ಬೆಂಗಳೂರು: ನಗರದ (Bengaluru) ವಾಣಿವಿಲಾಸ ಆಸ್ಪತ್ರೆಯಲ್ಲಿ (Vani Vilas Hospital) 8 ತಿಂಗಳ ಗರ್ಭಿಣಿ ಹೊಟ್ಟೆಯಲ್ಲಿದ್ದ ಮೂರು ಶಿಶುಗಳಲ್ಲಿ ಎರಡು ಸಾವನ್ನಪ್ಪಿದ್ದು, ಮತ್ತೊಂದು ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಒಂದು ವಾರದ ಹಿಂದೆ ಮಲಬದ್ದತೆ ಕಾರಣದಿಂದ ಗರ್ಭಿಣಿ ಐಶ್ವರ್ಯ. ಆಸ್ಪತ್ರೆಗೆ ದಾಖಲಾಗಿದ್ದಳು. ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿ ಕಳುಹಿಸಿದ್ದರು. ಆದರೆ ನೋವು ಕಡಿಮೆಯಾಗದೆ ಮತ್ತೆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ಬಳಿಕ ಚಿಕಿತ್ಸೆ ನೀಡಿದಾಗ ನಿನ್ನೆ (ನ.21) ಬೆಳಗ್ಗೆ ಮೂರು ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿತ್ತು. ಇಂದು (ನ.22) ಮತ್ತೊಂದು ಮಗು ಸಹ ಸಾವನ್ನಪ್ಪಿದ್ದು, ಇನ್ನೊಂದು ಮಗು ಕೂಡ ಸಾವು ಬದುಕಿನ ನಡುವೆ ಹೋರಾಡುತ್ತಿದೆ.
ಮೊದಲು ಒಂದು ಮಗು ಸಾವನ್ನಪ್ಪಿದ್ದರೂ ಉಳಿದ ಶಿಶುಗಳನ್ನು ವೈದ್ಯರು ಬಚಾವ್ ಮಾಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ಅಪರೇಷನ್ ಮಾಡೋದಾಗಿ ಹೇಳಿ ಮಹಿಳೆಯನ್ನು ಉಪವಾಸ ಇರಿಸಿದ್ದರು. ರಾತ್ರಿ ಅಪರೇಷನ್ ಆಗಲ್ಲ ಅಂತ ಮುಂದೂಡಿದ್ದರು ಎಂದು ಆರೋಪಿಸಲಾಗಿದೆ. ಇಂದು ಬೆಳಗ್ಗೆ ವೈದ್ಯರು ಸರ್ಜರಿ ಮಾಡಿದ್ದರು.
ಬಳಿಕವೂ ಬೆಡ್ ಕೊಡದ ಹಿನ್ನಲೆ ಲೇಬರ್ ರೂಮ್ನಲ್ಲಿ ನೆಲದ ಮೇಲೆ ಮಹಿಳೆ ಮಲಗಿದ್ದಳು. ಬೆಡ್ ಸಿಗದೇ ಗರ್ಭಿಣಿ ಮಹಿಳೆ ನೋವಿನಲ್ಲಿ ಪರದಾಡಿದ್ದಳು. ಇನ್ನೂ ಮೂರನೇ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಟುಂಬಸ್ಥರು ಎರಡು ಮಗುವಿನ ಸಮಾಧಿ ಮಾಡಿ ಬಂದಿದ್ದರು. ಉಳಿದಿರುವ ಮತ್ತೊಂದು ಮಗುವಿನ ಆರೋಗ್ಯದ ಬಗ್ಗೆಯೂ ಕುಟುಂಬಸ್ಥರು ಚಿಂತಾಕ್ರಾಂತರಾಗಿದ್ದಾರೆ.
