– ಪಾದಾಚಾರಿಗಳು, ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸಲು ಸೂಚನೆ
ಬೆಂಗಳೂರು: ಚಳಿಗಾಲದಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿರುವುದರಿಂದ ವಾಹನ ಚಲಾಯಿಸುವಾಗ ಪಾದಾಚಾರಿಗಳು, ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸಲು ಚಾಲಕರಿಗೆ ಕೆಎಸ್ಆರ್ಟಿ (KSRTC) ಸೂಚಿನೆ ನೀಡಿದೆ.
ವಾಹನ ಚಲಾಯಿಸುವಾಗ ರಾತ್ರಿ ಸಮಯದಲ್ಲಿ, ಬೆಳಗಿನ ಜಾವ ಕಡಿಮೆ ಗೋಚರತೆ ಹಾಗೂ ಮಂಜಿನ ಸಮಯದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ಹೊರಡುವ ಮುನ್ನ ವಾಹನದ ಹೆಡ್ಲೈಟ್, ಇಂಡಿಕೇಟರ್, ಬ್ರೇಕ್ಲೈಟ್ ಮತ್ತು ವೈಪರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ. ಮಂಜು ಅಥವಾ ಕಡಿಮೆ ಗೋಚರತೆಯ ಸಂದರ್ಭದಲ್ಲಿ ಲೋ-ಬೀಮ್ ಲೈಟ್ ಬಳಸಿಕೊಂಡು ವೇಗವನ್ನು ನಿಯಂತ್ರಣದಲ್ಲಿರಿಸಿ ಎಂದು ತಿಳಿಸಿದೆ. ಇದನ್ನೂ ಓದಿ: ಸಿಎಂ ಡಿಕೆಶಿ ಮನೆ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ – ಆರೋಪಿ ಕಾರ್ತಿಕ್ ಅರೆಸ್ಟ್
ವಾಹನಗಳ ನಡುವೆ ಸುರಕ್ಷಿತ ಅಂತರ ಕಾಪಾಡಿಕೊಳ್ಳಿ. ತುರ್ತು ಸಂದರ್ಭಗಳಲ್ಲಿ ವಾಹನ ನಿಲ್ಲಿಸಲು ಅಗತ್ಯ ಅಂತರವನ್ನು ಪರಿಗಣಿಸಿ. ಅನಗತ್ಯ ಓವರ್ಟೇಕ್ ಹಾಗೂ ಅಪಾಯಕಾರಿ ರೀತಿಯ ಲೇನ್ ಬದಲಾವಣೆಯನ್ನು ತಪ್ಪಿಸಿ. ಹಠಾತ್ ಬ್ರೇಕ್ ಹಾಕುವುದನ್ನು ಮತ್ತು ವೇಗದ ಏರಿಳಿತಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎಂದು ಸೂಚಿಸಿದೆ.
ದೀರ್ಘ ಪ್ರಯಾಣದ ವೇಳೆ ಅಗತ್ಯ ವಿಶ್ರಾಂತಿ ಪಡೆಯಿರಿ. ಆಯಾಸ ಅಥವಾ ನಿದ್ರಾಹೀನ ಸ್ಥಿತಿಯಲ್ಲಿ ಚಾಲನೆ ಮಾಡಬೇಡಿ. ಮುಂಜಾನೆ ಹಾಗೂ ರಾತ್ರಿ ವೇಳೆಯಲ್ಲಿ ಹೆಚ್ಚು ಜಾಗರೂಕರಾಗಿರಿ. ಈ ಸಮಯದಲ್ಲಿ ಮಂಜಿನ ಪ್ರಮಾಣ ಹೆಚ್ಚಿರುತ್ತದೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲಾ ವಾಹನಗಳ ಸಮೀಪ ಹೆಚ್ಚಿನ ಎಚ್ಚರಿಕೆ ವಹಿಸಿ ಎಂದಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಆಸ್ತಿಗಾಗಿ ಅತ್ತೆ, ಅಳಿಯನ ಕೊಲೆ – ಸಹೋದರಿಯರ ಮಕ್ಕಳಿಂದ ಕೃತ್ಯ
ವಾಹನದ ಟೈರ್ಗಳ ಸ್ಥಿತಿ ಹಾಗೂ ಗಾಳಿಯ ಒತ್ತಡವನ್ನು ನಿಯಮಿತವಾಗಿ ಪರಿಶೀಲಿಸಿ. ಮಳೆ, ಮಂಜು ಅಥವಾ ಜಾರುವ ರಸ್ತೆಗಳಿರುವ ಸಂದರ್ಭದಲ್ಲಿ, ತಿರುವುಗಳಲ್ಲಿ ಮತ್ತು ಘಾಟ್ ರಸ್ತೆಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಿ. ಅಲ್ಲದೇ ಪ್ರಯಾಣಿಕರು ಬಸ್ ಹತ್ತುವಾಗ ಮತ್ತು ಇಳಿಯುವಾಗ ವಾಹನವನ್ನು ಸಂಪೂರ್ಣ ನಿಲ್ಲಿಸಿದ ನಂತರವೇ ಚಾಲನೆ ಪ್ರಾರಂಭಿಸಿ. ಸಂಚಾರ ನಿಯಮ ಉಲ್ಲಂಘನೆಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಿ. ಚಾಲನೆಯ ಮೊದಲು ಮತ್ತು ನಂತರ ವಾಹನದ ಸುರಕ್ಷತಾ ತಪಾಸಣೆಯನ್ನು ಕಡ್ಡಾಯವಾಗಿ ನಿರ್ವಹಿಸಿ. ಯಾವುದೇ ತಾಂತ್ರಿಕ ದೋಷ ಕಂಡುಬಂದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ದೋಷ ಸರಿಪಡಿಸಿದ ನಂತರವೇ ವಾಹನ ಚಾಲನೆ ಮಾಡಿ ಹಾಗೂ ರಾಜ್ಯ / ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಅನಧಿಕೃತ ಸ್ಥಳಗಳಲ್ಲಿ ನಿಲುಗಡೆ ಮಾಡದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಕೆಲವರು ರಾಜಕೀಯ ಮಾಡ್ತಿದ್ದಾರೆ, ಲಿಖಿತ ಭರವಸೆ ಕೊಡಲು ಸಾಧ್ಯವಿಲ್ಲ – ಸಿಎಂ ಡಿಕೆಶಿ ಖಡಕ್ ಹೇಳಿಕೆ
