– ದೇಶದ ಹಲವು ರಾಜ್ಯಗಳ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಪದವಿ ಸೃಷ್ಟಿ
– 11ನೇ ಕ್ಲಾಸ್ ಓದಿ, ಸ್ತ್ರೀರೋಗ ತಜ್ಞನಾಗಿ ಕೆಲಸ ಮಾಡ್ತಿದ್ದ ಆಸಾಮಿ
ನವದೆಹಲಿ: ದೇಶದ 4 ರಾಜ್ಯಗಳಲ್ಲಿ ನಕಲಿ ವೈದ್ಯಕೀಯ ಪದವಿಗಳನ್ನು (Fake Medical Degree) ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ರಾಜಸ್ಥಾನ ವಿಶೇಷ ಕಾರ್ಯಾಚರಣೆ ದಳದ (SOG) ಪೊಲೀಸರು ಬಯಲಿಗೆಳೆದಿದ್ದಾರೆ. ಆರೋಪಿಗಳು ಸುಮಾರು 300 ಮಂದಿಗೆ ನಕಲಿ MBBS, MD ಹಾಗೂ DMRD ಪದವಿಗಳನ್ನ ಮಾರಾಟ ಮಾಡಿದ್ದು, ಇದಕ್ಕಾಗಿ 15 ಲಕ್ಷ ರೂ. ಗಿಂತಲೂ ಅಧಿಕ ಹಣ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ.
ವಿಶ್ವವಿದ್ಯಾಲಯಗಳ ವೆಬ್ಸೈಟ್ಗಳಲ್ಲಿಯೇ ನಕಲಿ ಪದವಿಗಳ ವಿವರಗಳನ್ನ ಅಪ್ಲೋಡ್ ಮಾಡಿಸಿ, ಅವು ನೈಜ ಪದವಿಗಳೆಂಬಂತೆ ಬಿಂಬಿಸಲಾಗುತ್ತಿತ್ತು. ಈ ಮೂಲಕ ನಕಲಿ ಪದವಿ ಪಡೆದವರು ವೈದ್ಯಕೀಯ ಮಂಡಳಿಯಲ್ಲಿ (Medical Board) ನೋಂದಣಿ ಮಾಡಿಸಿಕೊಂಡು ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗುತ್ತಿತ್ತು ಎಂಬ ಸ್ಫೋಟಕ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ADG ವಿಶಾಲ್ ಬನ್ಸಾಲ್ ಅವರ ನಿರ್ದೇಶನದಲ್ಲಿ, DIG ಭುವನ್ ಭೂಷಣ್ ಹಾಗೂ SP ಸತ್ನಾಮ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. 4 ರಾಜ್ಯಗಳಲ್ಲಿ ಹರಡಿಕೊಂಡಿದ್ದ ಜಾಲದ ಕುರಿತು SOG ನಡೆಸಿದ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
11ನೇ ತರಗತಿ ಓದಿದ್ದವನಿಗೆ ಡಾಕ್ಟರ್ ಕೆಲಸ
ಈ ಪ್ರಕರಣದಲ್ಲಿ ಬೆಳಕಿಗೆ ಬಂದ ಪ್ರಮುಖ ಸಂಗತಿಯೆಂದರೆ, ರಾಮಕಿಶೋರ್ ಮಹಾವರ್ ಎಂಬಾತ ಕೇವಲ 11ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದರೂ, ನಕಲಿ ಶೈಕ್ಷಣಿಕ ದಾಖಲೆಗಳ ಮೂಲಕ MBBS ವೈದ್ಯನೆಂದು ಗುರುತಿಸಿಕೊಂಡಿದ್ದಾನೆ.
ನಕಲಿ ಪದವಿಗಳ ಆಧಾರದಲ್ಲಿ ರಾಜಸ್ಥಾನ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಈತ, ರಾಜಸ್ಥಾನ ಹಾಗೂ ದೆಹಲಿಯ ಆಸ್ಪತ್ರೆಗಳಲ್ಲಿ ವೈದ್ಯನಾಗಿ ಕೆಲಸ ಮಾಡಿದ್ದಾನೆ. ಅಷ್ಟೇ ಅಲ್ಲದೆ, ದೆಹಲಿಯ ಆಸ್ಪತ್ರೆಯೊಂದರಲ್ಲಿ ಸ್ತ್ರೀರೋಗ ತಜ್ಞನೆಂದು ಹೇಳಿಕೊಂಡು ಅಲ್ಟ್ರಾಸೌಂಡ್ ಪರೀಕ್ಷೆಗಳನ್ನೂ ನಡೆಸುತ್ತಿದ್ದ. ಪ್ರತಿದಿನ ಸುಮಾರು 15ರಿಂದ 20 ಮಂದಿಗೆ ಸೋನೋಗ್ರಫಿ ಪರೀಕ್ಷೆಗಳನ್ನ ನಡೆಸುತ್ತಿದ್ದ. ಅಗತ್ಯ ವೈದ್ಯಕೀಯ ಅರ್ಹತೆಯೇ ಇಲ್ಲದ ವ್ಯಕ್ತಿಯೊಬ್ಬ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸಂಗತಿ ಗಂಭೀರ ಆತಂಕಕ್ಕೆ ಕಾರಣವಾಗಿದೆ.
4 ರಾಜ್ಯಗಳಿಗೆ ವ್ಯಾಪಿಸಿದ್ದ ಜಾಲ
ನಕಲಿ ಪದವಿಗಳನ್ನ ರೆಡಿ ಮಾಡೋದ್ರಿಂದ ಹಿಡಿದು, ಅವುಗಳನ್ನು ವಿವಿ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಿ ಅಧಿಕೃತ ದಾಖಲೆಗಳಂತೆ ಬಿಂಬಿಸುವವರೆಗೆ ಈ ಜಾಲದಲ್ಲಿ ಹಲವು ಮಂದಿ ಪ್ರತ್ಯೇಕ ಜವಾಬ್ದಾರಿಗಳನ್ನ ನಿರ್ವಹಿಸುತ್ತಿದ್ದರು ಎಂದು SOG ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ನಿಂದ ಮನೀಶ್ ಮಾಂಝಿ, ಲಕ್ನೋದಿಂದ ಖುರ್ರಂ ತೌಫೀಕ್ ಹಾಗೂ ಮುಂಬೈನಿಂದ ಸತ್ಯಜಿತ್ ಪಾಣಿಗ್ರಹಿ ಎಂಬಾತನನ್ನು ಬಂಧಿಸಲಾಗಿದೆ. ಕ್ರಮವಾಗಿ ಮೊದಲಿಬ್ಬರು ನಕಲಿ ಪದವಿಗಳನ್ನು ವಿಶ್ವವಿದ್ಯಾಲಯಗಳ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಿಸುತ್ತಿದ್ದರು, ಕೊನೇ ಆರೋಪಿ ನಕಲಿ ಪದವಿಗಳನ್ನು ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.
ನಕಲಿ ಪದವಿಗಳನ್ನು ತಯಾರಿಸುವುದು, ವಿಶ್ವವಿದ್ಯಾಲಯಗಳ ಆನ್ಲೈನ್ ದಾಖಲೆಗಳಲ್ಲಿ ಅವುಗಳನ್ನು ಸೇರಿಸುವುದು ಹಾಗೂ ಪರಿಶೀಲನೆ ವೇಳೆ ನೈಜ ದಾಖಲೆಗಳಂತೆ ಕಾಣುವಂತೆ ಮಾಡುವುದು ಈ ಜಾಲದ ಕಾರ್ಯವಿಧಾನವಾಗಿತ್ತು. ಇದರಿಂದ ನಕಲಿ ಪದವಿ ಪಡೆದವರು ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
300 ಮಂದಿಗೆ ನಕಲಿ ಪದವಿ ಸೇಲ್
ಆರೋಪಿಗಳು ಸುಮಾರು 300 ಮಂದಿಗೆ ವೈದ್ಯಕೀಯ ಸೇರಿದಂತೆ ವಿವಿಧ ಶೈಕ್ಷಣಿಕ ಪದವಿಗಳನ್ನ ನಕಲಿಯಾಗಿ ಒದಗಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಪದವಿ ಬಯಸಿದವರಿಂದ 15 ಲಕ್ಷ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಿರುವ ಶಂಕೆಯಿದೆ. ತನಿಖೆಯ ವೇಳೆ ಹಲವು ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಹೆಸರುಗಳು ಮುನ್ನೆಲೆಗೆ ಬಂದಿವೆ. ಈ ಸಂಸ್ಥೆಗಳಿಗೂ ಜಾಲಕ್ಕೂ ಇರುವ ಸಂಪರ್ಕ ಹಾಗೂ ನಕಲಿ ಪದವಿಗಳ ಮಾಹಿತಿಯನ್ನು ಆನ್ಲೈನ್ನಲ್ಲಿ ಅಧಿಕೃತ ದಾಖಲೆಗಳಂತೆ ಬಿಂಬಿಸಿದ ರೀತಿಯ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

