ಮಂಡ್ಯ: ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯ ವಿವಾದದ ಬೆನ್ನಲ್ಲೇ, ಸಕ್ಕರೆ ನಗರಿ ಮಂಡ್ಯದಲ್ಲಿ ಮತ್ತೊಂದು ಫ್ಲೆಕ್ಸ್ ರಾಜಕೀಯ ಭುಗಿಲೆದ್ದಿದೆ. ಮಿಮ್ಸ್ ಆಸ್ಪತ್ರೆ (Mandya MIMS Hospital) ಆವರಣದಲ್ಲಿದ್ದ ಅಭಿವೃದ್ಧಿ ಕಾಮಗಾರಿಯ ನಾಮಫಲಕದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಭಾವಚಿತ್ರಗಳಿಗೆ ಟೇಪ್ ಅಂಟಿಸಿ ಮುಚ್ಚಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎರಡು ದಿನಗಳ ಹಿಂದಷ್ಟೇ ಜಿಪಂ ಕೆಡಿಪಿ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಹೆಸರಿದ್ದ ಬೋರ್ಡ್ ತೆರವುಗೊಳಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಕಿಚ್ಚು ಆರುವ ಮುನ್ನವೇ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಇಂತಹದ್ದೇ ಮತ್ತೊಂದು ವಿವಾದ ತಲೆದೂರಿದೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ `3 ಕೋಟಿ ಸಿಎಸ್ಆರ್ ಅನುದಾನದಡಿ ಮಿಮ್ಸ್ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಅಳವಡಿಸಲಾಗಿದ್ದ ನಾಮಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹೆಚ್.ಡಿ. ಕುಮಾರಸ್ವಾಮಿ ಅವರ ಫೋಟೋಗಳು, ಹೆಸರು ಹಾಗೂ ಜೆಡಿಎಸ್ ಪಕ್ಷದ ಚಿಹ್ನೆ ಇತ್ತು. ಆದರೆ, ಕಾಂಗ್ರೆಸ್ ಮುಖಂಡರ ಆಕ್ಷೇಪದ ಹಿನ್ನೆಲೆ ಸಿಬ್ಬಂದಿ ಆ ಫೋಟೋಗಳು ಹಾಗೂ ಹೆಸರಿಗೆ ಟೇಪ್ ಅಂಟಿಸಿ ಮರೆಮಾಚಿದ್ದಾರೆʼ ಎಂಬ ಆರೋಪ ಕೇಳಿಬಂದಿದೆ.
ಫ್ಲೆಕ್ಸ್ನಲ್ಲಿ ಭಾವಚಿತ್ರಗಳಿಗೆ ಟೇಪ್ ಅಂಟಿಸಿರುವುದನ್ನು ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ, ಮುಖ್ಯವಾಗಿ ಜೆಡಿಎಸ್ ಬೆಂಬಲಿಗರ ಪೇಜ್ಗಳಲ್ಲಿ ಭಾರಿ ವೈರಲ್ ಆಗಿದೆ. ಸಾರ್ವಜನಿಕರು ಹಾಗೂ ಜೆಡಿಎಸ್ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಮಿಮ್ಸ್ ಆಡಳಿತ ಮಂಡಳಿ, ತಕ್ಷಣವೇ ಬೋರ್ಡ್ ಮೇಲಿದ್ದ ಟೇಪ್ಗಳನ್ನು ತೆರವುಗೊಳಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದೆ.

