– ಮಹಿಳೆ ಮೇಲೆ ಹಲ್ಲೆ ವಿಡಿಯೋ ವೈರಲ್
ಲಕ್ನೋ: ಉತ್ತರ ಪ್ರದೇಶದ (Uttar Pradesh) ಮಿರತ್ನ ಹೋಟೆಲ್ ಒಂದರಲ್ಲಿ ದಲಿತ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಎನ್ಕೌಂಟರ್ (Encounter) ನಡೆಸಿ ಬಂಧಿಸಿದ್ದಾರೆ.
ಸಲ್ಮಾನ್ ಬಂಧಿತ ಆರೋಪಿ. ಈತ ಹೋಟೆಲ್ ಒಂದರಲ್ಲಿ ಮಹಿಳೆಯನ್ನು ಅಕ್ರಮವಾಗಿ ಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾಗ ಆಕೆಯನ್ನು ಬೆನ್ನಟ್ಟಿ, ಹೋಟೆಲ್ ಎದುರಿನಲ್ಲೇ ಹಿಡಿದು ಹಲ್ಲೆ ನಡೆಸಿದ್ದ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಪುಣೆ ಕೋರ್ಟ್ ಹೊರಗೆ ಕೊಲೆ ಆರೋಪಿಗೆ ಮಚ್ಚು, ಗುಂಡೇಟು – ಕೈ ಕಟ್
ಈ ಬಗ್ಗೆ ಮಾಹಿತಿ ನೀಡಿರುವ ಮೀರತ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಬಿಬಿಜಿಟಿಎಸ್ ಮೂರ್ತಿ, ದಲಿತ ಮಹಿಳೆಯನ್ನು ಸಲ್ಮಾನ್ ಎಂಬ ವ್ಯಕ್ತಿ ಬಂಧಿಸಿ ಹಲ್ಲೆ ನಡೆಸಿದ್ದ. ಈ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಗೆ ಲಿಖಿತ ದೂರು ಬಂದಿತ್ತು. ಆತ ಲೋಹಿಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನರ್ಹೇಡಾ ಗ್ರಾಮದ ನಿರ್ಮಾಣ ಹಂತದ ಅಂಡರ್ಪಾಸ್ ಬಳಿ ಅಡಗಿಕೊಂಡಿದ್ದಾನೆ ಎಂಬ ನಿರ್ದಿಷ್ಟ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ತೆರಳಿದ್ದರು.
ಈ ವೇಳೆ ಸಲ್ಮಾನ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸೇತುವೆ ಮೇಲೆ ಹತ್ತಿ ಜಾರಿ ಬಿದ್ದಿದ್ದಾನೆ. ಇದರಿಂದ ಆತನ ಕಾಲು ಮತ್ತು ಕೈಗೆ ಗಾಯಗಳಾಗಿವೆ. ಆತನನ್ನು ಚಿಕಿತ್ಸೆಗಾಗಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿ ಹೋಟೆಲ್ನಲ್ಲಿ ಯಾವುದೇ ಗುರುತಿನ ಚೀಟಿಯನ್ನು ನೀಡದೆ ಕೊಠಡಿ ಕಾಯ್ದಿರಿಸಿದ್ದ. ಆ ರೂಮ್ನಲ್ಲಿ ಮಹಿಳೆಯನ್ನು ಕೂಡಿಹಾಕಿದ್ದ. ಆಕೆ ನವೆಂಬರ್ 23 ರಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಬೆನ್ನಟ್ಟಿ, ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿ, ಬಲವಂತವಾಗಿ ಹಿಂದಕ್ಕೆ ಕರೆದೊಯ್ದಿದ್ದ. ಈ ವಿಡಿಯೋ ವೈರಲ್ ಆಗಿತ್ತು.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹೋಟೆಲ್ ಸೀಜ್ ಮಾಡಿ, ವ್ಯವಸ್ಥಾಪಕ ಮತ್ತು ಆರೋಪಿಯ ಕುಟುಂಬದ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಮಹಿಳೆಗೆ ಮದುವೆಯಾಗುವಂತೆ ಆರೋಪಿ ಒತ್ತಡ ಹೇರುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಉಗ್ರರಿಂದ ಕಾಶ್ಮೀರದಲ್ಲಿ ಆಸ್ತಿ ಮಾರಾಟಕ್ಕೆ ಯತ್ನ – ಪೊಲೀಸರರಿಂದ ಜಾಗ ಮುಟ್ಟುಗೋಲು
