– ಸತ್ಯ ಬಾಯಿಬಿಡಿಸಲು ಬೆಂಗಳೂರಿಗೆ ಕರೆತಂದಿದ್ದ ಪ್ರಿಯಕರ
– ಕೇಳಿದ್ದೆಲ್ಲಾ ಕೊಡಿಸಿ ಸತ್ಯ ಬಾಯ್ಬಿಡಿಸಿದ ಬಳಿಕ ಕೊಲೆ
ಬೆಂಗಳೂರು: ಕಾಟನ್ಪೇಟೆಯ ಲಾಡ್ಜ್ನಲ್ಲಿ ಪ್ರಿಯತಮೆಯ ಭೀಕರ ಹತ್ಯೆ ಹಿಂದಿನ ಸ್ಟೋರಿ ರಿವೀಲ್ ಆಗಿದೆ. ಬೇರೆ ಹುಡುಗನ ಜೊತೆ ಓಡಾಡ್ತಿದ್ದ ಪ್ರಿಯತಮೆಯಿಂದ ಬಾಯಿ ಬಿಡಿಸಿದ ಬೆನ್ನಲ್ಲೇ ಚಾಕು ಇರಿದು ಕೊಲೆ ಮಾಡಿದ್ದಾನೆ.
ನಿನ್ನೆ ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್ನಲ್ಲಿ ಪ್ರಿಯಕರನಿಂದಲೇ ಪ್ರಿಯತಮೆ ಕೊಲೆಯಾಗಿದ್ದಳು. ಗಂಗಾ ಹತ್ಯೆಯಾದ ಯುವತಿ. ಪ್ರಿಯಕರ ಗೋಕುಲ್ ಕೃಷ್ಣನನ್ನು ಬಂಧಿಸಲಾಗಿತ್ತು. ಇದೀಗ ಕೊಲೆ ಹಿಂದಿನ ಸೀಕ್ರೆಟ್ನ ಪೊಲೀಸರ ಮುಂದೆ ಆರೋಪಿ ಕಕ್ಕಿದ್ದಾನೆ. ಕೊಲೆಯಾದ ಗಂಗಾ ಮತ್ತೊಬ್ಬ ಹುಡುಗನೊಂದಿಗೆ ಓಡಾಡುತ್ತಿರುವುದನ್ನು ಪ್ರಿಯಕರ ಗೋಕುಲ್ ಕೃಷ್ಣ ಈ ಹಿಂದೆ ಗಮನಿಸಿದ್ದ. ಈ ಕುರಿತು ಹಲವು ಬಾರಿ ಪ್ರಶ್ನಿಸಿದರೂ ಆಕೆ ನಿರಾಕರಿಸಿದ್ದಳು ಎನ್ನಲಾಗಿದೆ. ಹೀಗಾಗಿ, ಸತ್ಯ ಬಾಯಿಬಿಡಿಸಿ ಕೊಲೆಗೈಯಲು ಆರೋಪಿ ಸಂಚು ರೂಪಿಸಿ ನಿನ್ನೆ ಗಂಗಾಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಇದನ್ನೂ ಓದಿ: ಮಾತುಕತೆಗಾಗಿ ಮಸ್ತಾನ್ ದರ್ಗಾ ಬಳಿಯ ಲಾಡ್ಜ್ಗೆ ಬಂದಿದ್ದ ಜೋಡಿ – ಇಂದು ಚೆಕ್ಔಟ್ ಆಗುವಾಗ ಗಲಾಟೆ; ಇರಿದು ಕೊಂದ ಪ್ರಿಯಕರ
ಪ್ರಿಯತಮೆ ಗಂಗಾಳನ್ನ, ಗೋಕುಲ್ ಮಾಲ್ಗಳಲ್ಲಿ ಸುತ್ತಾಡಿಸಿ ಆಕೆ ಕೇಳಿದ್ದನ್ನೆಲ್ಲಾ ಕೊಡಿಸಿದ್ದಾನೆ. ಬಳಿಕ ಮತ್ತೆ ಆ ಹುಡುಗನ ವಿಚಾರ ಪ್ರಸ್ತಾಪಿಸಿ, ನೀನು ಸತ್ಯ ಹೇಳಿದರೆ ಏನೂ ಅಂದುಕೊಳ್ಳುವುದಿಲ್ಲ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಗಂಗಾ ತನ್ನ ಸ್ನೇಹಿತನ ಬಗ್ಗೆ ತಿಳಿಸಿದ್ದಾಳೆ. ಸತ್ಯ ಹೊರಬರುತ್ತಿದ್ದಂತೆ ಜಗಳ ತೆಗೆದ ಗೋಕುಲ್, ಮೊದಲೇ ತಂದಿದ್ದ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಗಂಗಾ ಸಹಾಯಕ್ಕಾಗಿ ಕೂಗುತ್ತಾ ಓಡಿದ್ದು, ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಲಾಡ್ಜ್ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಗಂಗಾ ಮೃತಪಟ್ಟಿದ್ದಾಳೆ.
ಸದ್ಯ ಕಾಟನ್ಪೇಟೆ ಪೊಲೀಸರು ಆರೋಪಿ ಗೋಕುಲ್ ಕೃಷ್ಣನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೋಪದ ಕೈಗೆ ಬುದ್ದಿ ಕೊಟ್ಟ ಪ್ರಿಯಕರ ಜೈಲು ಸೇರಿದ್ರೆ, ಪ್ರಿಯಕರನ ನಂಬಿ ಬಂದ ಯುವತಿ ಮಸಣ ಸೇರುವಂತಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಕೊಲೆ – ಪ್ರಿಯಕರನಿಂದಲೇ ದುಷ್ಕೃತ್ಯ
