ಕೋಲ್ಕತ್ತಾ: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಅಭಿಷೇಕ್ ಪೊರೇಲ್‌ಗೆ (Abishek Porel) ಶುಕ್ರವಾರ (ಇಂದು) ಚಿನ್ಸುರಾ ಕೋರ್ಟ್ (Chinsurah Court) ಜಾಮೀನು ನಿರಾಕರಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮದುವೆಯಾಗುವುದಾಗಿ (Marriage) ನಂಬಿಸಿ ಕಳೆದ 3 ವರ್ಷಗಳಿಂದ ದೂರುದಾರೆಯೊಂದಿಗೆ ಸಂಬಂಧ ಬೆಳೆಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪದ ಮೇಲೆ ಮೊಗ್ರಾ ಪೊಲೀಸರು ಅಭಿಷೇಕ್ ಪೊರೇಲ್‌ನನ್ನ ಬಂಧಿಸಿದ್ದರು. ಆಗಸ್ಟ್ 11 ರಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody) ಪಡೆಯಲಾಗಿತ್ತು.
ಪೊರೇಲ್‌ನ ಆರಂಭಿಕ ಪೊಲೀಸ್ ಕಸ್ಟಡಿ ಮುಗಿದ ನಂತರ, ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಜಾಮೀನು ಕೊಡಲು ನಿರಾಕರಿಸಿದ ಚಿನ್ಸುರಾ ಕೋರ್ಟ್, ಮುಂದಿನ ವಿಚಾರಣೆಯವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಏನಿದು ಕೇಸ್?
ಮದುವೆಯಾಗುವುದಾಗಿ (Marriage) ನಂಬಿಸಿ ಕಳೆದ 3 ವರ್ಷಗಳಿಂದ ಸಂತ್ರಸ್ತೆಯೊಂದಿಗೆ ಸಂಬಂಧ ಬೆಳೆಸಿದ್ದ ಅಭಿಷೇಕ್ ಪೊರೆಲ್, ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 2026ರ ಜೂನ್ ತಿಂಗಳ ಬಳಿಕ, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಹಾಕಿರುವುದಾಗಿಯೂ ದೂರುದಲ್ಲಿ ಉಲ್ಲೇಖವಾಗಿದೆ. ಇದಲ್ಲದೇ ದೂರುದಾರೆಯ ಖಾಸಗಿ ಫೋಟೋಗಳು ಮತ್ತು ವಿಡಿಯೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆಂಬ ಗಂಭೀರ ಆರೋಪವೂ ಪೊರೆಲ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಹೂಗ್ಲಿ ಜಿಲ್ಲೆಯ ಮೊಗ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಭಿಷೇಕ್ ಪೊರೆಲ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನ ಸಂಪೂರ್ಣವಾಗಿ ತಳ್ಳಿಹಾಕಿದ್ದರು.
ಪೊಲೀಸರು, ಪೊರೆಲ್‌ನ ಚಂದನ್‌ನಗರ ನಿವಾಸಕ್ಕೆ ಹಲವು ಬಾರಿ ಭೇಟಿ ನೀಡಿದ್ದರು, ಆದ್ರೆ ಅಭಿಷೇಕ್ ಅಲ್ಲಿರಲಿಲ್ಲ. ನಂತರ ದೂರುದಾರರು ಕೋಲ್ಕತ್ತಾ ಹೈಕೋರ್ಟ್‌ಗೆ ತೆರಳಿದರು. ಬಳಿಕ ಮೊಗ್ರಾ ಪೊಲೀಸರಿಗೆ ಪೊರೇಲ್‌ನನ್ನ ತಕ್ಷಣ ಬಂಧಿಸುವಂತೆ ಕೋರ್ಟ್ ನಿರ್ದೇಶನ ನೀಡಿತು. ಹೈಕೋರ್ಟ್ ಆದೇಶದ ನಂತರ, ಪೊರೇಲ್‌ನನ್ನ ಬಂಧಿಸಲಾಯಿತು.

ಮೂಲಗಳು ಹೇಳುವಂತೆ, ಸಂತ್ರಸ್ತ ದೂರುದಾರೆ ಹಾಗೂ ಪೊರೇಲ್ ಇಬ್ಬರೂ ಮೂರುವರೆ ವರ್ಷಗಳಿಂದ ಸಂಬಂಧ ಹೊಂದಿದ್ದರು. ಮದುವೆಯಾಗಲು ಪ್ಲ್ಯಾನ್ ಮಾಡಿದ್ದರು, ಒಟ್ಟಿಗೆ ವಿದೇಶ ಪ್ರವಾಸ ಕೂಡ ಹೋಗಿದ್ದರು ಎಂದು ತಿಳಿದುಬಂದಿದೆ.
ಅಭಿಷೇಕ್ ಪೊರೆಲ್ ಕ್ರಿಕೆಟ್ ವೃತ್ತಿಜೀವನ ಹೇಗಿದೆ?
23 ವರ್ಷದ ಅಭಿಷೇಕ್ ಪೊರೆಲ್ ಇನ್ನೂ ಭಾರತ ರಾಷ್ಟ್ರೀಯ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಆದರೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪರ 4 ಆವೃತ್ತಿಗಳಲ್ಲಿ ಒಟ್ಟು 35 ಪಂದ್ಯಗಳನ್ನ ಆಡಿದ್ದಾರೆ. 25.63 ಸರಾಸರಿಯಲ್ಲಿ 769 ರನ್ ಗಳಿಸಿದ್ದಾರೆ. ಇದರೊಂದಿಗೆ ದೇಶೀಯ ಕ್ರಿಕೆಟ್‌ನಲ್ಲಿ 32 ಪ್ರಥಮ ದರ್ಜೆ ಪಂದ್ಯಗಳು ಹಾಗೂ 23 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿರುವ ಪೊರೆಲ್, ಕ್ರಮವಾಗಿ 1,408 ಮತ್ತು 833 ರನ್ ಗಳಿಸಿದ್ದಾರೆ. ಬಂಗಾಳ ತಂಡದ ಪ್ರಮುಖ ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.

