ವೈವಿಧ್ಯತೆ ಅರಿತುಕೊಳ್ಳಲು ಸಹಕಾರಿಯಾಗಲಿದೆ. ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಅಸಂಖ್ಯಾತ ಜನರ ಹೃದಯದಲ್ಲಿ ಅಮರರಾಗಿದ್ದಾರೆ: ಮೋದಿ
Advertisement
ಕಾರ್ಯಕ್ರಮ ಚಾಲನೆ ನಂತರ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ರಾಷ್ಟ್ರದ ಸಾಂಸ್ಕೃತಿಕ ಐಕ್ಯತೆಗೆ, ಹಿತಾಸಕ್ತಿಗೆ ಪೂರಕವಾಗಿ ಹಲವು ಕಠಿಣ ನಿರ್ಧಾರಗಳ ಮೂಲಕ ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಖುದ್ದು ಆಗಮಿಸಿ, ಭಾರತ ದರ್ಶನ ಯಾತ್ರೆಗೆ ಚಾಲನೆ ನೀಡಿ, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಬಿಜೆಪಿ ಕಾರ್ಯಕರ್ತರಿಗೆ ಹಾರೈಸಿದ್ದು ಯಾತ್ರೆಯ ವಿಶೇಷಗಳಲ್ಲೊಂದು ಎಂದು ತಿಳಿಸಿದರು.
Advertisement
Advertisement
ಭಾರತ ದರ್ಶನ ಯಾತ್ರೆಯು ಶುಕ್ರವಾರದಿಂದ ಬೆಂಗಳೂರಿನಿಂದ ಆರಂಭಗೊಂಡಿದ್ದು, 4 ದಿನಗಳ ವರೆಗೆ ಮೊದಲ ಹಂತದಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸುತ್ತಿರುವ ಕಾರ್ಯಕರ್ತರು ಉತ್ತರ ಮತ್ತು ಈಶಾನ್ಯ ಭಾರತದ ಬಿಜೆಪಿ ಕಾರ್ಯಕರ್ತರಾಗಿದ್ದು, ಕರ್ನಾಟಕದ ಐತಿಹಾಸಿಕ, ಸಾಂಸ್ಕೃತಿಕ, ಔದ್ಯೋಗಿಕ ರಂಗದ ಪರಿಚಯ ಮಾಡಿಕೊಡಲಾಗುತ್ತಿದೆ. ವಿಜಯನಗರದ ಅರಸರ ಐತಿಹಾಸಿಕ ಹಂಪಿ, ಪ್ರಮುಖ ಕೈಗಾರಿಕಾ ಸ್ಥಳವಾಗಿರುವ ಹೆಚ್‍ಎಎಲ್‍ಗೆ ತೆರಳಿ ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ ಉತ್ಪಾದನಾ ವಿಭಾಗಕ್ಕೂ ಭೇಟಿ ನೀಡಲಿದ್ದಾರೆ. ನ್ಯಾಸ್ಕಾಂ, ಓಲಾ ಕಚೇರಿಗಳಿಗೆ ಭೇಟಿ ನೀಡಿ ನಗರದ ನಾವೀನ್ಯಪೂರ್ಣ ಸ್ಟಾರ್ಟ್ ಅಪ್ ಲೋಕ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಕನಸಿನ ಹಸಿರು ಔದ್ಯೋಗಿಕ ರಂಗ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ 2ನೇ ಅತಿ ದೊಡ್ಡ ಪಾವಗಡ ಸೋಲಾರ್ ಪಾರ್ಕ್ ಕೂಡ ಯಾತ್ರೆಯ ಭಾಗವಾಗಿರಲಿದೆ. ಇದನ್ನೂ ಓದಿ: ನಡೆದಾಡುವ ದೇವರ ಗದ್ದುಗೆ ದರ್ಶನ ಪಡೆದ ಗೃಹ ಸಚಿವ ಅಮಿತ್ ಶಾ
ಕಾರ್ಯಕ್ರಮದ ಉದ್ದೇಶದ ಕುರಿತು ವಿವರಿಸಿದ ಸಂಸದ ತೇಜಸ್ವಿ ಸೂರ್ಯ, ಭಾರತವು ಕೇವಲ ಭೂಭಾಗ ಮಾತ್ರ ಅಷ್ಟೇ ಅಲ್ಲ. ಇದೊಂದು ಹಲವು ವೈವಿಧ್ಯಮಯ ಸಾಂಸ್ಕೃತಿಕ ಹೆಗ್ಗುರುತುಗಳನ್ನು, ಭಾವನೆಗಳ ಮಿಶ್ರಣಗಳನ್ನು ಹೊಂದಿರುವ ಅಪರೂಪದ ದೇಶ. ದೇಶದ ಸಮಸ್ತ ಜನತೆಯ ಸಾಂಸ್ಕೃತಿಕ ಒಗ್ಗೂಡುವಿಕೆಯನ್ನು ಪರಿಚಯಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶ. ಸಾವಿರಾರು ವರ್ಷಗಳ ಐತಿಹಾಸಿಕ ಸಿರಿವಂತಿಕೆಯನ್ನು ಹೊಂದಿರುವ ರಾಜ್ಯ ಕರ್ನಾಟಕ. ನಾಗರಿಕತೆಯ ಉಗಮದ ಕಾಲದಿಂದಲೂ ಇಲ್ಲಿನ ಕಲೆ, ಇತಿಹಾಸ, ಸಂಸ್ಕೃತಿ ಎಲ್ಲೆಡೆ ಛಾಪು ಮೂಡಿಸಿದೆ. ಹಲವು ಹೆರಿಟೇಜ್ ಕೇಂದ್ರಗಳು, ಐತಿಹಾಸಿಕ ಸ್ಥಳಗಳು, ಔದ್ಯೋಗಿಕ ಪ್ರಾಮುಖ್ಯತೆಯ ಸ್ಥಳಗಳನ್ನು ಪ್ರವಾಸದ ಭಾಗವಾಗಿಸಿ, ಯಾತ್ರೆಯನ್ನು ಫಲಪ್ರದವಾಗಿಸಲು ತೀರ್ಮಾನಿಸಲಾಗಿದೆ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ.ಸಂದೀಪ್ ಕುಮಾರ್, ಅಜಿತ್ ಹೆಗಡೆ ಹಾಗೂ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.