– ಹಾಸನ ಡಿಸಿ ವಿರುದ್ಧ ಭ್ರಷ್ಟಾಚಾರದ ಆರೋಪ
– ವಾಟ್ಸಪ್ ಚಾಟ್ ಬಹಿರಂಗ ಪಡಿಸಿದ್ದ ಹೆಚ್ಡಿಕೆ
ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ(Latha Kumari) ವಿರುದ್ಧ ಭ್ರಷ್ಟಾಚಾರದ(Corruption) ಗಂಭೀರ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರಿಗೆ ಪೊಲೀಸ್ ನೋಟಿಸ್ ನೀಡುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಜಿಲ್ಲಾಧಿಕಾರಿಗಳು ನೀಡಿದ ದೂರಿನ ಅನ್ವಯ ಕುಮಾರಸ್ವಾಮಿ ಅವರ ನಿವಾಸಕ್ಕೆ ನೋಟಿಸ್ ಹಿಡಿದು ಬಂದಿದ್ದ ಹಾಸನ ಸೈಬರ್ ಕ್ರೈಮ್ ಪೊಲೀಸರಿಗೆ(Cyber Crime Police) ಎಚ್ಡಿಕೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನೋಟಿಸ್ ಸ್ವೀಕರಿಸದೇ ವಾಪಸ್ ಕಳಿಸಿದ್ದಾರೆ.
ಲತಾಕುಮಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಸೂಚಿಸಿ ಸೈಬರ್ ಕಮಾಂಡ್ ಸೆಂಟರ್ನಿಂದ ನೋಟಿಸ್ ಸಿದ್ಧಪಡಿಸಲಾಗಿತ್ತು. ಈ ನೋಟಿಸ್ ತಲುಪಿಸಲು ಹಾಸನ ಸೈಬರ್ ಪೊಲೀಸರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ, ನೋಟಿಸ್ ಪಡೆಯಲು ನಿರಾಕರಿಸಿದ ಕುಮಾರಸ್ವಾಮಿ ಪೊಲೀಸರನ್ನು ವಾಪಸ್ ಕಳಿಸಿದ್ದಾರೆ.
ಈ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಾನು ವಿರೋಧ ಪಕ್ಷದ ನಾಯಕನಾಗಿ ಏನು ಮಾತನಾಡಬೇಕೋ ಅದನ್ನು ಮಾತನಾಡಿದ್ದೇನೆ. ಸಾರ್ವಜನಿಕವಾಗಿ ಈ ರೀತಿ ಆರೋಪ ಮಾಡಿದವರಿಗೆಲ್ಲಾ ಇದೇ ರೀತಿ ದೂರು ಪಡೆದು ಕ್ರಮ ತೆಗೆದುಕೊಂಡಿದ್ದೀರಾ?” ಎಂದು ಪ್ರಶ್ನಿಸಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಘಟನೆ ನಡೆದ ತಕ್ಷಣವೇ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಲೀಂ ಅವರಿಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ.
ನೋಟಿಸ್ ವಿಚಾರವಾಗಿ ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಹೆಚ್ಡಿಕೆ ದೆಹಲಿಗೆ ತೆರಳಿದ್ದು ಅಲ್ಲಿ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದೆ.
ಹೆಚ್ಡಿಕೆ ಆರೋಪ ಏನಿತ್ತು?
ಇತ್ತೀಚೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಲಂಚ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿ, ಕೆಲವು ವಾಟ್ಸಪ್ ಚಾಟ್ ಸ್ಕ್ರೀನ್ಶಾಟ್ಗಳನ್ನು ಬಿಡುಗಡೆ ಮಾಡಿದ್ದರು.
ಮೂರು ಕಲ್ಲಿನ ಕ್ರಷರ್ ಪರವಾನಗಿ ಹಾಗೂ ಸಕಲೇಶಪುರ ಭಾಗದ ಭೂ ಅನ್ಯಕ್ರಾಂತ (ಕನ್ವರ್ಷನ್) ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಎಚ್ಡಿಕೆ ಆರೋಪಿಸಿದ್ದರು. ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ (ಪಿಎ) ಶಶಿಕಿರಣ್ ಎಂಬುವವರ ವಾಟ್ಸಾಪ್ ಚಾಟ್ಗಳನ್ನು ಉಲ್ಲೇಖಿಸಿ ದಾಖಲೆಗಳನ್ನು ಮುಂದಿಟ್ಟಿದ್ದರು.
ಲತಾಕುಮಾರಿ ಅವರು ಹಾಸನದಲ್ಲೇ ಜಿಲ್ಲಾಧಿಕಾರಿಯಾಗಿ ಮುಂದುವರಿಯಲು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೆ 75 ಲಕ್ಷ ರೂ. ಲಂಚ ನೀಡಲಾಗಿದೆ ಎಂಬ ಮತ್ತೊಂದು ಗಂಭೀರ ಆರೋಪವನ್ನೂ ವಾಟ್ಸಾಪ್ ಚಾಟ್ಗಳ ಮೂಲಕ ಕುಮಾರಸ್ವಾಮಿ ಮಾಡಿದ್ದರು. ಈ ಆರೋಪಗಳ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.
