ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಕಮ್ಯುನಿಸ್ಟ್, ತೃಣಮೂಲ ಕಾಂಗ್ರೆಸ್ ಬಳಿಕ ಅಲ್ಲಿನ ಮತದಾರರು ಮೊದಲ ಬಾರಿ ಬಲಪಂಥೀಯ ಸರ್ಕಾರವನ್ನ ಆಯ್ಕೆ ಮಾಡಿದ್ದಾರೆ. ಫಲಿತಾಂಶದ ಬೆನ್ನಲ್ಲಿಯೇ ಒಂದು ಕಾಲದ ದೇಶದ ಸಾಂಸ್ಕೃತಿಕ ನೆಲದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ.
ಸುವೇಂದು ಅಧಿಕಾರಿ ಅವರೊಂದಿಗೆ ಇತರ ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರಾ ಪೌಲ್, ಅಶೋಕ್ ಕಿರ್ತನ್ಯ, ಕ್ಷುದಿರಂ ತಡು, ನಿಶಿತ್ ಪ್ರಾಮಾಣಿಕ್ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಸಚಿವರಾಗಿ ಪ್ರಮಾಣ ಸ್ವೀಕರಿಸಿದರು ಯಾರು? ರಾಜಕೀಯ ಹಿನ್ನೆಲೆ ಏನು ಅನ್ನೋದ್ರ ಪಕ್ಷಿನೋಟ ಇಲ್ಲಿ ನೀಡಲಾಗಿದೆ.

ದಿಲೀಪ್ ಘೋಷ್
ದಿಲೀಪ್ ಘೋಷ್ ಅವರು ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಹಿರಿಯ ನಾಯಕ. ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿ ತಮ್ಮ ರಾಜಕೀಯ ಜೀವನ ಶುರು ಮಾಡಿದರು. 2014 ರ ನಂತರ ಬಂಗಾಳದಲ್ಲಿ ತಳಮಟ್ಟದಿಂದಲೂ ಬಿಜೆಪಿ ಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.
ದಿಲೀಪ್ ಘೋಷ್ ಈ ಹಿಂದೆ ಮೇದಿನಿಪುರ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. ಬಂಗಾಳದಲ್ಲಿ ಬಿಜೆಪಿ ಉದಯಿಸಲು ಕಾರಣರಾದ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
ಅಗ್ನಿಮಿತ್ರ ಪೌಲ್
ಬಂಗಾಳ ನೂತನ ಸರ್ಕಾರದ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ಪ್ರಮಾಣ ಸ್ವೀಕಾರ ಮಾಡಿರುವ ಅಗ್ನಿಮಿತ್ರ ಪೌಲ್, ಫ್ಯಾಷನ್ ಡಿಸೈನ್ ಕ್ಷೇತ್ರದಿಂದ ಬಂದವರು.
2019 ರಲ್ಲಿ ಬಿಜೆಪಿ ಸೇರ್ಪಡೆಯಾದ ಪೌಲ್, ಕಠಿಣ ಪರಿಶ್ರಮದಿಂದ ಸೇವೆ ಸಲ್ಲಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿ ಪಕ್ಷವು 2020 ರಲ್ಲಿ ಬಂಗಾಳ ಬಿಜೆಪಿ ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ನೇಮಕ ಮಾಡಿತು. ಲಾಕೆಟ್ ಚಟರ್ಜಿ ಅವರ ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡರು.
2021 ರ ಚುನಾವಣೆಯಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಟಿಕೆಟ್ ಪಡೆದ ಪೌಲ್, ಅಸನ್ಸೋಲ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಸಾಯೋನಿ ಘೋಷ್ ಅವರನ್ನ ಸೋಲಿಸಿ ಶಾಸಕರಾದರು. 2022 ರಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಮತ್ತೆ ಅಸನ್ಸೋಲ್‌ನಿಂದ ಸ್ಪರ್ಧಿಸಿದ್ದ ಪೌಲ್, ನಟ-ರಾಜಕಾರಣಿಯೂ ಆಗಿದ್ದ ಶತ್ರುಘ್ನ ಸಿನ್ಹಾ ವಿರುದ್ಧ ಸೋತರು. ಮತ್ತೆ 2024 ರ ಲೋಕಸಭಾ ಚುನಾವಣೆಯಲ್ಲಿ ಮೇದಿನಿಪುರದಿಂದ ಸ್ಪರ್ಧಿಸಿ ನಟ ರಾಜಕಾರಣಿ ಜೂನ್ ಮಾಲಿಯಾ ವಿರುದ್ಧ ಸೋಲು ಅನುಭವಿಸಬೇಕಾಯಿತು.
ಈ ವರ್ಷದ ಆರಂಭದಲ್ಲಿ ಅಗ್ನಿಮಿತ್ರ ಪೌಲ್ ಅವರನ್ನ ಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಬಾರಿ ಅಸನ್ಸೋಲ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದ ಪೌಲ್, ಗೆದ್ದು ಸಚಿವಸ್ಥಾನ ಅಲಂಕರಿಸಿದ್ದಾರೆ.
ನಿತೀಶ್ ಪ್ರಮಾಣಿಕ್
ನಿತೀಶ್ ಪ್ರಮಾಣಿಕ್ ಉತ್ತರ ಬಂಗಾಳ ಬಿಜೆಪಿಯ ಪ್ರಮುಖ ಯುವ ನಾಯಕರಲ್ಲಿ ಒಬ್ಬರು. ತೃಣಮೂಲ ಕಾಂಗ್ರೆಸ್‌ನಲ್ಲಿದ್ದ ಪ್ರಮಾಣಿಕ್ 2019 ರಲ್ಲಿ ಬಿಜೆಪಿ ಸೇರ್ಪಡೆಯಾದರು. 2021 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇವರಿಗೆ ಗೃಹ ವ್ಯವಹಾರಗಳ ರಾಜ್ಯ ಸಚಿವ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ಸ್ಥಾನ ನೀಡಿತು. ಈ ಮೂಲಕ ಪ್ರಮಾಣಿಕ್ ಅತ್ಯಂತ ಕಿರಿಯ ವಯಸ್ಸಿನಲ್ಲೇ (35 ವರ್ಷ) ಕೇಂದ್ರ ಸಚಿವರಾದ ಖ್ಯಾತಿಯನ್ನೂ ಪಡೆದರು. ಈಗಲೂ ರಾಜಬನ್ಶಿ ಸಮುದಾಯದ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿರುವ ನಿತೀಶ್, ಉತ್ತರ ಬಂಗಾಳದಾದ್ಯಂತ ಬಲವಾದ ಸಾಂಸ್ಥಿಕ ಮತ್ತು ಯುವ ಬೆಂಬಲ ಹೊಂದಿದ್ದಾರೆ.
ಅಶೋಕ್ ಕೀರ್ತಾನಿಯಾ
ಅಶೋಕ್ ಕೀರ್ತಾನಿಯಾ ಅವರು ಉತ್ತರ 24 ಪರಗಣಗಳ ಬಂಗಾವ್ ಉತ್ತರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಇದು ಮತುವಾ ಮತದಾರರ ನೆಲೆಗೆ ಹೆಸರುವಾಸಿಯಾದ ಪ್ರದೇಶವಾಗಿದೆ. ಬ್ಯುಸಿನೆಸ್ ಹಿನ್ನೆಲೆಯಿಂದ ಬಂದ ಅಶೋಕ್ ಬಿಜೆಪಿ ಸೇರ್ಪಡೆ ಬಳಿಕ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡರು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಇವರ ಪಾತ್ರವೂ ಇದೆ.
ಕ್ಷುದಿರಾಮ್ ತುಡು
ಕ್ಷುದಿರಾಮ್ ತುಡು ಬಂಕುರಾ ಜಿಲ್ಲೆಯ ಬುಡಕಟ್ಟು ನಾಯಕರಾಗಿದ್ದು, ಪ್ರಸ್ತುತ ಜಂಗಲ್ ಮಹಲ್ ಪ್ರದೇಶದ ರಾಣಿಬಂಧ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಪಶ್ಚಿಮ ಬಂಗಾಳದ ಬುಡಕಟ್ಟು ಸಮುದಾಯಗಳಲ್ಲಿ ಸಂಪರ್ಕ ಬಲಪಡಿಸುವ ತನ್ನ ಕಾರ್ಯತಂತ್ರದ ಭಾಗವಾಗಿ ಬಿಜೆಪಿ ತುಡು ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತು.

