ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಟಿ ಸ್ಪಂದನಾ ಸೋಮಣ್ಣ (Spandana Somanna) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕಾಲೇಜು ದಿನಗಳ ಗೆಳೆಯ ವರುಣ್ ಅವರೊಂದಿಗೆ ಸ್ಪಂದನಾ ಸಪ್ತಪದಿ ತುಳಿದಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ವರುಣ್ (Varun) ಹಾಗೂ ಸ್ಪಂದನಾ ಕಳೆದ 6-7 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಇವರ ಬಹುದಿನಗಳ ಪ್ರೀತಿ ಮದುವೆಯ ಬಂಧನದ ಮೂಲಕ ಸಾಕಾರಗೊಂಡಿದೆ. ಸ್ಪಂದನಾ ಅವರ ಹುಟ್ಟೂರಾದ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದೆ. ಶನಿವಾರ ಆರತಕ್ಷತೆ ನಡೆದಿದ್ದು, ಭಾನುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಈ ಪ್ರೇಮಜೋಡಿ ಸತಿ-ಪತಿಗಳಾಗಿದ್ದಾರೆ.
ಬಿಗ್ಬಾಸ್ ಮೂಲಕ ಮನೆಮಾತಾಗಿದ್ದ ಸ್ಪಂದನಾ ಅವರ ಮದುವೆಗೆ ಹಲವು ನಟ-ನಟಿಯರು ಆಗಮಿಸಿ ಶುಭ ಹಾರೈಸಿದ್ದಾರೆ. ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ (Gilli Nata) ಹಾಗೂ ಸ್ಪರ್ಧಿ ಕಾವ್ಯಾ ಕೂಡ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮದುವೆ ಶಾಸ್ತ್ರಗಳು ನಡೆದಿದ್ದು, ಸ್ಪಂದನ ಸಂಭ್ರಮದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ.
ಆರತಕ್ಷತೆಯಲ್ಲಿ ನೇರಳೆ ಬಣ್ಣದ ಲೆಹೆಂಗಾ ಧರಿಸಿ ಮಿಂಚಿದ್ದ ಸ್ಪಂದನ, ಮದುವೆಯ ಮುಹೂರ್ತದಲ್ಲಿ ಬಂಗಾರದ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದಾರೆ.
ಇನ್ನು, ಪತಿ ವರುಣ್ ಅವರನ್ನು ಇನ್ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದಾಗಿನಿಂದ ಸ್ಪಂದನ ಟ್ರೋಲ್ಗೆ ಒಳಗಾಗಿದ್ದರು. ಪತಿಯ ಬಳಿ ಹಣವಿದೆ ಎಂಬ ಕಾರಣಕ್ಕೆ ಮದುವೆಯಾಗುತ್ತಿದ್ದಾರೆ ಎಂಬಿತ್ಯಾದಿ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಆದರೆ, ಈ ಟೀಕೆಗಳಿಗೆಲ್ಲ ಸ್ಪಂದನ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಆರೇಳು ವರ್ಷಗಳ ಪ್ರೀತಿಗೆ ಮದುವೆಯ ರೂಪ ಸಿಕ್ಕಿರುವ ಸಂತಸದಲ್ಲಿದ್ದಾರೆ.
ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿರುವ ಸ್ಪಂದನ, ಇತ್ತೀಚೆಗೆ ನಟನೆಗೆ ಕೊಂಚ ವಿರಾಮ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು, ಇದೀಗ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಮದುವೆಯ ಬಳಿಕ ಸ್ಪಂದನ ಪತಿ ವರುಣ್ ಅವರೊಂದಿಗೆ ವಿದೇಶದಲ್ಲೇ ನೆಲೆಸುತ್ತಾರಾ? ಅಥವಾ ವರುಣ್ ಭಾರತಕ್ಕೆ ಬಂದು ನೆಲೆಸುತ್ತಾರಾ? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಒಟ್ಟಿನಲ್ಲಿ, ಬಹುದಿನಗಳ ಪ್ರೀತಿಯನ್ನು ಮದುವೆಯ ಮೂಲಕ ಸಾರ್ಥಕಗೊಳಿಸಿಕೊಂಡಿರುವ ಸ್ಪಂದನ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.


