ಜೂರಿಚ್: ಸ್ವಿಟ್ಜರ್ಲೆಂಡ್ನ ಜೂರಿಚ್ನಿಂದ ದೆಹಲಿಗೆ (Zurich-Delhi) ಬರಬೇಕಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ಸಹ ಪೈಲಟ್ (Co-Pilot) ಮದ್ಯಪಾನ ಮಾಡಿ ಕಾಕ್ಪಿಟ್ನಲ್ಲಿ ಕುಳಿತಿರುವುದು ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 6 ರಂದು ಈ ಘಟನೆ ನಡೆದಿದೆ. ಸಹ ಪೈಲಟ್ ಮದ್ಯಪಾನ ಮಾಡಿರಬಹುದು ಎಂಬ ಅನುಮಾನದ ಮೇಲೆ AI 151 ವಿಮಾನ ಟೇಕಾಫ್ ಆಗುವ ಮುನ್ನ ಅವರನ್ನು ಕಾಕ್ಪಿಟ್ನಿಂದ ಕೆಳಗಿಳಿಸಲಾಯಿತು. ಬಳಿಕ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ಅವರು ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಏರ್ ಇಂಡಿಯಾ ಸಂಸ್ಥೆ ಸಹ ಪೈಲಟ್ನ್ನು ಕೆಲಸದಿಂದ ಅಮಾನತುಗೊಳಿಸಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದಿಢೀರ್ 300 ಅಡಿ ಕುಸಿತ ಕೇಸ್; ಸಹ-ಪೈಲಟ್ ಮಾದಕವಸ್ತು ಸೇವಿಸಿದ್ದು ದೃಢ
ಸಹ ಪೈಲಟ್ಗೆ ನಡೆಸಿದ ದ್ವಿತೀಯ ಹಂತದ ಪರೀಕ್ಷೆಯ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಅಂತಿಮ ವೈದ್ಯಕೀಯ ವರದಿ ಬರುವವರೆಗೂ ಅವರನ್ನು ಅಮಾನತಿನಲ್ಲಿ ಇಡಲಾಗುವುದು ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ. ಸಹ ಪೈಲಟ್ ಯಡವಟ್ಟಿನಿಂದ AI 151 ವಿಮಾನ ಅಂದು ಕಾರ್ಯಾಚರಣೆ ನಡೆಸದೇ, ಮರುದಿನ ಭಾರತಕ್ಕೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಸಂಸ್ಥೆ, ಸುರಕ್ಷತೆ ಅಥವಾ ನಿಯಮ ಉಲ್ಲಂಘನೆಯ ವಿಷಯದಲ್ಲಿ ನಮ್ಮ ಸಂಸ್ಥೆ ‘ಶೂನ್ಯ ಸಹಿಷ್ಣುತೆ’ (Zero-Tolerance) ನೀತಿಯನ್ನು ಅನುಸರಿಸುತ್ತದೆ. ನಿಯಮ ಉಲ್ಲಂಘನೆ ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಡೋಪ್ ಟೆಸ್ಟ್ನಲ್ಲಿ ಪಾಸಿಟಿವ್
ಆಗಸ್ಟ್ 4 ರಂದು ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಹಠಾತ್ತನೆ 300 ಅಡಿ ಕೆಳಕ್ಕೆ ಕುಸಿದಿತ್ತು. ಈ ವಿಮಾನದ ಮುಖ್ಯ ಪೈಲಟ್ಗೆ (ಪೈಲಟ್ ಇನ್ ಕಮಾಂಡ್) ನಡೆಸಲಾದ ಡೋಪ್ ಟೆಸ್ಟ್ನಲ್ಲಿ ಗಾಂಜಾ ಸೇವನೆ ಪಾಸಿಟಿವ್ ಎಂದು ಬಂದಿತ್ತು.
137 ಪ್ರಯಾಣಿಕರು ಮತ್ತು 8 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ AI-2379 ವಿಮಾನವು ಒಡಿಶಾದ ಆಕಾಶದಲ್ಲಿದ್ದಾಗ ಹಠಾತ್ತನೆ ಕುಸಿದಿತ್ತು. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದರು. ನಂತರ ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು.

ಈ ಘಟನೆ ಬಳಿಕ ಪೈಲಟ್ ಸುದೀಪ್ ವಸಿಷ್ಠ ಅವರನ್ನು ವಜಾಗೊಳಿಸಲಾಗಿತ್ತು. ತನಿಖೆ ವೇಳೆ ಅವರು, ನಿದ್ರೆಯ ಸಮಸ್ಯೆ ಇದ್ದುದರಿಂದ ಅದಕ್ಕಾಗಿ ಔಷಧಿ ತೆಗೆದುಕೊಳ್ಳುತ್ತಿದ್ದುದಾಗಿ ತಿಳಿಸಿದ್ದರು.
ಈ ಘಟನೆಯ ನಂತರ, ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್ಗಳಿಗೂ ವಿಮಾನ ಹಾರಾಟಕ್ಕೂ ಮುನ್ನ ಕಡ್ಡಾಯವಾಗಿ ಡೋಪ್ ಟೆಸ್ಟ್ ನಡೆಸುವಂತೆ ಆದೇಶಿಸಿತ್ತು. ಇದನ್ನೂ ಓದಿ: ಎಲ್ಲಾ ಪೈಲಟ್ಗಳಿಗೆ ಡೋಪ್ ಟೆಸ್ಟ್ | ಫುಕೆಟ್ – ದೆಹಲಿ ವಿಮಾನ ಪೈಲಟ್ ಗಾಂಜಾ ಸೇವನೆ ದೃಢಪಟ್ಟ ಬೆನ್ನಲ್ಲೇ ಏರ್ ಇಂಡಿಯಾ ನಿರ್ಧಾರ

