ಕೊಪ್ಪಳ: ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕಗಳ ವಿತರಣೆ ಸಮರ್ಪಕವಾಗಿ ಆಗಿಲ್ಲ ಎಂದು ಮನವಿ ಸಲ್ಲಿಸಲು ಬಂದಿದ್ದ ಎಸ್ಡಿಎಂಸಿ ಸಮನ್ವಯ ಸಮಿತಿ ಅಧ್ಯಕ್ಷರೊಬ್ಬರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಎರಡು ದಿನಗಳ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೊಪ್ಪಳ (Koppala) ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಎಸ್ಡಿಎಂಸಿ ಸಮನ್ವಯ ಸಮಿತಿ ಅಧ್ಯಕ್ಷ ದೇವರಾಜ ಕಿನ್ನಾಳ ಅವರು ಸಚಿವರನ್ನ ಭೇಟಿಯಾಗಿ ಸರ್ಕಾರಿ ಶಾಲೆಗಳಿಗೆ ಇನ್ನೂ ಸಮರ್ಪಕವಾಗಿ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕಗಳ ವಿತರಣೆಯಾಗಿಲ್ಲ ಎಂಬ ವಿಷಯವನ್ನ ಪ್ರಸ್ತಾಪಿಸಿ ಮನವಿ ಸಲ್ಲಿಸಲು ಮುಂದಾಗಿದ್ದರು.
ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ದೇವರಾಜ ಕಿನ್ನಾಳ ಅವರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ. ಮನವಿ ಸಲ್ಲಿಸಲು ಬಂದಿದ್ದ ದೇವರಾಜ ಕಿನ್ನಾಳ ಅವರೊಂದಿಗೆ ಸಚಿವರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ʻಯಾವನಯ್ಯ ಕೊಡ್ತಾನೆ? ಕೇಳುವ ಯೋಗ್ಯತೆ ಇಲ್ಲ ಅಂದರೆ ಸುಮ್ಮನಿರಬೇಕುʼ ಎಂದು ಸಚಿವರು ಹೇಳಿರುವುದಾಗಿ ವರದಿಯಾಗಿದೆ. ಈ ಮಾತುಗಳ ಹಿನ್ನೆಲೆಯಲ್ಲಿ ದೇವರಾಜ ಕಿನ್ನಾಳ ಅವರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಭಾಷಣೆಯಲ್ಲಿ ಏನಿದೆ?
ಮಧು ಬಂಗಾರಪ್ಪ : ಯಾವನ್ನಯ್ಯಾ ಕೋಡ್ತಾನೆ, ಕೇಳೋ ಯೋಗ್ಯತೆ ಇದ್ಯಾ ನಿನಗೆ…? ಕೇಳುವ ಯೋಗ್ಯತೆ ಇಲ್ಲ ಅಂದರೆ ಸುಮ್ಮನಿರಬೇಕು…
ದೇವರಾಜ ಕಿನ್ನಾಳ : ಹೇಳಿ ಸರ್…
ಮಧು ಬಂಗಾರಪ್ಪ : ಮರ್ಯಾದೆಯಿಂದ ಕೇಳಬೇಕು.. ಯಾವುದರಲ್ಲಿ ಮಕ್ಕಳು ಅಡ್ಮಿಶನ್ ಮಾಡ್ತಾರೆ..
ದೇವರಾಜ ಕಿನ್ನಾಳ: ಅರ್ಧ ವರ್ಷದವರೆಗೂ ನಾನು ತಗೊಂಡು ಬಂದು ಅಡ್ಮಿಶನ್ ಮಾಡ್ಸಿದಿನಿ ಸರ್
ಮಧು ಬಂಗಾರಪ್ಪ: ಹೇ ಬಾಯಿ ಮುಚ್ಕೊಂಡು ಕೇಳಯ್ಯ ಇಲ್ಲಿ… ನಾನು ಕೇಳೋದಕ್ಕೂ ಉತ್ತರ ಕೊಡು.. ಯಾವಾಗ ಅಡ್ಮಿಶನ್ ಮಾಡ್ಸಿದ್ದೀಯಾ
ದೇವರಾಜ ಕಿನ್ನಾಳ: ಜುಲೈನಿಂದ
ಮಧು ಬಂಗಾರಪ್ಪ: ಜುಲೈ… ಏಯ್ ತೆಗೆಯೋ ಅವನ್ಯಾವನು… ಬರೀ ಇದೇ ಕೆಲಸನಾ ನಿಮ್ದು…. ನಾನು ಹೇಳ್ತೀನಿ ನಿಮಗೆ … ಅದು ಎಷ್ಟು ದಿನ ಬೇಕಾಗುತ್ತೆ ನಿಮಗೆ ಪ್ರಿಂಟ್ ಮಾಡೋಕೆ… ಒಂದು ನಿಮಿಷ ಹೇಳೋದು ಕೇಳಯ್ಯಾ…. ಮ್ಯಾಜಿಕ್ ಮಾಡೋಕೆ ಆಗುತ್ತಾ… ಪ್ರಿಂಟ್ ಆಗಬೇಕು… ಪ್ರಿಂಟ್ ಆಗೋಕೆ ಟೈಂ ಆಗುತ್ತೆ…
ದೇವರಾಜ ಕಿನ್ನಾಳ : 50 ಸಾವಿರ…
ಮಧು ಬಂಗಾರಪ್ಪ : ಹೌದಯ್ಯ… 42 ಸಾವಿರ ಮಕ್ಕಳು ಎಕ್ಸಾಂ ಬಂದಿದ್ದಾರೆ… ನಿನಗೆ ತಲೆಗೆ ಹೋಗ್ತಿಲ್ಲ…. ನಿನಗೆ ಹೇಳೋದೆ ವೆಸ್ಟ್.

