ಈ ಹಿಂದೆ ಮಳೆ, ಧೈರ್ಯಂ, ದಿಲ್ ಪಸಂದ್ ನಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿದ್ದ ಶಿವತೇಜಸ್ ಇದೀಗ ಮತ್ತೊಂದು ಚಿತ್ರವನ್ನು ಕನ್ನಡಿಗರ ಮಡಿಲಿಗೆ ಹಾಕಲು ಸಿದ್ದತೆ ನಡೆಸಿದ್ದಾರೆ. ಆ ಚಿತ್ರದ ಹೆಸರು ಪಾರ್ಟ್‌ನರ್. ಈಗಿನ ಜನರೇಶನ್ ನಲ್ಲಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ಇದೆಲ್ಲ ಕಾಮನ್ ಆಗಿಬಿಟ್ಟಿದೆ. ಇಂಥದ್ದೆಲ್ಲ ಇಟ್ಟುಕೊಂಡು ಇದಲ್ಲ ಜೀವನ, ಅದು ಬೇರೇನೇ ಇದೆ, ಪಾರ್ಟ್‌ನರ್(Partner) ಅಂದ್ರೆ ಜೀವನಪೂರ್ತಿ ನಂಬಿಕೆ ಇಟ್ಟುಕೊಂಡು ಜತೆಗಿರುವಂಥ ಜೀವನ ಸಂಗಾತಿ. ನಮ್ಮ ಮೇಲೆ ನಂಬಿಕೆ ಇರುವ ಪಾರ್ಟ್‌ನರ್ ಇರಬೇಕು ಅಂತ ನಿರ್ದೇಶಕ ಶಿವತೇಜಸ್(Shiva Tejas) ಅವರು ತಮ್ಮ ಚಿತ್ರದ ಮೂಲಕ ಹೇಳಹೊರಟಿದ್ದಾರೆ.
ರೋಮ್ ಕಾಮ್ ಜತೆಗೆ ಎಮೋಷನಲ್ ಸಬ್ಜೆಕ್ಟ್ ಇಟ್ಟುಕೊಂಡು ನಿರ್ದೇಶಕ ಶಿವತೇಜಸ್ ಅವರು ಪಾರ್ಟನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಿನ ಕಾಲದಲ್ಲಿ ಮದುವೆಯಾಗಲು ಹೆಣ್ಣೇ ಸಿಗ್ತಿಲ್ಲ, ಎಲ್ಲರೂ ಸರ್ಕಾರಿ ಕೆಲಸ, ಸಾಫ್ಟ್ ವೇರ್ ಎಂಜಿನಿಯರ್ ಆದವರನ್ನೇ ಹುಡುಕುತ್ತಾರೆ. ಇದೆಲ್ಲವನ್ನೂ ಸೇರಿಸಿಕೊಂಡು ಸುಂದರ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಕೃಷ್ಣ ಅಜೇಯ್ ರಾವ್(Ajay Rao) ಹಾಗೂ ಬೃಂದಾ ಆಚಾರ್ಯ(Brinda Acharya) ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ತ್ರಿಪುರ ಮಾಜಿ ಸಿಎಂ ಜೊತೆ ‘ಟಗರು’ ಖ್ಯಾತಿಯ ನಟಿ ತ್ರಿವೇಣಿ ರಾವ್ ಮದುವೆ

ಈಗಾಗಲೇ ಪಾರ್ಟ್‌ನರ್ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿ, ಶೂಟಿಂಗ್ ಮುಗಿಸಿರುವ ಚಿತ್ರತಂಡ, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಚಿತ್ರವನ್ನು ಹೆಚ್.ಪಿ.ಆರ್. ಎಂಟರ್ ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ಅವರು ನಿರ್ಮಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣ, ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಈ ಚಿತ್ರಕ್ಕಿದೆ. ಪಾರ್ಟ್ ನರ್ ಚಿತ್ರದಲ್ಲಿ 4 ಹಾಡುಗಳಿದ್ದು, ಕವಿರಾಜ್, ಪ್ರಮೋದ್ ಮರವಂತೆ, ನಾಗಾರ್ಜುನ. ಶರ್ಮಾ ಸಾಹಿತ್ಯ ರಚಿಸಿದ್ದಾರೆ.
