ನವದೆಹಲಿ: ಹಾಸನ ಸೈಬರ್ ಕ್ರೈಂ ಪೊಲೀಸರು(Hassana Cybercrime) ತಮಗೆ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನದು ಆರೋಪವಲ್ಲ, ತನಿಖೆ ಮಾಡಿ ಎಂದಷ್ಟೇ ಹೇಳಿದ್ದೆ. ನನಗೆ ನೋಟಿಸ್ ಕೊಡಲು ಮತ್ತು ನನ್ನನ್ನು ವಿಚಾರಣೆ ಮಾಡಲು ಅವರ್ಯಾರು?” ಎಂದು ಪ್ರಶ್ನಿಸಿದ್ದಾರೆ.
10 ರೂಪಾಯಿ ಲಂಚ ಕೇಳಿದರೂ ನನ್ನ ಗಮನಕ್ಕೆ ತನ್ನಿ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ನನಗೆ ಬಂದ ಚಾಟ್ ಮಾಹಿತಿಯನ್ನು ನೀಡಿ ತನಿಖೆ ಮಾಡಿ ಎಂದು ಕೇಳಿದ್ದೆ. ಆದರೆ, ನಾನು ಹೇಳಿದ ದಿನವೇ ಸಿಎಂ ಹಾಸನ ಜಿಲ್ಲಾಧಿಕಾರಿಗಳಿಗೆ ಕ್ಲೀನ್ಚಿಟ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ ಕ್ಲೀನ್ಚಿಟ್ ಕೊಟ್ಟ ಮೇಲೆ ನನ್ನಿಂದ ಇನ್ನೇನು ಮಾಹಿತಿ ಪಡೆಯುತ್ತಾರೆ* ಎಂದು ಕುಮಾರಸ್ವಾಮಿ ಕಿಡಿಕಾರಿದರು. ಇದನ್ನೂ ಓದಿ: ಮನೆ ಬಾಗಿಲಿಗೆ ಬಂದ ಸೈಬರ್ ಪೊಲೀಸರು – ನೋಟಿಸ್ ಪಡೆಯದೇ ವಾಪಸ್ ಕಳುಹಿಸಿ ಹೆಚ್ಡಿಕೆ ಕ್ಲಾಸ್
ಚಾಟ್ ಮಾಡಿದ್ದ ನಂಬರ್ ಮತ್ತು ಅಲ್ಲಿ ಕೆಲಸ ಮಾಡಿದ ಡಿಸಿ ಪಿಎ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸಿದರೆ ಎಲ್ಲಾ ಸತ್ಯಾಸತ್ಯತೆ ಹೊರಬರುತ್ತದೆ. ಅಷ್ಟು ಪರಿಜ್ಞಾನ ಅಧಿಕಾರಿಗಳಿಗೆ ಬೇಡವೇ? ನನಗೆ ಯಾರೋ ಮುಸುಕುಧಾರಿ ಬಂದು ದಾಖಲೆ ಕೊಟ್ಟು ಹೋಗಿದ್ದರು. ಲಕ್ಷಾಂತರ ಜನ ಬಂದು ಹೋಗುತ್ತಾರೆ, ಅವರನ್ನು ಹಿಡಿದುಕೊಳ್ಳಲು ಆಗುತ್ತದೆಯೇ? ಈ ಬಗ್ಗೆ ತನಿಖೆ ಮಾಡಿ ಎಂದಿದ್ದಕ್ಕೆ ನನಗೇ ನೋಟಿಸ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಕುರಿತು ಮಾತನಾಡಿದ ಅವರು, ನವೆಂಬರ್ 26ರಂದು ಈ ಬಗ್ಗೆ ಸಭೆ ನಡೆಯಲಿದ್ದು, ಸಭೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಗ್ರೌಂಡ್ ರಿಪೋರ್ಟ್ ನೋಡಿಕೊಂಡು ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಒಟ್ಟಿನಲ್ಲಿ ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು.
