– ಮೋದಿ ಮನವಿಯಿಂದಲೇ ಆಮದು ಇಳಿಕೆ
– ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಹೇಳಿಕೆ
ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ಭಾರತದ(India) ಚಿನ್ನ ಆಮದು(Gold Import) ಸುಮಾರು ಶೇ. 40 ರಷ್ಟು ಕಡಿಮೆಯಾಗಿದೆ.
ಈ ಏಳು ತಿಂಗಳ ಅವಧಿಯಲ್ಲಿ ದೇಶವು 24.7 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (CTI) ಅಧ್ಯಕ್ಷ ಬ್ರಿಜೇಶ್ ಗೋಯಲ್ ಸೋಮವಾರ ತಿಳಿಸಿದ್ದಾರೆ.
ಗೋಯಲ್ ಅವರ ಮಾಹಿತಿಯಂತೆ, 2025ರ ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ಭಾರತವು 41.24 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಆದರೆ ಈ ವರ್ಷ ಅದೇ ಅವಧಿಯಲ್ಲಿ 24.7 ಬಿಲಿಯನ್ ಡಾಲರ್ಗೆ ಇಳಿಕೆಯಾಗಿದ್ದು, ಸುಮಾರು 16.46 ಬಿಲಿಯನ್ ಡಾಲರ್ನಷ್ಟು ಕಡಿಮೆಯಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಚಿನ್ನದ ಖರೀದಿಯಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ಈ ಅಂಕಿಅಂಶಗಳು ತೋರಿಸುತ್ತವೆ ಎಂದು ಅವರು ಹೇಳಿದ್ದಾರೆ.
2025-26ರ ಹಣಕಾಸು ವರ್ಷದಲ್ಲಿ ಭಾರತ 72 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿತ್ತು. ಆದರೆ 2026-27ನೇ ಸಾಲಿನಲ್ಲಿ ಇದು 35 ರಿಂದ 40 ಬಿಲಿಯನ್ ಡಾಲರ್ಗೆ ಇಳಿಯುವ ಅಂದಾಜಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಚಿನ್ನದ ಬೆಲೆ ಕುಸಿದ ಬೆನ್ನಲ್ಲೇ ಗೋಲ್ಡ್ ಲೋನ್ ಪಡೆದವರಿಗೆ ಮಾರ್ಜಿನ್ ಕಾಲ್ ಆತಂಕ! – ಅಡವಿಟ್ಟ ಚಿನ್ನ ಹರಾಜು ಭೀತಿ!
ಚಿನ್ನದ ಖರೀದಿ ಕಡಿಮೆಯಾಗಲು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮನವಿಯೇ ಪ್ರಮುಖ ಕಾರಣ ಎಂದು ಗೋಯಲ್ ಹೇಳಿದ್ದಾರೆ. ಅಲ್ಲದೆ, ಚಿನ್ನದ ಬೆಲೆ ಇಳಿಕೆಯಾಗಿರುವುದು ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ದೊಡ್ಡ ಮಟ್ಟದ ನಿರಾಳತೆ ನೀಡಿದೆ ಎಂದರು.
ಪ್ರಧಾನಿ ಮನವಿ ಮಾಡಿದ ಸಮಯದಲ್ಲಿ ಪ್ರತಿ ಕೆ.ಜಿ. ಚಿನ್ನದ ಬೆಲೆ ಸುಮಾರು 1.90 ಕೋಟಿ ರೂ. ಇತ್ತು. ಈಗ ಅದು ಸುಮಾರು 1.25 ಕೋಟಿ ರೂ.ಗೆ ಇಳಿದಿದೆ. ಅಂದರೆ ಪ್ರತಿ ಕೆ.ಜಿ.ಗೆ ಸುಮಾರು 65 ಲಕ್ಷ ರೂ. ಕಡಿಮೆಯಾಗಿದೆ ಎಂದು ಗೋಯಲ್ ವಿವರಿಸಿದರು. ದರ ಇಳಿಕೆಯಿಂದ ಹಬ್ಬ ಮತ್ತು ಮದುವೆ ಸೀಸನ್ನಲ್ಲಿ ಆಭರಣ ವ್ಯಾಪಾರಿಗಳಿಗೆ ದಾಸ್ತಾನು ನಿರ್ವಹಿಸಲು ಸುಲಭವಾಗಿದೆ ಮತ್ತು ಗ್ರಾಹಕರಿಗೂ ಕಡಿಮೆ ಬೆಲೆಗೆ ಚಿನ್ನ ಸಿಗುವಂತಾಗಿದೆ ಎಂದರು.
ಈ ವರ್ಷ ದೇಶಾದ್ಯಂತ ಸುಮಾರು 52 ಲಕ್ಷ ಮದುವೆಗಳು ನಡೆಯಲಿದ್ದು, ಇದರಿಂದ ಸುಮಾರು 6 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯುವ ನಿರೀಕ್ಷೆಯಿದೆ. ಇದರಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳ ಪಾಲು ಶೇ. 8 ರಿಂದ 10 ರಷ್ಟಿರಲಿದೆ. ಚಿನ್ನದ ಬೆಲೆ ಕಡಿಮೆಯಾಗಿರುವುದರಿಂದ ಮದುವೆ ಸಮಯದಲ್ಲಿ ಕುಟುಂಬಗಳಿಗೆ ಆಭರಣ ಖರೀದಿಯ ವೆಚ್ಚವೂ ತಗ್ಗಲಿದೆ ಎಂದು ಬ್ರಿಜೇಶ್ ಗೋಯಲ್ ಹೇಳಿದ್ದಾರೆ.
