ಮಂಡ್ಯ: ನಟ ಯಶ್ ಸುಮಲತಾ ಅವರ ಪರ ಪ್ರಚಾರ ಮಾಡುವ ವೇಳೆ ಮಹಿಳಾ ಅಭಿಮಾನಿಯೊಬ್ಬರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದನ್ನು ನೋಡಿದ ಯಶ್ ಗಾಡಿ ನಿಲ್ಲಿಸಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ನಟ ಯಶ್ ಕಿಕ್ಕೇರಿಯಲ್ಲಿ ಪ್ರಚಾರ ಮಾಡುತ್ತಿದ್ದರು. ಇದೇ ವೇಳೆ ಪ್ರಚಾರದ ವಾಹನವನ್ನೇ ಪತಿಯೊಂದಿಗೆ ಹಿಂಬಾಲಿಸಿಕೊಂಡು ಮಹಿಳಾ ಅಭಿಮಾನಿ ಬರುತ್ತಿದ್ದರು. ಇದನ್ನು ನೋಡಿದ ಯಶ್ ತಕ್ಷಣವೇ ಗಾಡಿ ನಿಲ್ಲಿಸಿದ್ದಾರೆ. ನಂತರ ಮಹಿಳಾ ಅಭಿಮಾನಿಯನ್ನು ಗಾಡಿಯ ಮೇಲೆ ಕರೆಸಿದ್ದಾರೆ. ನಂತರ ಅವರ ಪತಿಯನ್ನು ಮೇಲೆ ಕರೆಸಿಕೊಂಡಿದ್ದು, ದಂಪತಿಯ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಮೂಲಕ ಮಹಿಳಾ ಅಭಿಮಾನಿಯ ಸೆಲ್ಫಿ ಆಸೆಯನ್ನು ರಾಕಿಂಗ್ ಸ್ಟಾರ್ ಈಡೇರಿಸಿದ್ದಾರೆ.
ತಮ್ಮ ಜೊತೆ ಸೆಲ್ಫಿಗೆ ಅವಕಾಶ ಕಲ್ಪಿಸಿದ ಯಶ್ ಅವರ ಕಾಲಿಗೆ ಮಹಿಳೆ ಬಿದ್ದು ಕೃತಜ್ಞತೆ ಸಲ್ಲಿಸಿದ್ದಾರೆ. ಬಳಿಕ ಮಹಿಳೆ ಮಾತನಾಡಿ, ನಾನು ಪತಿ ಜೊತೆ ಬೈಕಿನಲ್ಲಿ ಬರುತ್ತಿದ್ದೆ. ಆಗ ಯಶ್ ಅವರನ್ನು ನೋಡಿ, ಅಣ್ಣ ಎಂದು ಕರೆದೆ. ತಕ್ಷಣ ಅವರು ಪ್ರಚಾರದ ವಾಹನವನ್ನ ನಿಲ್ಲಿಸಿ ಏನಮ್ಮ ಎಂದು ಕೇಳಿದರು. ಅಣ್ಣ ನಿಮ್ಮ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಕೇಳಿದೆ. ಅದಕ್ಕೆ ಅವರು ಒಪ್ಪಿ ನಮ್ಮ ಜೊತೆ ಸೆಲ್ಫಿ ತೆಗೆಸಿಕೊಂಡರು. ಅವರು ತುಂಬಾ ಒಳ್ಳೆಯವರು, ಸುಮಲತಾ ಗೆಲ್ಲಬೇಕು ಎಂದು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಸುಮಲತಾ ಅವರು ಗೆಲುವು ಸಾಧಿಸಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಮಹಿಳೆ ಹೇಳಿಕೊಂಡರು.