– ಪಿಜಿ ವೈದ್ಯಕೀಯ ಮತ್ತು ಆಯುಷ್ ಸೀಟು ಹಂಚಿಕೆ ಫಲಿತಾಂಶ
ಬೆಂಗಳೂರು: ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ನಡೆಸುವ ಕೆಸೆಟ್ ಪರೀಕ್ಷೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ಪ್ರಾಧಿಕಾರ (KEA) ಪ್ರಕಟಿಸಿದೆ.
ಒಟ್ಟು 37 ವಿವಿಧ ವಿಷಯಗಳಿಗೆ ಅ. 11ರಂದು ಲಿಖಿತ ಪರೀಕ್ಷೆ ನಡೆಸಿತ್ತು. ಅರ್ಜಿ ಸಲ್ಲಿಸಿದ್ದ 1,29,214 ಅಭ್ಯರ್ಥಿಗಳ ಪೈಕಿ 1,17,638 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ವಿವಿಧ ವಿಷಯಗಳ ಕಟ್ – ಆಫ್ ಅಂಕಗಳ ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಪ್ರಸನ್ನ ಅವರು ಸಲಹೆ ನೀಡಿದರು.
ಪಿಜಿ ವೈದ್ಯಕೀಯ 2ನೇ ಸುತ್ತಿನ ಫಲಿತಾಂಶ ಪ್ರಕಟ
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ನ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ಪ್ರಕಟಿಸಿದೆ.
ಈ ಸುತ್ತಿನಲ್ಲಿ 3,532 ಮಂದಿಗೆ ಸೀಟು ಹಂಚಿಕೆಯಾಗಿದೆ.ಶುಲ್ಕ ಪಾವತಿಸಿದ ನಂತರ ದಾಖಲೆಗಳನ್ನು ಕೆಇಎ ಕಚೇರಿಯಲ್ಲಿ ಸಲ್ಲಿಸಿ, ನಂತರ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಿಜಿ ಆಯುಷ್ ಮೊದಲ ಸುತ್ತಿನ ಫಲಿತಾಂಶ ಪ್ರಕಟ
ಸ್ನಾತಕೋತ್ತರ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಸೀಟು ಹಂಚಿಕೆಯ ಮೊದಲ ಸುತ್ತಿನ ಅಂತಿಮ ಫಲಿತಾಂಶ ಪ್ರಕಟಿಸಿದ್ದು, ವೇಳಾಪಟ್ಟಿ ಪ್ರಕಾರ ಪ್ರವೇಶ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಸೀಟು ಹಂಚಿಕೆಯಾದವರು ನ.27ರಂದು ಬೆಳಿಗ್ಗೆ 11 ಗಂಟೆಯೊಳಗೆ ಚಾಯ್ಸ್ ಆಯ್ಕೆ ಮಾಡಿಕೊಳ್ಳಬೇಕು.
ಚಾಯ್ಸ್-1 ಮತ್ತು ಚಾಯ್ಸ್-2 ಆಯ್ಕೆ ಮಾಡಿದ ಅಭ್ಯರ್ಥಿಗಳು ನ.30ರಂದು ಮಧ್ಯಾಹ್ನ 12 ಗಂಟೆಯೊಳಗೆ ಶುಲ್ಕ ಪಾವತಿಸುವುದು. ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ಡಿ.2ರೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂದು ಅವರು ವಿವರಿಸಿದ್ದಾರೆ.
ಕೆಇಎ ನೇಮಕಾತಿ ನ. 27ರಿಂದ. 30ರವರೆಗೆ ಲಿಖಿತ ಪರೀಕ್ಷೆ
ರಾಜ್ಯದ ವಸತಿ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಉಳಿಕೆ ಮೂಲ ವೃಂದದ ವಿವಿಧ ವಿಷಯಗಳ ಲಿಖಿತ ಪರೀಕ್ಷೆಗಳು ನ.27ರಿಂದ 30ರವರೆಗೆ ನಡೆಯುತ್ತಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ನ.27ರಂದು ಬೆಂಗಳೂರು, ಕಲ್ಬುರ್ಗಿ ಹಾಗೂ ಮೈಸೂರು ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಶಿಕ್ಷಕರ 57 ಹುದ್ದೆಗಳಿಗೆ ಒಟ್ಟು 27,933 ಮಂದಿ ಅರ್ಜಿ ಸಲ್ಲಿಸಿದ್ದು ನಾಳೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಪರೀಕ್ಷೆ ನಡೆಯಲಿದೆ. ಹಾಗೆಯೇ ಗಣಿತ ಶಿಕ್ಷಕರ 103 ಹುದ್ದೆಗೆ 18,891 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹಿಂದಿ ಶಿಕ್ಷಕರ 55 ಹುದ್ದೆಗಳಿಗೆ 1,479 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ವಿಷಯಗಳಿಗೆ ಮಧ್ಯಾಹ್ನ 2.30ರಿಂದ 4.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ವಿವರಿಸಿದ್ದಾರೆ.
ನ.28ರಂದು ಕಲ್ಯಾಣ ಕರ್ನಾಟಕ ವೃಂದದ ಕಾರಾಗೃಹ ಇಲಾಖೆಗಳ ಐದು ಜೈಲರ್ ಹಾಗೂ 275 ವಾರ್ಡರ್ ಹುದ್ದೆಗಳಿಗೆ ಬಳ್ಳಾರಿ, ದಾವಣಗೆರೆ ಮತ್ತು ಕಲ್ಬುರ್ಗಿ ನಗರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರು, ಮೈಸೂರು ಮತ್ತು ಕಲ್ಬುರ್ಗಿ ಯಲ್ಲಿ 108 ಇಂಗ್ಲಿಷ್ ಶಿಕ್ಷಕರು ಹಾಗೂ 81 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿಗೆ ನ. 29ರಂದು ಲಿಖಿತ ಪರೀಕ್ಷೆ ನಡೆಯಲಿದೆ. ನ.30ರಂದು ಸಮಾಜ ವಿಜ್ಞಾನ ಶಿಕ್ಷಕರ 154 ಹುದ್ದೆಗಳಿಗೆ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.
ಕ್ಯೂ ಆರ್ ಕೋಡ್ ಮೂಲಕ ಅಭ್ಯರ್ಥಿಗಳ ನೈಜತೆ ಪರಿಶೀಲನೆ
ನವೆಂಬರ್ 27ರಿಂದ 30ರವರೆಗೆ ನಡೆಯುವ ಎಲ್ಲಾ ಪರೀಕ್ಷೆಗಳಲ್ಲೂ ಅಭ್ಯರ್ಥಿಗಳನ್ನು ಪರೀಕ್ಷಾ ಮೇಲ್ವಿಚಾರಕರೇ ಕ್ಯೂ ಆರ್ ಕೋಡ್ ಮೂಲಕ ತಪಾಸಣೆ ನಡೆಸಿ,ನೈಜತೆಯನ್ನು ಖಾತರಿಪಡಿಸಿಕೊಳ್ಳುವ ಹೊಸ ಸುಧಾರಣೆ ಕ್ರಮಗಳನ್ನು ಕೆಇಎ ಜಾರಿ ತರಲು ಮುಂದಾಗಿದೆ. ಈ ಸಂಬಂಧ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದುವರೆಗೂ ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳೇ ಅಭ್ಯರ್ಥಿಗಳನ್ನು ಪರಿಶೀಲಿಸಿ ನಂತರ ಒಳಗೆ ಬಿಡುತ್ತಿದ್ದರು. ಇದರಿಂದ ಸ್ವಲ್ಪ ತಡ ಕೂಡ ಆಗುತ್ತಿತ್ತು. ಹೀಗಾಗಿ ಕೆಇಎ ಸಿದ್ಧಪಡಿಸಿರುವ ಕ್ಯೂ ಆರ್ ಕೋಡ್ ಮೂಲಕ ಶಿಕ್ಷಕರೇ ಅಭ್ಯರ್ಥಿಗಳ ಭಾವಚಿತ್ರ ತೆಗೆದು, ನೈಜತೆ ಪರಿಶೀಲಿಸಲಿದ್ದಾರೆ. ಇತ್ತೀಚೆಗೆ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಿದ್ದು,ಅವರಲ್ಲಿ ಒಬ್ಬರು ಮೊದಲ ಬೆಲ್ ಆಗುವವರಿಗೆ ಅಭ್ಯರ್ಥಿಗಳ ನೈಜತೆ ನೋಡಲಿದ್ದಾರೆ.
ಇದೊಂದು ಪ್ರಾಯೋಗಿಕ ಕ್ರಮವಾಗಿದ್ದು, ಅದರ ಕಾರ್ಯಕ್ಷಮತೆ ನೋಡಿಕೊಂಡು ಇತರ ಪರೀಕ್ಷೆಗಳಿಗೂ ವಿಸ್ತರಿಸಲಾಗುವುದು ಅಂತ ಪ್ರಸನ್ನ ತಿಳಿಸಿದ್ದಾರೆ.
