ನವದೆಹಲಿ: 2027ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (SAD) ಒಟ್ಟಾಗಿ ಸ್ಪರ್ಧಿಸಲಿವೆ. ಈ ಮೈತ್ರಿಯಲ್ಲಿ ಅಕಾಲಿ ದಳವು ‘ದೊಡ್ಡಣ್ಣ’ನ ಪಾತ್ರ ನಿರ್ವಹಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದರು.
Live from press conference in BJP headquarters, New Delhi.
https://t.co/yGrNF3s5Ze— Amit Shah (@AmitShah) November 24, 2026
ನವದೆಹಲಿಯ ಬಿಜೆಪಿ (BJP) ಕೇಂದ್ರ ಕಚೇರಿಯಲ್ಲಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ (Sukhbir Singh Badal) ಸೇರಿದಂತೆ ಉಭಯ ಪಕ್ಷಗಳ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ, ಮುಂಬರುವ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಹೇಳಿದರು.
ಮೈತ್ರಿಯಲ್ಲಿ ಅಖಾಲಿ ದಳವು ದೊಡ್ಡಣ್ಣನ ಪಾತ್ರ ನಿರ್ವಹಿಸಲಿದೆ. ಅಕಾಲಿ ದಳ (Akali Dal) ಮತ್ತು ಬಿಜೆಪಿ ಪಂಜಾಬ್ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲೂ ಒಟ್ಟಾಗಿ ಸ್ಪರ್ಧಿಸಲಿವೆ. ಎರಡೂ ಪಕ್ಷಗಳು ಜಂಟಿಯಾಗಿ ಚುನಾವಣೆ ಎದುರಿಸಲಿವೆ. ಈ ಮೈತ್ರಿಯಲ್ಲಿ ಅಕಾಲಿ ದಳ ದೊಡ್ಡಣ್ಣನ ಸ್ಥಾನದಲ್ಲಿರಲಿದೆ ಎಂದರು.
ಮುಖ್ಯಮಂತ್ರಿ ಸ್ಥಾನ ಅಖಾಲಿ ದಳಕ್ಕೆ
ಇದೇ ವೇಳೆ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಪಂಜಾಬ್ನ ಮುಂದಿನ ಮುಖ್ಯಮಂತ್ರಿ ಅಕಾಲಿ ದಳದಿಂದಲೇ ಇರಲಿದ್ದಾರೆ ಎಂಬ ಸುಳಿವು ನೀಡಿದರು. ಮೈತ್ರಿಯಲ್ಲಿ ದೊಡ್ಡಣ್ಣನ ಪಾತ್ರ ವಹಿಸುವ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಯಾರು ದೊಡ್ಡಣ್ಣನಾಗಿರುತ್ತಾರೋ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾ ಸ್ಪಷ್ಟಪಡಿಸಿದರು.
ʻಡ್ರಗ್ಸ್ ಮುಕ್ತ ಪಂಜಾಬ್, ಕಾನೂನು ಸುವ್ಯವಸ್ಥೆಗೆ ಆದ್ಯತೆʼ
ಮೈತ್ರಿ ಪಕ್ಷಗಳು ಪಂಜಾಬ್ಗೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಿದ್ದು, ಕೆಲವು ಆದ್ಯತೆಗಳ ಬಗ್ಗೆ ಒಮ್ಮತಕ್ಕೆ ಬಂದಿವೆ. ಪಂಜಾಬ್ ಅನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸುವುದು, ಕಾನೂನು ಸುವ್ಯವಸ್ಥೆ ಸುಧಾರಿಸುವುದು, ಗಡಿರಾಜ್ಯದ ಭದ್ರತೆಯನ್ನ ಬಲಪಡಿಸುವುದು ಹಾಗೂ ಅಪರಾಧಿ ಗ್ಯಾಂಗ್ಗಳ ಚಟುವಟಿಕೆಗಳನ್ನ ಸಂಪೂರ್ಣವಾಗಿ ನಿಯಂತ್ರಿಸುವುದು ಮೈತ್ರಿಕೂಟದ ಪ್ರಮುಖ ಉದ್ದೇಶಗಳಾಗಿವೆ ಎಂದು ಅಮಿತ್ ಶಾ ತಿಳಿಸಿದರು.
ಎನ್ಡಿಎ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದು ಬಿಜೆಪಿ ಮತ್ತು ಎನ್ಡಿಎಯ ಪ್ರಮುಖ ಹೆಗ್ಗುರುತಾಗಿದೆ. ಪಂಜಾಬ್ಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ನಮ್ಮ ಎರಡೂ ಪಕ್ಷಗಳು ಚರ್ಚಿಸಿದ್ದು, ಅವುಗಳ ಬಗ್ಗೆ ಒಮ್ಮತಕ್ಕೆ ಬಂದಿದ್ದೇವೆ. ಡ್ರಗ್ಸ್ ಮುಕ್ತ ಪಂಜಾಬ್ ನಿರ್ಮಾಣ ಮಾಡುವುದು, ಗಡಿರಾಜ್ಯದಲ್ಲಿ ಭದ್ರತೆ ಖಚಿತಪಡಿಸಲು ಕಾನೂನು ಸುವ್ಯವಸ್ಥೆ ಸುಧಾರಣೆ ಹಾಗೂ ಅಪರಾಧಿ ಗ್ಯಾಂಗ್ಗಳನ್ನ ನಿರ್ಮೂಲನೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿರಲಿದೆ. ಎರಡೂ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಚಾರಗಳಿಗೆ ಪ್ರಮುಖ ಸ್ಥಾನ ನೀಡಲಾಗುವುದು ಎಂದು ಅಮಿತ್ ಶಾ ಹೇಳಿದರು.
2027ರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಅಕಾಲಿ ದಳ ತಮ್ಮ ಹಳೆಯ ಮೈತ್ರಿಗೆ ಮತ್ತೆ ಕೈಜೋಡಿಸಿವೆ. 6 ವರ್ಷಗಳ ಅಂತರದ ಬಳಿಕ ಎರಡೂ ಪಕ್ಷಗಳು ಮತ್ತೆ ಒಂದಾಗಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಮತ್ತು ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಯಿತು.
2020ರಲ್ಲಿ ಮುರಿದುಬಿದ್ದಿದ್ದ ಮೈತ್ರಿ
2020ರ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 3 ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದ್ದ ಸಂದರ್ಭದಲ್ಲಿ ಬಿಜೆಪಿ ಮತ್ತು ಅಕಾಲಿ ದಳದ ಮೈತ್ರಿ ಮುರಿದುಬಿದ್ದಿತ್ತು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಕಾಲಿ ದಳ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಆಗ ಕೇಂದ್ರ ಸಚಿವರಾಗಿದ್ದ ಅಕಾಲಿ ದಳದ ಹಿರಿಯ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ನಂತರ ರೈತರ ಸುದೀರ್ಘ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು.

