ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss 11) ಜೋಡಿ ಐಶ್ವರ್ಯಾ ಸಿಂಧೋಗಿ (Aishwarya Sindhogi) ಹಾಗೂ ಶಿಶಿರ್ ಶಾಸ್ತ್ರಿ (Shishir Shastry) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಗುರುಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಈ ಜೋಡಿಗೆ ‘ಐಶಿರ್’ ಎಂದು ಹೆಸರಿಟ್ಟಿದ್ದು, ಅದನ್ನೇ ತಮ್ಮ ನಿಶ್ಚಿತಾರ್ಥದ ಕಾರ್ಯಕ್ರಮದ ಹೆಸರಾಗಿಯೂ ಇಟ್ಟುಕೊಂಡಿದ್ದಾರೆ. ಈ ನಿಶ್ಚಿತಾರ್ಥದ ಮತ್ತೊಂದು ವಿಶೇಷವೆಂದರೆ, ಇಬ್ಬರೂ ಅಪ್ಪಟ ಶಿವಭಕ್ತರಾಗಿರುವ ಕಾರಣ ಇಡೀ ಕಾರ್ಯಕ್ರಮವನ್ನು ಶಿವನ ಥೀಮ್ನಲ್ಲಿ ಆಯೋಜಿಸಲಾಗಿತ್ತು.
ನಿಶ್ಚಿತಾರ್ಥದ ಸೆಟ್ನಲ್ಲೆಲ್ಲಾ ಶಿವನ ಥೀಮ್
ಶಿವನ ಆರಾಧಕರಾಗಿರುವ ಐಶ್ವರ್ಯಾ ಮತ್ತು ಶಿಶಿರ್ ತಮ್ಮ ನಿಶ್ಚಿತಾರ್ಥದ ವೇದಿಕೆಯನ್ನು ಸಂಪೂರ್ಣವಾಗಿ ಶಿವನ ಥೀಮ್ನಲ್ಲಿ ವಿನ್ಯಾಸಗೊಳಿಸಿದ್ದರು. ಅಷ್ಟೇ ಅಲ್ಲದೆ, ತಾವು ಧರಿಸಿದ್ದ ಉಡುಪುಗಳಲ್ಲಿಯೂ ಶಿವನ ಸ್ವರೂಪವನ್ನು ಬಿಂಬಿಸುವಂತೆ ವಿಶೇಷ ವಿನ್ಯಾಸ ಮಾಡಿಸಿಕೊಂಡಿದ್ದರು. ವಿಶೇಷವಾಗಿ ಐಶ್ವರ್ಯಾ ಧರಿಸಿದ್ದ ತಿಳಿನೀಲಿ ಬಣ್ಣದ ಸೀರೆಯ ಮೇಲಿದ್ದ ಶಿವನ ವಿನ್ಯಾಸ ಎಲ್ಲರ ಗಮನ ಸೆಳೆದಿದೆ.
ಹಲವು ವರ್ಷಗಳ ಸ್ನೇಹಕ್ಕೆ ಪ್ರೀತಿಯ ಮುದ್ರೆ
ಐಶ್ವರ್ಯಾ ಹಾಗೂ ಶಿಶಿರ್ ಅವರ ಪರಿಚಯ ಹಲವು ವರ್ಷಗಳ ಹಿಂದಿನದ್ದು. ತಮ್ಮ ಸಂಬಂಧದಲ್ಲಿ ಸ್ನೇಹ ಮತ್ತು ಪರಸ್ಪರ ಅರಿವಿಗೆ ಹೆಚ್ಚಿನ ಮಹತ್ವ ನೀಡಿದ್ದೇವೆ ಎಂದು ಈ ಜೋಡಿ ಹೇಳಿಕೊಂಡಿದೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಹಾಗೂ ಕಾರ್ಯಕ್ರಮದ ಬಳಿಕವೂ ಇವರಿಬ್ಬರ ಸ್ನೇಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ಗಳು ಮತ್ತು ಟೀಕೆಗಳು ಕೇಳಿಬಂದಿದ್ದವು. ಆದರೆ ಇವೆಲ್ಲವನ್ನೂ ಮೀರಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸುವ ಮೂಲಕ ಜೋಡಿ ಹೊಸ ಜೀವನಕ್ಕೆ ಸಜ್ಜಾಗಿದೆ. ಇದನ್ನೂ ಓದಿ: ಶಿಶಿರ್ – ಐಶ್ವರ್ಯ ಮದುವೆ ಡೇಟ್ ಫಿಕ್ಸ್
ಅದ್ದೂರಿ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಸೆಲೆಬ್ರಿಟಿಗಳ ಸಂಭ್ರಮ
ಭಾನುವಾರ ಬೆಳಗ್ಗೆ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ನೆರವೇರಿದೆ. ರಾತ್ರಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಸಂಭ್ರಮದಲ್ಲಿ ಸ್ಯಾಂಡಲ್ವುಡ್ನ ಗಣ್ಯರು, ಕಿರುತೆರೆ ಕಲಾವಿದರು ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಭಿಮಾನಿಗಳ ನೆಚ್ಚಿನ ‘ಐಶಿರ್’ ಜೋಡಿಯ ಈ ವಿಶೇಷ ನಿಶ್ಚಿತಾರ್ಥದ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ. ಇದನ್ನೂ ಓದಿ: ತ.ನಾಡು ಸಚಿವ ಸಫಾರಿ ನಡೆಸಿದ್ದು ನಿಜ; ಆದ್ರೆ ವಿಡಿಯೋ ಬಂಡೀಪುರದ್ದಲ್ಲ – ಡಿಸಿಎಫ್


