ಪ್ರೀತಿಯ ಹೃದಯ ಸ್ನೇಹಿತೆ
ಇವತ್ತಿಗೆ ನಮ್ಮ ಹುಸಿ ಮುನಿಸಿಗೆ 3 ತಿಂಗಳು! ಅಂದರೆ ನಮ್ಮಿಬ್ಬರ ನಡುವೆ ಮಾತುಕತೆ ನಡೆಯದೆ ಇಂದಿಗೆ 90 ದಿನಗಳು! ಈ ಅವಧಿ ವೇದನೆಯೂ ಹೌದು.. ಮಧುರವೂ ಹೌದು! ವೇದನೆ ಹೇಗೆ ಗೊತ್ತಾ.. ಕೆಲವೊಮ್ಮೆ ನಿನ್ನ ಮಾತುಗಳ ಚಿಟಪಟ ಸದ್ದಿಲ್ಲದೆ ಒಂದೊಂದು ಕ್ಷಣವೂ ಯುಗಗಳಾಗುತ್ತವೆ. ಒಮ್ಮೊಮ್ಮೆ.. ನೀನು ಮಾತನಾಡುತ್ತಿದ್ದೀಯಾ.. ನನ್ನ ಕಿವಿಯೇ ಕೇಳುತ್ತಿಲ್ಲವೇನೋ ಎಂಬ ಭಾವ!
ಮಧುರ ಹೇಗೆ ಗೊತ್ತಾ? ಮಾತುಗಳಿಗೆ ಒಂದೇ ಅರ್ಥವಾದರೆ ಮೌನಕ್ಕೆ ಕೋಟಿ ಅರ್ಥ! ಮಾತುಗಳು ಕತೆ ಕಟ್ಟುವುದಿಲ್ಲ. ಮೌನ ಕತೆ ಕಟ್ಟುತ್ತದೆ. ಎದೆಯಿಂದ ಎದೆಗೆ ಸೇತುವೆಯಾಗಿ ನೂರಾರು ಮಾತಾಡುತ್ತದೆ. ನಾವಾಡುವ ಮಾತುಗಳಿಗೆ ಮಿತಿಯಿದೆ. ಈ ಮೌನದ ಮಾತುಗಳಿಗೆ ಯಾವ ಮಿತಿಯೂ ಇಲ್ಲ! ಇದನ್ನೂ ಓದಿ: ನಿನ್ನ ಲವ್ ಬೈಟ್ ಮುಚ್ಚಿಡೋಕೆ ಅದೆಷ್ಟು ಒದ್ದಾಡಿದೆ ಗೊತ್ತಾ?
ಒಮ್ಮೊಮ್ಮೆ ನಿನ್ನ ತುಟಿ ಮೌನವಾಗಿದ್ದರೂ, ಕಣ್ಣುಗಳು ಮಾತಾಡುತ್ತವೆ. ಎಲ್ಲ ಮೌನವಾಗಿದ್ದಾಗ ನನ್ನ ಹಿಂದೆ ಮುಂದೆ ಸುಳಿದಾಡುವ ನಿನ್ನ ಹೆಜ್ಜೆಯ ಗೆಜ್ಜೆ ಸದ್ದುಗಳು ನನ್ನ ಬಳಿ ಮಾತಿಗಿಳಿಯುತ್ತವೆ. ಒಮ್ಮೊಮ್ಮೆ ಮಾತುಕತೆ ಬೇಡ ʻಮುತ್ತಗಳು ಕತೆʼಯಾಗಲಿ ಎಂಬಂತೆ ನಿನ್ನ ತುಟಿಗಳು ಆಹ್ವಾನವಾಗಿ ಕಾಡುತ್ತವೆ!
ಇದೆಲ್ಲ ಯಾವ ಮಾತುಗಳಲ್ಲಿ ಸಾಧ್ಯವಿದೆ ಹೇಳು? ಅದಕ್ಕೆ ಈ ಮೌನವನ್ನು ನಾನು ಇತ್ತೀಚೆಗೆ ಬಹಳ ಹಚ್ಚಿಕೊಂಡಿದ್ದೇನೆ. ಅದಕ್ಕೆ ನಿನ್ನ ಕೋಪದ ಕಳಂಕವನ್ನು ತೊಳೆಯಲೂ ನನಗೆ ಸ್ವಲ್ಪವೂ ಇಷ್ಟವಿಲ್ಲ! ಯಾಕಂದ್ರೆ ಮನುಷ್ಯರಿಗೆ ವಾಸ್ತವಕ್ಕಿಂತಲೂ ನಟನೆಯೇ ಹೆಚ್ಚು ಇಷ್ಟವಾಗೋದು ಅಲ್ವಾ? ಇದು ಹಾಗೆ! ಇದನ್ನೂ ಓದಿ: ಪ್ರತಿ ಮಳೆಗೂ ನೀನಿಟ್ಟ ನೆನಪು ಅದೆಷ್ಟು ಶಾಶ್ವತ..!
ಕೋಪಿಸಿಕೊಂಡಂತೆ, ಮೌನವಿದ್ದಂತೆ, ಮನಸ್ಸಿನಲ್ಲಿ ಹುಚ್ಚು ಆಸೆಗಳನ್ನು ತುಂಬಿಕೊಂಡು ಹೆಚ್ಚೇನು ಇಲ್ಲ ಎಂಬಂತೆ ಇರುವ ನಾಟಕ..! ಈಗೀಗ ನನಗೂ ಇದು ಇಷ್ಟವಾಗುತ್ತಿದೆ.
ಮಾತುಗಳು ಆಡಲೇ ಬೇಕು ಎಂದು ಒತ್ತಾಯದಿಂದ ನೀನು ಆಡಬೇಡ, ನಾನು ಆಡುವುದಿಲ್ಲ. ಹೃದಯಗಳನ್ನು ಮಾತನಾಡಲು ಬಿಡೋಣ! ಆಗ ಬಾಯಿಗಳು ತಮ್ಮಷ್ಟಕ್ಕೆ ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಆ ಸಮಯದಲ್ಲಿ ಎದೆಗಳು ಮಾತಿಗಿಳಿಯುತ್ತವೆ. ಆ ದನಿಗಷ್ಟೇ ನಾವು ಕಿವಿಗೊಡೋಣ! ಆ ಕೋಟಿ ಮಾತುಗಳು ಉಸಿರಿರುವವರೆಗೂ ಮುಗಿಯದಿದ್ದರೂ ಅಷ್ಟೇ! ಬಾಯಿಬಿಡುವುದು ಬೇಡ! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ
ನಿನ್ನ ಮಧು ಮೌನದಲ್ಲಿ ಕಳೆದುಹೋದವನು

