– ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರೋ ರಾಜಕಾರಣಿಯಲ್ಲ ನಾನು
ಕೊಪ್ಪಳ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ಅಧಿಕೃತ ನಿವಾಸದ ಗೃಹಪ್ರವೇಶ ಹಾಗೂ ಔತಣಕೂಟದಲ್ಲಿ ಬಿಜೆಪಿ ಶಾಸಕರು ಭಾಗಿಯಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhana Reddy) ತಿರುಗೇಟು ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡಿದ ಅವರು, ನಾನು ಬೇರೆಯವರ ರೀತಿ ಹಿಂದಿನ ಬಾಗಿಲಿನಿಂದ ಹೋಗಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ನೇರವಾಗಿ ರಾಜಕಾರಣ ಮಾಡುವವನು. ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿ ಜನಾರ್ದನ ರೆಡ್ಡಿಯದ್ದಲ್ಲ ಎಂದು ವಿಜಯೇಂದ್ರ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಾನೊಬ್ಬ ಶಾಸಕನಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಬಿಜೆಪಿ ಶಾಸಕರು ಕಾರ್ಯಕ್ರಮಕ್ಕೆ ಹೋಗ ಬಾರದು ಎಂಬ ನಿರ್ಧಾರ ಪಕ್ಷದಲ್ಲಿದ್ದರೆ, ಒಂದು ದಿನ ಮುಂಚಿತವಾಗಿಯೇ ವಾಟ್ಸಪ್ ಗ್ರೂಪಲ್ಲಿ ಸಂದೇಶ ಹಾಕಿ ತಿಳಿಸಬಹುದಿತ್ತು. ಯಾವುದೇ ಬಿಜೆಪಿ ಶಾಸಕರು ಹೋಗಬಾರದು ಎಂದು ಸೂಚನೆ ನೀಡಬಹುದಿತ್ತು. ಮುಖ್ಯಮಂತ್ರಿಗಳು ಆಹ್ವಾನಿಸಿದ ಹಿನ್ನೆಲೆ ಶಾಸಕರಾಗಿ ಕಾರ್ಯಕ್ರಮಕ್ಕೆ ಹೋಗಿದ್ದೇವೆಯೇ ಹೊರತು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯೇಂದ್ರ ಅವರಿಗೆ ಈ ವಿಚಾರದಲ್ಲಿ ಯಾಕೆ ಆ ರೀತಿ ಅನಿಸಿದೆಯೋ ಗೊತ್ತಿಲ್ಲ. ಅವರು ಅಂತಹ ಹೇಳಿಕೆ ಯಾಕೆ ನೀಡಿದ್ದಾರೆ ಎಂಬುದು ಅವರಿಗೇ ತಿಳಿದಿರಬೇಕು. ಹಿರಿಯ ನಾಯಕನಾಗಿ ಹಾಗೂ ಶಾಸಕನಾಗಿ ಮುಖ್ಯಮಂತ್ರಿಗಳು ಆಹ್ವಾನಿಸಿದಾಗ ಶುಭಾಶಯ ತಿಳಿಸಲು ಹೋಗಿದ್ದೇನೆ. ಹಿರಿಯ ನಾಯಕರು ಮತ್ತು ಶಾಸಕರು ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಿರುವುದನ್ನು ಈ ರೀತಿ ಅರ್ಥೈಸಿರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಕಾರ್ಯಕ್ರಮಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳೆಲ್ಲವೂ ಮಾಧ್ಯಮಗಳಲ್ಲಿ ಬಹಿರಂಗವಾಗಿರುತ್ತವೆ. ಈ ಬಗ್ಗೆ ವಿಜಯೇಂದ್ರ ಅವರಿಗೆ ಪ್ರಶ್ನೆಗಳಿದ್ದರೆ ಸದನ ನಡೆಯುವ ಸಂದರ್ಭದಲ್ಲಿ ಪ್ರಶ್ನೆ ಮಾಡಬಹುದು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

