ಹಾಸನ: ಕಾಡಾನೆ ಹಾವಳಿ ಹಾಸನ, ಚಿಕ್ಕಮಗಳೂರು ಜನರ ನಿದ್ದೆಗೆಡಿಸಿದೆ. ಹಾಸನದಿಂದ ಚಿಕ್ಕಮಗಳೂರಿಗೆ ಓಡಿಸಲಾಗಿದ್ದ 38 ಕಾಡಾನೆಗಳನ್ನ (Wild Elephant) ಮತ್ತೆ ಬೇಲೂರು ತಾಲೂಕಿಗೆ ವಾಪಸ್ ಕಳುಹಿಸಲಾಗಿದೆ.
ನಿನ್ನೆ ರಾತ್ರಿ ಚಿಕ್ಕಮಗಳೂರು ಸಿಸಿಎಫ್, ಡಿಎಫ್ಓ ನೇತೃತ್ವದಲ್ಲಿ ಚಿಕ್ಕಮಗಳೂರು (Chikkamagaluru) ಭಾಗದಲ್ಲಿದ್ದ ಕಾಡಾನೆಗಳನ್ನ ಬೇಲೂರು ಭಾಗಕ್ಕೆ ಓಡಿಸಲಾಗಿದೆ. ಈ ವೇಳೆ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ.
ವಿರೋಧದ ನಡುವೆಯೂ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಓಡಿಸಿದ್ದಾರೆ. ಬೇಲೂರು ತಾಲ್ಲೂಕಿನ, ಅರಮನೆ ಗುಡ್ಡ, ಪುಟ್ಟಮ್ಮನಗೊಳ್ಳ, ಮಲ್ಲಾಪುರ ಕಾನಳ್ಳಿ ಅರಣ್ಯ ಬಳಿ 38 ಕಾಡಾನೆಗಳು ಬೀಡುಬಿಟ್ಟಿವೆ.
ಇನ್ನು, ಕಾಫಿನಾಡಲ್ಲಿ ಆಪರೇಷನ್ ಒಂಟಿ ಸಲಗ ಕಾರ್ಯಾಚರಣೆಯೂ ಮುಂದುವರಿದಿದೆ. ಬೇಲೂರಿಂದ ಬಂದ ಹಿಂಡಿನಲ್ಲಿ ಬೇರೆಯಾಗಿ ಚಿಕ್ಕಮಗಳೂರು ನಗರದ ಸುತ್ತಮುತ್ತ ಓಡಾಡುತ್ತಿರುವ ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ ನಡೆಸಲಾಗ್ತಿದೆ. ಕುಮ್ಕಿ ಆನೆ ಸುಗ್ರೀವ, ಅಯ್ಯಪ್ಪ, ಮಾಣಿಕ್ಯಾ, ಸಾಗರ್, ಭೀಷ್ಮ ಹಾಗೂ ಜ್ಯೂ.ಅರ್ಜುನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗ್ತಿದೆ.

