ಚಿಕ್ಕಮಗಳೂರು: ಡಿ. 6,7,8 ರಂದು ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತಜಯಂತಿ (Datta Jayanti) ಹಿನ್ನೆಲೆ ಡಿಸೆಂಬರ್ 5ರ ಬೆಳಗ್ಗೆ 6 ಗಂಟೆಯಿಂದ ಡಿ.9ರ ಬೆಳಗ್ಗೆ 10 ಗಂಟೆಯವರೆ ಮುಳ್ಳಯ್ಯನಗಿರಿ ಭಾಗದ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ (DC) ಕೆ.ಎನ್ ರಮೇಶ್ ತಿಳಿಸಿದ್ದಾರೆ.
ಡಿಸೆಂಬರ್ 6 ರಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಹಿನ್ನೆಲೆ ಜಿಲ್ಲಾದ್ಯಂತ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಭಕ್ತಾಧಿಗಳ ಅನುಕೂಲಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಗಮ ಸಂಚಾರ ದೃಷ್ಟಿಯಿಂದ ರಸ್ತೆ ದುರಸ್ಥಿ ಕಾರ್ಯವೂ ಪೂರ್ಣಗೊಂಡಿದೆ. ತಾತ್ಕಾಲಿಕ ಆರೋಗ್ಯ ಸೌಲಭವನ್ನು ಒದಗಿಸಲು 3 ದಿನದ ಮಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗುವುದು. ಹೊನ್ನಮ್ಮನ ಹಳ್ಳದಲ್ಲಿ ಭಕ್ತರು ಸ್ನಾನ ಮಾಡಲು ಮೆಟ್ಟಿಲು, ಕಟ್ಟೆ ನಿರ್ಮಾಣ ಮಾಡಲಾಗಿದೆ. ದತ್ತ ಜಯಂತಿ ಮುಗಿಯುವವರೆಗೂ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 3 ದಿನವಾದ್ರೂ ಸಿಗದ ಚಾಲಾಕಿ ಚಿರತೆ – 4ನೇ ದಿನಕ್ಕೆ ಕಾರ್ಯಾಚರಣೆ
ಭಕ್ತರು ಬೆಟ್ಟಕ್ಕೆ ತೆರಳಲು ಅನುಕೂಲವಾಗುವಂತೆ ಖಾಸಗಿ ಸಂಘ ಸಂಸ್ಥೆಯವರೊಂದಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕುಡಿಯುವ ನೀರು ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಡಿಸೆಂಬರ್ 6 ರಿಂದ 8 ವರೆಗೆ ದತ್ತಜಯಂತಿ ನಡೆಯಲಿದ್ದು, 6 ರಂದು ಅನುಸೂಯ ಜಯಂತಿ ನಡೆಯಲಿದೆ. ಅಂದು ಬೋಳರಾಮೇಶ್ವರ ದೇವಸ್ಥಾನದಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುವರೆಗೂ ಮೆರವಣಿಗೆ ನಡೆಯಲಿದೆ. ಸುಮಾರು 5 ರಿಂದ 6 ಸಾವಿರ ಜನರು ಸೇರುವ ಮಾಹಿತಿ ಇದೆ. ಡಿ. 7 ರಂದು ನಗರದ ಕಾಮಧೇನು ಗಣಪತಿ ದೇವಸ್ಥಾನ ಆವರಣದಿಂದ ಆಜಾದ್‍ಪಾರ್ಕ್ ವೃತ್ತದವರೆಗೂ ಶೋಭಾಯಾತ್ರೆ ನಡೆಯಲಿದ್ದು, 30 ಸಾವಿರಕ್ಕೂ ಅಧಿಕ ಜನ ಸೇರುವ ಬಗ್ಗೆ ಮಾಹಿತಿ ಇದೆ. ಡಿ. 8ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ನಡೆಯಲಿದೆ. ಈ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದತ್ತಪೀಠಕ್ಕೆ ತಾತ್ಕಾಲಿಕ ಹಿಂದೂ ಅರ್ಚಕರ ನೇಮಕ- ಬಿಜೆಪಿಯಿಂದ ಸಂಭ್ರಮಾಚರಣೆ
ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕ್ಯಾಮೆರಾ, ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ದತ್ತ ಜಯಂತಿ ಕಾರ್ಯಕ್ರಮಗಳ ದಿನದಂದು ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡು ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟರ್ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅನ್ಯಧರ್ಮ ಜನರ ಭಾವನೆಗೆ ಧಕ್ಕೆಯಾಗುಂತಹ ಘೋಷಣೆಗಳನ್ನು ಕೂಗದಂತೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.