– ಜನಗಣತಿಯಿಂದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪ್ರತ್ಯೇಕಿಸಲು ಚಿಂತನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳ ಕುರಿತು ಚರ್ಚಿಸುವ ಸಾಧ್ಯತೆಗಳಿವೆ.
ಈ ಹಿಂದೆ ಲೋಕಸಭೆಯಲ್ಲಿ ಸೋಲು ಕಂಡಿದ್ದ ಮಸೂದೆಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನವೆಂಬರ್ 30ರಿಂದ ಲೋಕಸಭೆ (Lok Sabha) ಹಾಗೂ ಡಿಸೆಂಬರ್ 2ರಿಂದ ರಾಜ್ಯಸಭೆ ಕಲಾಪಗಳು ನಡೆಯಲಿವೆ. ಡಿಸೆಂಬರ್ 3ರ ವರೆಗೆ ಅಧಿವೇಶನ ನಡೆಯಲಿದೆ.
ಹೀಗಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಜಾರಿಗೆ ತರುವ ಉದ್ದೇಶದಿಂದ ಈ ಮಸೂದೆಯನ್ನ ಅಂಗೀಕರಿಸಲು ಕೇಂದ್ರ ಶತ ಪ್ರಯತ್ನ ನಡೆಸುತ್ತಿದೆ. ಈ ಮಹಿಳಾ ಮೀಸಲಾತಿಯೊಂದಿಗೆ ಕ್ಷೇತ್ರ ಮರುವಿಂಗಡಣೆ ಮೂಲಕ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543 ರಿಂದ ಗರಿಷ್ಠ 850ಕ್ಕೆ ಹೆಚ್ಚಿಸುವ ಪ್ರಸ್ತಾಪವೂ ಇದೆ.
2023ರ ಕಾನೂನಿನಡಿ ಮಹಿಳೆಯರಿಗೆ ನೀಡಲಾಗಿರುವ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಪುನರ್ವಿಂಗಡಣೆ (Delimitation) ಮಾಡುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆ’ ಕುರಿತು ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜನಗಣತಿಯಿಂದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪ್ರತ್ಯೇಕಿಸಲು ಚಿಂತನೆ
ಇದರೊಂದಿಗೆ ಜನಗಣತಿಯಿಂದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಪ್ರತ್ಯೇಕಿಸಲು ಹಾಗೂ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಕ್ಷೇತ್ರಗಳ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜನಗಣತಿ ಪೂರ್ಣಗೊಳ್ಳುವವರೆಗೆ ಕಾಯದೇ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುವ ಚಿಂತನೆ ಕೇಂದ್ರದ್ದಾಗಿದೆ. ಆದ್ದರಿಂದ ಸಂಸತ್ನ ವಿಶೇಷ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗಳ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರ ಮರುವಿಂಗಡಣೆ ಮಸೂದೆಗೆ ವೈಎಸ್ಆರ್ಸಿಪಿ ಬೆಂಬಲ
ಇನ್ನೂ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ವೈಎಸ್ಆರ್ಸಿಪಿ ಬೆಂಬಲ ನೀಡಿದೆ. ಷರತ್ತಿನೊಂದಿಗೆ ಕೇಂದ್ರ ಸರ್ಕಾರದ ಈ ಮಸೂದೆಗೆ ಬೆಂಬಲ ನೀಡಲು ಜಗನ್ ಮೋಹನ್ ರೆಡ್ಡಿ ನಿರ್ಧಾರ ಮಾಡಿದ್ದಾರೆ. ರಾಜ್ಯಗಳ ನಡುವೆ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಬೇಕು, ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಪ್ರಾತಿನಿಧ್ಯಕ್ಕೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಕ್ಷದ ಸಂಸದರಿಗೆ ಬೆಂಬಲ ಸೂಚಿಸಬೇಕು ಎನ್ನುವ ಷರತ್ತುಗಳನ್ನ ಮುಂದಿಟ್ಟು ಬೆಂಬಲ ನೀಡುವುದಾಗಿ ಹೇಳಿದೆ.
ಮಸೂದೆಯಲ್ಲಿ ಏನಿದೆ?
ಉದ್ದೇಶಿತ ಮಸೂದೆಯ ಪ್ರಕಾರ ಲೋಕಸಭೆಯ ಸದಸ್ಯ ಬಲವನ್ನು ಪ್ರಸ್ತುತ ಇರುವ 543 ರಿಂದ 850ಕ್ಕೆ ಏರಿಸಲಾಗುವುದು. ಇದರಲ್ಲಿ ಮೂರನೇ ಒಂದು ಭಾಗದಷ್ಟು (ಸುಮಾರು 283 ಸ್ಥಾನಗಳು) ಮಹಿಳೆಯರಿಗೆ ಮೀಸಲಿರಲಿದೆ.
2027ರ ಜನಗಣತಿಗೆ ಕಾಯದೆ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯಗಳ ನಡುವಿನ ಸಮತೋಲನ ಕಾಪಾಡಲು ಪ್ರತಿ ರಾಜ್ಯದ ಸ್ಥಾನಗಳನ್ನು ಒಂದೇ ಸಮನಾಗಿ ಶೇ. 50ರಷ್ಟು ಹೆಚ್ಚಿಸಲಾಗುವುದು ಎಂದು ಸರ್ಕಾರ ಈ ಹಿಂದೆ ಮೌಖಿಕವಾಗಿ ಭರವಸೆ ನೀಡಿತ್ತು. ಆದರೆ ಕಳೆದ ಬಾರಿಯ ಮಸೂದೆಯ ಕರಡಿನಲ್ಲಿ ಈ ಅಂಶ ಇರಲಿಲ್ಲ.
ಸಂಖ್ಯೆ ಎಷ್ಟಿದೆ?
ಇದು ಸಂವಿಧಾನ ತಿದ್ದುಪಡಿ ಮಸೂದೆಯಾಗಿರುವುದರಿಂದ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ (ಸುಮಾರು 360 ಸಂಸದರ ಬೆಂಬಲ) ಅಗತ್ಯವಿದೆ. ಸದ್ಯ ಬಿಜೆಪಿಯ 241 ಸಂಸದರು ಸೇರಿ ಎನ್ಡಿಎ ಬಳಿ 319 ಸದಸ್ಯರ ಖಚಿತ ಬಲವಿದೆ.
• ಬಿಜೆಪಿ (BJP): 241
• ಟಿಡಿಪಿ (TDP): 16
• ಶಿವಸೇನೆ (ಶಿಂಧೆ ಬಣ): 13
• ಜೆಡಿಯು (JD-U): 12
• ಎಲ್ಜೆಪಿ (LJP-RV): 5
• ಜನಸೇನಾ ಪಕ್ಷ (JSP): 2
• ಇತರ ಮಿತ್ರಪಕ್ಷಗಳು (NCPI ಸೇರಿದಂತೆ): 31
ತೃಣಮೂಲ ಕಾಂಗ್ರೆಸ್ನಿಂದ (TMC) ಸಿಡಿದು ಎನ್ಸಿಪಿಐ (NCPI) ಸೇರಿರುವ 20 ಸಂಸದರ ಗುಂಪು ಸರ್ಕಾರಕ್ಕೆ ಬೆಂಬಲ ನೀಡಲಿದೆ. ಜೊತೆಗೆ ಪ್ರತಿ ರಾಜ್ಯದ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಿದರೆ ಮಸೂದೆ ಬೆಂಬಲಿಸಲು ಅಭ್ಯಂತರವಿಲ್ಲ ಎಂದು ಶರದ್ ಪವಾರ್ ಬಣದ ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಹೇಳಿರುವುದರಿಂದ ಆ ಪಕ್ಷದ 8 ಸಂಸದರ ಬೆಂಬಲವೂ ಸಿಗಬಹುದು.
ಮೇ ತಿಂಗಳಲ್ಲಿ ನಡೆದ ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ (TVK) ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರಿಂದ INDIA ಒಕ್ಕೂಟದಿಂದ ಹೊರಬಂದಿರುವ ಡಿಎಂಕೆಯ 22 ಸಂಸದರು ಹಾಗೂ ಇತರ ಪಕ್ಷೇತರ ಸಂಸದರ ನಿಲುವು ಈಗ ನಿರ್ಣಾಯಕವಾಗಿದೆ.
ಈಗ ಬಂದಿರುವ ಮಾಹಿತಿಗಳ ಪ್ರಕಾರ ಆಪ್ ಮತ್ತು ಆರ್ಜೆಡಿ ಪಕ್ಷಗಳು ಮತ ಹಾಕುವ ಸಮಯದಲ್ಲಿ ಗೈರಾಗಬಹುದು ಎಂದು ವರದಿಗಳು ತಿಳಿಸಿವೆ. ಒಂದು ವೇಳೆ ಸಂಸದರು ಗೈರಾದರೆ ಬಹುಮತಕ್ಕೆ ಬೇಕಾಗಿರುವ ಮತಗಳ ಸಂಖ್ಯೆ ಕಡಿಮೆಯಾಗಲಿದೆ.
ಏಪ್ರಿಲ್ನಲ್ಲಿ ಏನಾಗಿತ್ತು?
ಲೋಕಸಭೆಯಲ್ಲಿ ಹಾಜರಿದ್ದ 528 ಮಂದಿ ಸಂಸದರ ಪೈಕಿ 298 ಸಂಸದರ ಪರವಾಗಿ ಮತ ಚಲಾಯಿಸಿದರೆ ವಿರುದ್ಧವಾಗಿ 230 ಮತಗಳು ಬಿದ್ದಿದ್ದವು. ಅಗತ್ಯವಿದ್ದ 352 ಮತಗಳಿಗೆ ಹೋಲಿಸಿದರೆ 54 ಮತಗಳ ಕೊರತೆಯಿಂದಾಗಿ ಮಸೂದೆ ಸೋಲು ಕಂಡಿತು.
ಸರ್ಕಾರವು ಮಹಿಳಾ ಮೀಸಲಾತಿಯ ಹೆಸರಿನಲ್ಲಿ ತನಗೆ ಅನುಕೂಲವಾಗುವಂತೆ ಕ್ಷೇತ್ರಗಳ ನಕ್ಷೆಯನ್ನು ಬದಲಿಸುತ್ತಿದೆ ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಆರೋಪಿಸಿವೆ. ಮಸೂದೆಗೆ ಬೆಂಬಲ ನೀಡಲು ಕಾಂಗ್ರೆಸ್, ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ಸರ್ಕಾರದ ಮುಂದೆ 4 ಷರತ್ತುಗಳನ್ನು ಇಟ್ಟಿವೆ:
1. ಲೋಕಸಭೆಯ ಸದಸ್ಯ ಬಲವನ್ನು ಈಗಿರುವ 543ಕ್ಕೇ ಸೀಮಿತಗೊಳಿಸಬೇಕು.
2. ಯಾವ ರಾಜ್ಯದ ಸ್ಥಾನಗಳ ಸಂಖ್ಯೆಯನ್ನೂ ಬದಲಾಯಿಸಬಾರದು.
3. 2023ರ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ತಕ್ಷಣವೇ ಜಾರಿಗೊಳಿಸಿ, ಈಗಿರುವ 543 ಸ್ಥಾನಗಳಲ್ಲೇ 182 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
4. ಈ ವ್ಯವಸ್ಥೆಯನ್ನು ಮುಂದಿನ 25 ವರ್ಷಗಳ ಕಾಲ ಬದಲಾಯಿಸದಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು.
ವಿಪಕ್ಷಗಳ ಈ ಷರತ್ತುಗಳಿಗೆ ಒಪ್ಪಿದರೆ ಕ್ಷೇತ್ರ ಪುನರ್ವಿಂಗಡಣೆಯ ಮೂಲ ಉದ್ದೇಶವನ್ನೇ ಕೈಬಿಟ್ಟಂತಾಗುತ್ತದೆ ಎಂಬುದು ಸರ್ಕಾರದ ವಾದವಾಗಿದೆ. ಈ ನಡುವೆ, ಈ ವಿಷಯದ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.


